ಬೆಂಗಳೂರು:ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಗಳು, ಕೆಸರಿನಲ್ಲಿ ಸಿಕ್ಕಿ ಹಾಕಿಕೊಳ್ಳುವ ವಾಹನಗಳು, 2 ಕಿ.ಮೀ. ದೂರಸಾಗಲು 40 ನಿಮಿಷ ರಸ್ತೆಯಲ್ಲೇ ಕಳೆಯಬೇಕಾದ ಸಂಕಷ್ಟ ಎದುರಿಸುತ್ತಿರುವ ಜನ..
ಬೆಳ್ಳಂದೂರು ವಾರ್ಡ್‌ನಲ್ಲಿ ಈ ದೃಶ್ಯಗಳು ಸಾಮಾನ್ಯವಾಗಿವೆ. ನಾಲ್ಕು ತಿಂಗಳಿನಿಂದ ಜನ ಇದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮಳೆ ಬಂದರೆ ‘ಗೃಹ ಬಂಧನ’ ಅನುಭವಿಸಬೇಕಾದ ಸ್ಥಿತಿಯಲ್ಲಿ ಸ್ಥಳೀಯರಿದ್ದಾರೆ. ಒಳಚರಂಡಿ ಮತ್ತು ನೀರು ಸಂಪರ್ಕ ಕಲ್ಪಿಸಲು ಜಲಮಂಡಳಿ ರಸ್ತೆಗಳನ್ನು ಅಗೆದಿದೆ. ಆದರೆ, ಕಾಮಗಾರಿ ಪೂರ್ಣಗೊಂಡ ನಂತರ ರಸ್ತೆ ದುರಸ್ತಿ ಮಾಡಿಸಿಲ್ಲ.
‘ರಸ್ತೆ ದುರಸ್ತಿ ಮಾಡಲು ಬಿಬಿಎಂಪಿಗೆ ಹಣ ನೀಡಲಾಗಿದ್ದು, ನಮ್ಮ ಜವಾಬ್ದಾರಿ ಮುಗಿದಿದೆ’ ಎಂಬ ಉತ್ತರ ಜಲಮಂಡಳಿಯದ್ದು. ‘ರಸ್ತೆಯನ್ನು ಸಹಜ ಸ್ಥಿತಿಗೆ ತರುವಷ್ಟು ಅನುದಾನ ನಮ್ಮಲ್ಲಿಲ್ಲ. ಜಲ ಮಂಡಳಿ ನೀಡಿದ ಹಣ ರಸ್ತೆ ದುರಸ್ತಿಗೆ ಸಾಲುವುದಿಲ್ಲ’ ಎಂದು ಬಿಬಿಎಂಪಿ ಹೇಳುತ್ತಿದೆ. ಜಲಮಂಡಳಿ–ಬಿಬಿಎಂಪಿ ನಡುವಿನ ಹಗ್ಗಜಗ್ಗಾಟದಲ್ಲಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
‘ವಾರ್ಡ್‌ನಲ್ಲಿ ಸುಮಾರು 190 ಕಿ.ಮೀ. ಉದ್ದದ ರಸ್ತೆಗಳಿದ್ದು, ಎಲ್ಲವೂ ಹದಗೆಟ್ಟಿವೆ. 26 ಚದರ ಕಿ.ಮೀ. ವ್ಯಾಪ್ತಿಯ ಈ ವಾರ್ಡ್‌ನಲ್ಲಿನ ಎಲ್ಲ ಬಡಾವಣೆಗಳಲ್ಲಿನ ರಸ್ತೆಗಳನ್ನು ಅಗೆಯಲಾಗಿದೆ. ಮಳೆ ಬಂದರೆ ರಸ್ತೆಗಳು ನದಿಗಳಂತಾಗುತ್ತವೆ. ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲ’ ಎಂದು ಬೆಳ್ಳಂದೂರು ಅಭಿವೃದ್ಧಿ ವೇದಿಕೆಯ ವಿಷ್ಣು ಪ್ರಸಾದ್ ದೂರಿದರು.
ಓನರ್ಸ್ ಕೋರ್ಟ್, ಕೆಪಿಸಿ, ಸಿಎಸ್‌ಬಿ, ಜನತಾ, ಹಾಲನಾಯಕನಹಳ್ಳಿ, ಜನ್ನಸಂದ್ರ, ತುಳಸಿ ಲೇಔಟ್‌ನಲ್ಲಿನ ರಸ್ತೆಗಳಲ್ಲದೆ, ಕಸವನಹಳ್ಳಿ ಮುಖ್ಯರಸ್ತೆ, ದೊಡ್ಡಕನ್ನೇಲಿ, ಎಇಟಿ ರಸ್ತೆ, ಹರ್ಲಾಪುರ, ಸರ್ಜಾಪುರ ಮತ್ತು ಬೆಳ್ಳಂದೂರು ಮುಖ್ಯರಸ್ತೆ ಹದಗೆಟ್ಟಿವೆ. ಈ ವಾರ್ಡ್‌ಗೆ ಬಿಎಂಟಿಸಿ ಬಸ್ ಮತ್ತು ಮೆಟ್ರೊ ರೈಲು ಸಂಪರ್ಕ ಇಲ್ಲ. ಬಹುತೇಕರು ಕಾರು ಮತ್ತು ಬೈಕ್‌ಗಳನ್ನೇ ಅವಲಂಬಿಸಿದ್ದಾರೆ. ಸುಗಮ ಸಂಚಾರ ಕನಸು ಎಂಬಂತಾಗಿದೆ ಎನ್ನುತ್ತಾರೆ ಸ್ಥಳೀಯರು.
ವಾರ್ಡ್‌ನಲ್ಲಿ 5 ಎಸ್‌ಇಜೆಡ್
ಬೆಳ್ಳಂದೂರು ವಾರ್ಡ್ ವ್ಯಾಪ್ತಿಯಲ್ಲಿ ಐದು ವಿಶೇಷ ಆರ್ಥಿಕ ವಲಯಗಳಿವೆ (ಎಸ್‌ಇಜೆಡ್). ಈ ಪ್ರದೇಶದಿಂದ 1 ಕಿ.ಮೀ. ದೂರದಲ್ಲಿ ವಿಪ್ರೊ, ಮೈಕ್ರೋಸಾಫ್ಟ್, ರಿಲಯನ್ಸ್ ಜಿಯೊದ ಕೇಂದ್ರ ಕಚೇರಿಗಳಿವೆ. ಆದರೆ, ಈ ಪ್ರದೇಶಗಳ ರಸ್ತೆಯ ಸ್ಥಿತಿ ಮಾತ್ರ ಭೀಕರವಾಗಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ದುರಸ್ತಿಗೆ ಹಣ ಇಲ್ಲ’
‘ಹಣ ಇದ್ದರೆ ತಾನೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯ? ಅನುದಾನವೇ ನೀಡಿರಲಿಲ್ಲ. ಜಲಮಂಡಳಿ ₹5 ಕೋಟಿ ಮಾತ್ರ ನೀಡಿದೆ. ದುರಸ್ತಿಗೆ ₹45 ಕೋಟಿ ಬೇಕು. ಆದರೆ, ಅಷ್ಟು ಹಣ ಬಿಡುಗಡೆಯಾಗಿಲ್ಲ. ಈಗ ಹೊಸ ಸರ್ಕಾರ ಬಂದಿರುವುದರಿಂದ ಅನುದಾನ ಬಿಡುಗಡೆಯಾಗಬಹುದು. ನಂತರ, ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ ಪರಮೇಶ್ವರಯ್ಯ ಹೇಳಿದರು. ವಾರ್ಡ್‌ನ ಪಾಲಿಕೆ ಸದಸ್ಯೆ ಆಶಾ ಸುರೇಶ್ ಅವರನ್ನು ಸಂಪರ್ಕಿಸಲು ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.