ADVERTISEMENT

ಗುಂಡಿ ಮುಚ್ಚಿ ‘ಚಾಂಪಿಯನ್‌’ ಆದ ಹರಳೂರು!

ಜಲಮಂಡಳಿ ಅಗೆದಿದ್ದ ರಸ್ತೆ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ * ದುರಸ್ತಿಗೆ ಒಂದಾದ ನಾಗರಿಕರು

ಮನೋಹರ್ ಎಂ.
Published 1 ಮೇ 2019, 19:46 IST
Last Updated 1 ಮೇ 2019, 19:46 IST
ಹರಳೂರು ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚುತ್ತಿರುವ ಸ್ಥಳೀಯ ನಿವಾಸಿಗಳು
ಹರಳೂರು ರಸ್ತೆಯಲ್ಲಿದ್ದ ಗುಂಡಿಯನ್ನು ಮುಚ್ಚುತ್ತಿರುವ ಸ್ಥಳೀಯ ನಿವಾಸಿಗಳು   

ಬೆಂಗಳೂರು: ನಗರದ ಬೆಳ್ಳಂದೂರು ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಓಡಾಟಕ್ಕಿಂತ ಗುಂಡಿಗಳೇ ಹೆಚ್ಚಾಗಿ ಕಣ್ಣಿಗೆ ಕಾಣುತ್ತಿದ್ದವು. ಅದರಲ್ಲೂ ಹರಳೂರು ರಸ್ತೆ ಎಂದರೆ ಸಾಕು, ಅದರ ಬದಲು ಬೇರೆ ಮಾರ್ಗವನ್ನು ಹುಡುಕಿಕೊಳ್ಳುವುದೇ ಒಳಿತು ಎಂಬ ಮಾತು ಕೇಳಿಬರುತ್ತಿತ್ತು. ಆದರೆ, ಇನ್ನು ಮುಂದೆ ಈ ರಸ್ತೆಯಲ್ಲಿ ನಿರ್ಭಯವಾಗಿ ಸಂಚರಿಸಿ ಎಂದು ಅಭಯ ನೀಡುತ್ತಿದ್ದಾರೆ ಸ್ಥಳೀಯ ಸ್ವಯಂಸೇವಕರು.

ಏಕೆಂದರೆ,‘ಹರಳೂರು ಚಾಂಪಿಯನ್ಸ್‌’ ಸಂಘಟನೆಯ ಕಾರ್ಯಕರ್ತರು ರಸ್ತೆಯಲ್ಲಿನ ಗುಂಡಿಗಳನ್ನೆಲ್ಲ ಶ್ರಮದಾನ ಮಾಡಿ ಮುಚ್ಚುತ್ತಿದ್ದಾರೆ.

ಕಳೆದ ವರ್ಷ ಜಲಮಂಡಳಿಯು ಪೈಪ್‌ಲೈನ್‌ ಅಳವಡಿಕೆ ಕಾಮಗಾರಿಗಾಗಿ ರಸ್ತೆಗಳನ್ನು ಅಗೆದಿತ್ತು. ಆದರೆ ಕಾಮಗಾರಿ ಪೂರ್ಣವಾದರೂ ಗುಂಡಿಗಳು ಹಾಗೇ ಉಳಿದಿದ್ದವು. ಎರಡು ಕಿಲೋಮೀಟರ್‌ ಉದ್ದದ ಈ ರಸ್ತೆಯಲ್ಲಿ ಉದ್ದನೆಯ ಗುಂಡಿಗಳನ್ನು ಕಂಡು ಬೇಸತ್ತ ಚಾಲಕರು ಸುತ್ತಿಕೊಂಡು ಹೋದರೂ ಪರವಾಗಿಲ್ಲ ಎಂದು ಈ ಮಾರ್ಗದತ್ತ ಸುಳಿಯುತ್ತಲೇ ಇರಲಿಲ್ಲ.

ADVERTISEMENT

ಬೆಳ್ಳಂದೂರಿನಿಂದ ಹಾದುಹೋಗುವ ಕೈಕೊಂಡ್ರಹಳ್ಳಿ, ಹರಳೂರು, ಸರ್ಜಾಪುರ ರಸ್ತೆಗಳಲ್ಲಿ ಇಂತಹ ಅಪೂರ್ಣ ಕಾಮಗಾರಿಗಳು ಇನ್ನೂ ಹಲವು ಇವೆ. ಪ್ರಯಾಣಿಕರಿಗೆ ಕಿರಿಕಿರಿ ಉಂ‌ಟು ಮಾಡುತ್ತಿವೆ. ಅಧಿಕಾರಿಗಳ ಮೊರೆ ಹೋದರೂ ರಸ್ತೆ ಸಮಸ್ಯೆಯಾಗಿಯೇ ಉಳಿದಿದೆ. ಬಿಬಿಎಂಪಿ, ಜಲಮಂಡಳಿಗೆ ಸ್ಥಳೀಯರು ದೂರು ಕೊಟ್ಟರೂ ಪರಿಹಾರ ಮಾತ್ರ ಸಿಗಲಿಲ್ಲ. ಯಾರೂ ಹರಳೂರು ರಸ್ತೆಯತ್ತ ಮುಖ ಮಾಡಲಿಲ್ಲ. ಇದರಿಂದ ವಿಚಲಿತರಾಗದ ಸ್ಥಳೀಯರು ತಮ್ಮ ರಸ್ತೆ ಸಮಸ್ಯೆಯನ್ನು ತಾವೇ ಪರಿಹರಿಸಿಕೊಂಡಿದ್ದಾರೆ.

ರಸ್ತೆಯಲ್ಲಿದ್ದ ಗುಂಡಿಗಳನ್ನು ‘ಹರಳೂರು ಚಾಂಪಿಯನ್ಸ್‌’ ಸಂಘಟನೆ ಮೂಲಕ ಮುಚ್ಚಿ ದುರಸ್ತಿ ಮಾಡುವ ಕೆಲಸವನ್ನು ಆರಂಭಿಸಿದೆ. ವಾರಾಂತ್ಯದಲ್ಲಿ ನಿವಾಸಿಗಳೆಲ್ಲ ರಸ್ತೆ ಸರಿಪಡಿಸಲು ಒಗ್ಗೂಡುತ್ತಿದ್ದಾರೆ. ಗುಂಪಿನಲ್ಲಿ 200ಕ್ಕೂ ಅಧಿಕ ಸ‌ದಸ್ಯರಿದ್ದಾರೆ. ಕಾಮಗಾರಿಗೆ ತಗುಲಿದ ₹50 ಸಾವಿರ ವೆಚ್ಚವನ್ನು ತಾವೇ ಭರಿಸಿದ್ದಾರೆ. ಇದರ ಫಲವಾಗಿ ಪೈಪ್‌ಲೈನ್‌ಗೆ ಅಗೆಯಲಾಗಿದ್ದ ಎರಡು ಬೃಹತ್‌ ಗುಂಡಿಗಳು ಕಣ್ಮರೆಯಾಗಿವೆ.

‘ಅಧಿಕಾರಿಗಳಿಗೆ ಕಾದು ಕೂರಲ್ಲ..’
ಈಗಾಗಲೇ ಸ್ವಯಂಸೇವಕರು ಸೇರಿ ಹರಳೂರು ರಸ್ತೆಯಲ್ಲಿದ್ದ ಎರಡು ಗುಂಡಿಗಳನ್ನು ಮುಚ್ಚಿದ್ದೇವೆ. ಇನ್ನೂ ಎಂಟು ಗುಂಡಿಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಅವುಗಳನ್ನೂ ಮುಚ್ಚುತ್ತೇವೆ. ಅಧಿಕಾರಿಗಳಿಗಾಗಿ ನಾವು ಕಾಯುವುದಿಲ್ಲ. ನಮ್ಮ ರಸ್ತೆಯನ್ನು ನಾವೇ ಸರಿಪಡಿಸಿಕೊಳ್ಳುತ್ತೇವೆ ಎನ್ನುತ್ತಾರೆ ಸ್ವಯಂಸೇವಕ ಫಿಲಿಪ್‌ ಪಿಂಟೊ.

ಬೆಳ್ಳಂದೂರು ಸುತ್ತಮುತ್ತಲಿನ ರಸ್ತೆಗಳೆಲ್ಲ ಗುಂಡಿಗಳಿಂದ ತುಂಬಿವೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಈ ಬಗ್ಗೆ ಪಾಲಿಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಅಲೆದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಲ್ಲಿನ ಶಾಸಕರು ಸಹ ಈ ಬಗ್ಗೆ ಗಮನ ಹರಿಸಿಲ್ಲ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೆಳ್ಳಂದೂರು ಮೂಲಸೌಕರ್ಯಗಳನ್ನು ಪಡೆಯುವಲ್ಲಿ ವಂಚಿತವಾಗಿದೆ. ಹೀಗಾಗಿ ನಮ್ಮ ದಾರಿಯನ್ನು ನಾವು ಕಂಡುಕೊಂಡಿದ್ದೇವೆ ಎಂದರು’ ಕಸವನಹಳ್ಳಿ ಪ್ರದೇಶದ ನಿವಾಸಿ ವಿಷ್ಣು ಪ್ರಸಾದ್‌.

*
ಅಧಿಕಾರಿಗಳು ಸ್ಪಂದಿಸುವುದಿಲ್ಲ. ಹೀಗಾಗಿ ಸ್ಥಳೀಯವಾಗಿ ಸಂಘ ಕಟ್ಟಿ ನಮ್ಮ ಸಮಸ್ಯೆಗೆ ನಾವೇ ಪರಿಹಾರ ಕಂಡುಕೊಳ್ಳುವ ಕೆಲಸ ಆರಂಭಿಸಿದ್ದೇವೆ.
-ಅನೂಪ್‌, ಸ್ವಯಂಸೇವಕ, ಹರಳೂರು ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.