ಬೆಂಗಳೂರು: 'ಜಾತಿ, ಅಂತಸ್ತು ಯಾವ್ಯಾವುದೋ ಕಾರಣಕ್ಕೆ ಅವಳಿಗೆ ನಾನು ತಕ್ಕವನಲ್ಲ ಅನಿಸಿರಬೇಕು. ಬಿಟ್ಟು ಬೇರೆಯವರನ್ನು ಮದುವೆಯಾದಳು. ನಾನು ಭಗ್ನಪ್ರೇಮಿಯಾದೆ'.
ಹೀಗೆನ್ನುವಾಗ ಹಿರಿಯ ಸಾಹಿತಿ ಬಿ.ಎಲ್. ವೇಣು ಅವರ ಚೂಪು ಮೀಸೆ ಕಾಲೇಜು ದಿನಗಳ ನೆನಪಿನಲ್ಲಿ ಕಂಪಿಸಿದವು. ಕಣ್ಣಂಚು ತುಸು ಹೆಚ್ಚೇ ಪಸೆಗೂಡಿತ್ತು. ವೇಣು ಮನಸಿನ ಕಹಿಯನ್ನು ಕೊಚ್ಚಿಕೊಂಡು ಹೋಗಲಿಕ್ಕೇ ಎಂಬಂತೆ ಹೊರಗೆ ಜೋರು ಮಳೆ ಸುರಿಯುತ್ತಿತ್ತು.
ಕರ್ನಾಟಕ ಚಲನಚಿತ್ರ ಅಕಾಡೆಮಿ, ಶನಿವಾರ ಆಯೋಜಿಸಿದ್ದ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಸಂವಾದಕ್ಕೆಂದು ಕೂತ ವೇಣು ಮಾತುಗಳಲ್ಲಿ ಸಾಹಿತ್ಯ-ಸಿನಿಮಾ ರಂಗದ ಕುರಿತು ಹಲವು ಸಿನಿಕಹಿ ನೆನಪುಗಳು ಹಾದುಹೋದವು. ವಿಶೇಷವಾಗಿ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್ ಮತ್ತು ಸಿದ್ದಲಿಂಗಯ್ಯ, ನಟ ವಿಷ್ಣುವರ್ಧನ್ ಜತೆಗಿನ ಒಡನಾಟದ ದಿನಗಳನ್ನು ಅವರು ಸ್ಮರಿಸಿಕೊಂಡರು.
'ನಾನು ಸಿನಿಮಾರಂಗಕ್ಕೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಸಾಹಿತಿ ಆಗುತ್ತೇನೆಎಂದೂ ಅಂದುಕೊಂಡಿರಲಿಲ್ಲ. ಕಾಲೇಜು ದಿನಗಳಲ್ಲಿ ಹಾಡುತ್ತಿದ್ದೆ. ವಾದ್ಯಗಳನ್ನು ನುಡಿಸುತ್ತಿದ್ದೆ. ಹಾಗಾಗಿ ಹಿನ್ನೆಲೆ ಗಾಯಕ, ಹೆಚ್ಚೆಂದರೆ ಸಂಗೀತ ನಿರ್ದೇಶಕ ಆಗುತ್ತೇನೆ ಎಂದುಕೊಂಡಿದ್ದೆ. ಆದರೆ ಆದದ್ದೇ ಬೇರೆ' ಎಂದು ಗತಜೀವನದ ಕಡೆಗೊಂದು ಪಕ್ಷಿನೋಟ ಬೀರಿದರು.
ಸಿನಿಮಾಗೂ ಸಾಹಿತ್ಯ ಕ್ಷೇತ್ರಕ್ಕೂ ಇರುವ ಕಂದರ ಮತ್ತು ಅದರಿಂದ ತಾವು ಎದುರಿಸಿದ ತೊಂದರೆಗಳ ಕುರಿತೂ ಅವರು ಮಾತನಾಡಿದರು. 'ಮೊದಲು ನಾನು ಬರೆಯಲು ಪ್ರಾರಂಭಿಸಿದಾಗ ನವ್ಯದ ಯಾವ ವಿಮರ್ಶಕರೂ ನನ್ನನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ನಂತರ ಬಂದ ಬಂಡಾಯ ಚಳವಳಿ ನನ್ನ ಬರವಣಿಗೆಯನ್ನು ಗುರುತಿಸಿತು. ಬಂಡಾಯದಿಂದಲೇ ನಾನು ಬರಹಗಾರನಾಗಿದ್ದು. ಹಾಗಾಗಿ ನಾನು ಐತಿಹಾಸಿಕ ಕಾದಂಬರಿ ಬರೆಯಲಿ, ಪ್ರೇಮಕಥೆಯನ್ನೇ ಬರೆಯಲಿ. ಅದರಲ್ಲಿ ಬಂಡಾಯದ ಒಂದು ಎಳೆ ಇದ್ದೇ ಇರುತ್ತದೆ' ಎಂದು ಅವರು ಹೇಳಿಕೊಂಡರು. ಸಾಹಿತ್ಯದಲ್ಲಷ್ಟೇ ಅಲ್ಲ, ಅವರ ವ್ಯಕ್ತಿತ್ವದಲ್ಲಿಯೂ ಬಂಡಾಯದ ಗುಣ ಇರುವುದು ಅವರ ಮಾತುಗಳಿಂದಲೇ ತಿಳಿಯುವಂತಿತ್ತು.
‘ನಾನು ಸಿನಿಮಾಗೆ ಬರೆಯಲು ಶುರುಮಾಡಿದ ಮೇಲೆ ವಿಮರ್ಶಕರು ನನ್ನ ಪುಸ್ತಕಗಳ ಬಗ್ಗೆ ಬರೆಯುವುದನ್ನೇ ನಿಲ್ಲಿಸಿಬಿಟ್ಟರು. ಹಲವರು ನನ್ನನ್ನು ಸಿನಿಮಾ ಸಾಹಿತಿ ಎಂದು ಗೇಲಿ ಮಾಡಿದರು. ಆದರೆ ಅಂದು ಗೇಲಿ ಮಾಡಿದವರೇ ಇಂದು ಗಾಂಧಿನಗರದಲ್ಲಿ ಸುತ್ತುತ್ತಿದ್ದಾರೆ. ಎಲ್ಲ ಸಾಹಿತಿಗಳಿಗೂ ಸಿನಿಮಾಕ್ಕೆ ಬರೆಯಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದು ಈಡೇರದೇ ಇದ್ದಾಗ ಸಿನಿಮಾಕ್ಕೆ ಬರೆಯುವವರ ಮೇಲೆ ತಣ್ಣನೆಯ ಕ್ರೌರ್ಯ ತೋರಲು ಶುರುಮಾಡುತ್ತಾರೆ. ಸಾಹಿತ್ಯವಲಯದಲ್ಲಿ ಸಿನಿಮಾಕ್ಕೆ ಸಾಹಿತ್ಯ ಬರೆಯುವವರನ್ನು ಅಸ್ಪಶ್ಯರಂತೆ ಕಾಣುವ ರೂಢಿ ಇದೆ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
'ಮಠಗಳು ದೇಶಕ್ಕೆ ಶಾಪ' ಎಂಬ ಕೃತಿ ಬರೆದು ಮಠಾದೀಶರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ನೆನಪಿಸಿಕೊಂಡ ಅವರು, 'ಬದುಕಿಗೆ ದೇವರು, ಧರ್ಮ, ಜಾತಿ, ಮಠಗಳು ಬೇಕಿಲ್ಲ. ಅವುಗಳಿಂದ ದೂರವಿದ್ದಷ್ಟೂ ಮನುಷ್ಯ ನೆಮ್ಮದಿಯಿಂದ ಇರುತ್ತಾನೆ‘ ಎಂದು ಪ್ರತಿಪಾದಿಸಿದರು.
ಹಲವು ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವ ವೇಣು ಅವರ ಪ್ರಕಾರ ಕಾದಂಬರಿಗಳು ಐತಿಹಾಸಿಕ ಸತ್ಯವನ್ನು ಹೇಳಬೇಕಿಲ್ಲ. 'ಇತಿಹಾಸವನ್ನು ತಿಳಿದುಕೊಳ್ಳಲು ಇತಿಹಾಸದ ಸಂಶೋಧನೆಯನ್ನು ಓದಿಕೊಳ್ಳಬಹುದು. ಅದಕ್ಕೆ ಕಾದಂಬರಿ ಬೇಕಿಲ್ಲ. ಇತಿಹಾಸಕಾರರು ವೇಣು ಸುಳ್ಳು ಸುಳ್ಳು ಬರೆಯುತ್ತಾರೆ ಎಂದು ಹೇಳುತ್ತಿರುತ್ತಾರೆ. ಆದರೆ ನಾನು ಯಾವತ್ತಿಗೂ ಇತಿಹಾಸಕಾರರನ್ನು ಗಮನದಲ್ಲಿಟ್ಟುಕೊಂಡು ಕಾದಂಬರಿ ಬರೆಯುವುದಿಲ್ಲ. ನನಗೆ ಓದುಗರು ಮುಖ್ಯ. ಇತಿಹಾಸಕಾರರ ಪ್ರಕಾರ ಸುಳ್ಳಾಗಿರುವುದೇ ಸಾಹಿತ್ಯದಲ್ಲಿ ಸೃಜನಶೀಲತೆಯಾಗಿರುತ್ತದೆ. ಕಾದಂಬರಿಯ ನಾಯಕನನ್ನು ವೈಭವೀಕರಿಸುವುದು ಅನಿವಾರ್ಯ' ಎನ್ನುವುದು ಅವರ ಸ್ಪಷ್ಟ ಅಭಿಪ್ರಾಯ.
ಗುಡಿಹಳ್ಳಿ ನಾಗರಾಜ್ ಸಂವಾದ ನಡೆಸಿಕೊಟ್ಟರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಜರಿದ್ದರು.
ಸಂವಾದಕ್ಕೂ ಮುನ್ನ ಬಿ.ಎಲ್. ವೇಣು ಅವರ ಕುರಿತು ಕೆ.ಎಸ್. ಪರಮೇಶ್ವರ್ ರೂಪಿಸಿದ ಸಾಕ್ಷ್ಯಚಿತ್ರವನ್ನೂ ಪ್ರದರ್ಶಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.