ಬೆಂಗಳೂರು: ‘ಬಿಇಎಂಎಲ್ ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು’ ಎಂದು ಒತ್ತಾಯಿಸಿ ಕಂಪನಿಯ ಉದ್ಯೋಗಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಬಿಇಎಂಎಲ್ ಉದ್ಯೋಗಿಗಳ ಒಕ್ಕೂಟದ ಸಹಯೋಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪುರಭವನ ಎದುರು ಸೇರಿದ್ದ ಪ್ರತಿಭಟನಾಕಾರರು, ‘ಖಾಸಗೀಕರಣ ಪ್ರಕ್ರಿಯೆ ಸ್ಥಗಿತಗೊಳಿಸದಿದ್ದರೆ ನವೆಂಬರ್15ರಂದು ರಾಜಭವನ ಚಲೊ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ದೇಶದ ಲಾಭದಾಯಕ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಒಂದಾದ ಬಿಇಎಂಎಲ್ ಖಾಸಗೀಕರಣಗೊಳಿಸುತ್ತಿರುವುದು ಖಂಡನೀಯ.ಇದರ ವಿರುದ್ಧ ವಾರದಿಂದಲೇ ಸಾಂಕೇತಿಕ ಪ್ರತಿಭಟನೆ ಆರಂಭಿಸಲಾಗಿದೆ. ಉದ್ಯೋಗಿಗಳು ಸರದಿಯಲ್ಲಿ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮುಗಿದ ಬಳಿಕವೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಹೇಳಿದರು.
ಬಿಇಎಂಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ದೊಮ್ಮಲೂರು ಶ್ರೀನಿವಾಸ್ ರೆಡ್ಡಿ, ಕೆಜಿಎಫ್ ಯೂನಿಯನ್ ಅಧ್ಯಕ್ಷ ಆಂಜನೇಯ ರೆಡ್ಡಿ,ಮುಖ್ಯ ಕಚೇರಿಯ ಸಂಘದ ಅಧ್ಯಕ್ಷ ಜೆ.ಮುನಗಪ್ಪ, ಮೈಸೂರು ಯೂನಿಯನ್ ಅಧ್ಯಕ್ಷ ಮುನಿರೆಡ್ಡಿ ಪ್ರತಿಭಟನೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.