ಬೆಂಗಳೂರು: ಮೂರು ದಿನಗಳ ಬೆಳಕಿನ ಹಬ್ಬ ನರಕ ಚತುರ್ದಶಿಯೊಂದಿಗೆ ಸೋಮವಾರ ಆರಂಭ ವಾಯಿತು. ದೀಪಾವಳಿ ನಿಮಿತ್ತ ಮನೆ, ಅಂಗಡಿ ಹಾಗೂ ಕಚೇರಿಗಳು ತಳಿರು–ತೋರಣಗಳಿಂದ ಕಂಗೊಳಿಸುತ್ತಿದ್ದವು.
ಕಳೆದ ಎರಡು ವರ್ಷ ಕೋವಿಡ್ ಕಾರಣದಿಂದ ಎಲ್ಲರೂ ಸರಳವಾದ ದೀಪಾವಳಿ ಆಚರಿಸಿದ್ದರು. ಈ ಬಾರಿ ಸಿಲಿಕಾನ್ ಸಿಟಿಯ ಜನರಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ನಗರದ ಅಂಗಡಿಗಳಲ್ಲಿ ಬೆಳಿಗ್ಗೆಯೇ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ವರ್ಷವಿಡೀ ವ್ಯಾಪಾರ, ವಹಿವಾಟು ಚೆನ್ನಾಗಿ ನಡೆಯಲಿ ಎಂದು ವ್ಯಾಪಾರಿಗಳು ಲಕ್ಷ್ಮೀದೇವಿಯಲ್ಲಿ ಪ್ರಾರ್ಥಿಸಿದರು. ಸಂಜೆ ಮನೆ–ದೇಗುಲಗಳ ಮುಂದೆ ಬೆಳಗಿದ ಸಾಲು ದೀಪಗಳು ಎಲ್ಲೆಡೆ ಆಧ್ಯಾತ್ಮಿಕ ವಾತಾವರಣ ಸೃಷ್ಟಿಸಿದವು.
ಖರೀದಿ ಭರಾಟೆ: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ದಿನಸಿ, ತರಕಾರಿ, ಕಬ್ಬು, ಬಾಳೆ ಕಂದು ಹೂವು–ಹಣ್ಣುಗಳ, ಬಟ್ಟೆ ಖರೀದಿಯ ಭರಾಟೆ ಜೋರಾಗಿತ್ತು. ಆಲಂಕಾರಿಕ ವಸ್ತುಗಳು, ಹಣತೆ ಮತ್ತು ಆಕಾಶಬುಟ್ಟಿಗಳ ಖರೀದಿ ಸಾಮಾನ್ಯವಾಗಿತ್ತು. ಜನ ಪಟಾಕಿ ಖರೀದಿಗೆ ಮುಗಿಬಿದ್ದಿದ್ದರು.
ಹಬ್ಬದ ಅಂಗವಾಗಿ ಪ್ರಮುಖ ಅಂಗಡಿಗಳು ಗ್ರಾಹಕರನ್ನು ಸೆಳೆಯಲು ಹಲವು ರಿಯಾಯಿತಿಗಳನ್ನು ಘೋಷಿಸಿದ್ದವು. ಬಂಗಾರದ ಅಂಗಡಿ, ಬಟ್ಟೆ ಅಂಗಡಿ, ಎಲೆಕ್ಟ್ರಾನಿಕ್ ಉಪಕರಣಗಳ ಮಳಿಗೆಗಳು ಹಾಗೂ ಸಿಹಿ ತಿನಿಸುಗಳ ಮಳಿಗೆಗಳು ಗ್ರಾಹಕರಿಂದ ತುಂಬಿದ್ದವು.
ಸಂಜೆ ನಂತರ ಮನೆ, ಮನೆಗಳಲ್ಲಿ ಕಂಗೊಳಿಸಿದ ದೀಪಗಳು ಬೆಳಕಿನ ರಂಗಿನ ಲೋಕವನ್ನು ಸೃಷ್ಟಿಸಿದವು. ಹೊಸ್ತಿಲು, ಕಿಟಕಿ, ಕಾಂಪೌಂಡ್ ಮೇಲೆಯೂ ವಿವಿಧ ವಿನ್ಯಾಸದ ದೀಪಗಳನ್ನು ಹಚ್ಚಿ, ಅವಕ್ಕೆ ಹೂವಿನ ಅಲಂಕಾರ ಮಾಡಿ ಸಂಭ್ರಮಿಸಿದರು.
ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಸೋಮವಾರ ಸಂಜೆಯ ಬಳಿಕ ಪಟಾಕಿ ಸದ್ದು ಕೂಡ ಅಲ್ಲಲ್ಲಿ ಕೇಳಿಬಂತು.
ಮಂಗಳವಾರ ಮತ್ತು ಬುಧವಾರ ದೀಪಾವಳಿ ಹಬ್ಬ ಇರುವುದರಿಂದ ಕೆಲವರು ಸೋಮವಾರವೇ ಹಬ್ಬಕ್ಕೆ ಬೇಕಾದ ಪಟಾಕಿ, ದೀಪಗಳ ಖರೀದಿ ಯಲ್ಲಿ ತೊಡಗಿದ್ದರು. ಪರಿಸರಸ್ನೇಹಿ ಮಣ್ಣಿನ ದೀಪಗಳಿಗೆ ಬೇಡಿಕೆ ಇತ್ತು. ಪೂಜಾ ಸಾಮಗ್ರಿಗಳ ಜತೆಗೆ ಬಾಳೆ ಕಂದು, ಬೂದುಗುಂಬಳ, ಹೂವು, ನಿಂಬೆಹಣ್ಣುಗಳ ಮಾರಾಟವೂ ಜೋರಾಗಿತ್ತು.
ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿ
ಮಲ್ಲೇಶ್ವರ, ಬಸವನಗುಡಿ, ಹೆಬ್ಬಾಳ, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್, ಗಾಯತ್ರಿನಗರ, ಗಾಂಧಿ ಬಜಾರ್, ವೈಟ್‌ಫೀಲ್ಡ್, ಇಂದಿರಾನಗರದಂತಹ ಪ್ರಮುಖ ರಸ್ತೆಯ ಪಾದಚಾರಿ ಮಾರ್ಗ, ಮೆಟ್ರೊ ಸೇತುವೆಯ ಕೆಳಭಾಗ, ಮೇಲ್ಸೇತುವೆಗಳ ಕೆಳಗಡೆ ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿಯಾಗಿವೆ. ಗ್ರಾಮೀಣ ಭಾಗದ ರೈತರು, ವ್ಯಾಪಾರಿಗಳು ಬಂದು ಬೂದುಗುಂಬಳ, ಮಾವಿನ ಎಲೆ, ತರಕಾರಿ, ಹೂವು–ಹಣ್ಣು ಹಣತೆಗಳು, ಆಕಾಶಬುಟ್ಟಿ ಮತ್ತು ಆಲಂಕಾರಿಕ ವಸ್ತುಗಳ ಮಾರಾಟ ಮಾಡುತ್ತಿರುವುದು ಕಂಡುಬಂದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.