ಬೆಂಗಳೂರು: ಪೊಲೀಸ್ ಸಮವಸ್ತ್ರ, ಸೊಂಟದಲ್ಲಿ ಪಿಸ್ತೂಲ್, ಕೈಯಲ್ಲಿ ಲಾಠಿ... - ಹೀಗೆ ಡಿಸಿಪಿ ಕಚೇರಿಗೆ ವಿಶೇಷ ಅತಿಥಿಯೊಬ್ಬರ ಆಗಮನವಾಯಿತು. ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ, ಹೊಸ ಅಧಿಕಾರಿ ಬಂದಿರಬಹುದು ಎಂದು ಭಾವಿಸಿ, ಸ್ವಾಗತ ಕೋರಿದರು. ಇದು ಉತ್ತರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಕಂಡುಬಂದ ದೃಶ್ಯಾವಳಿಗಳು.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ 10 ವರ್ಷದ ಬಾಲಕ ಮಲ್ಲಿಕಾರ್ಜುನ್, ಪೊಲೀಸ್ ಅಧಿಕಾರಿ ಆಗುವ ಕನಸು ಕಂಡಿದ್ದ. ಒಂದು ದಿನದ ಮಟ್ಟಿಗೆ ಪೊಲೀಸ್ ಅಧಿಕಾರಿ ಮಾಡುವ ಮೂಲಕ ಆತನ ಕಂಡ ಕನಸನ್ನು ಉತ್ತರ ವಿಭಾಗ ಡಿಸಿಪಿ ಸೈದುಲು ಅಡಾವತ್ ನನಸು ಮಾಡಿದರು.
ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಲ್ಲಿಕಾರ್ಜುನ್, ಪೊಲೀಸ್ ಆಗಬೇಕೆಂಬ ಆಸೆಯನ್ನು ಪೋಷಕರಲ್ಲಿ ಹೇಳಿಕೊಂಡಿದ್ದ. ಬಾಲಕನ ಆಸೆಯನ್ನು ಪೋಷಕರು ಅಸ್ಪತ್ರೆಯ ಆಡಳಿತ ಮಂಡಳಿಗೆ ತಿಳಿಸಿದ್ದರು.
‘ಬೆಂಗಳೂರು ಪರಿಹಾರ ಸಂಸ್ಥೆ’ ಸಹಯೋಗದಲ್ಲಿ ಮಲ್ಲಿಕಾರ್ಜುನ್‌ಗೆ ಪೊಲೀಸ್ ಸಮವಸ್ತ್ರ ತೊಡಿಸಿ ಕಚೇರಿಗೆ ಜೀಪ್‌ನಲ್ಲಿ ಬರುವ ವ್ಯವಸ್ಥೆ ಮಾಡಲಾಯಿತು. ಡಿಸಿಪಿ ಕುಳಿತುಕೊಳ್ಳುವ ಕುರ್ಚಿಯಲ್ಲಿ ಆತನನ್ನು ಕೂರಿಸಲಾಯಿತು. ನಂತರ ಬಾಲಕನಿಗೆ ಹೂಗುಚ್ಛ ನೀಡಿ ಪೊಲೀಸ್ ಸಿಬ್ಬಂದಿ ಸ್ವಾಗತಿಸಿದರು. ಪೊಲೀಸ್ ಬ್ಯಾಟನ್ ಮೂಲಕ ಗೌರವ ಸೂಚಿಸಲಾಯಿತು.
‘ದೊಡ್ಡವನಾದ ಮೇಲೆ ಡಿಸಿಪಿ ಆಗುತ್ತೇನೆ’ ಎಂದು ಮಲ್ಲಿಕಾರ್ಜುನ್ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ.
ನಂತರ, ಕಚೇರಿಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಸ್ಪರ್ಶಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡ. ಆರೋಪಿಗಳನ್ನು ಇರಿಸುವ ಸೆಲ್‌ಗೂ ಹೋಗಿ ವೀಕ್ಷಿಸಿದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.