ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ₹1.34 ಕೋಟಿ ನಗದು ವಶ, ಪಕ್ಷಗಳ ಕೆಸರೆರಚಾಟ

ಕಾರು, ಬೈಕ್‌ಗಳಿಂದ ಹಣ ಸ್ಥಳಾಂತರಿಸುವ ವೇಳೆ ಅಧಿಕಾರಿಗಳಿಂದ ದಾಳಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 13:15 IST
Last Updated 13 ಏಪ್ರಿಲ್ 2024, 13:15 IST
<div class="paragraphs"><p>ಬೆಂಗಳೂರಿನ ಜಯನಗರದಲ್ಲಿ ಶನಿವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ನಗದು&nbsp;</p></div>

ಬೆಂಗಳೂರಿನ ಜಯನಗರದಲ್ಲಿ ಶನಿವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿರುವ ನಗದು 

   

ಬೆಂಗಳೂರು: ಜಯನಗರ ನಾಲ್ಕನೇ ಹಂತದ ಬಳಿ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ ₹ 1.34 ಕೋಟಿ ನಗದನ್ನು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಶನಿವಾರ ಮಧ್ಯಾಹ್ನ ವಶಪಡಿಸಿಕೊಂಡಿದ್ದಾರೆ.

ವಾಹನಗಳಲ್ಲಿ ಹಣ ಸಾಗಿಸುತ್ತಿರುವ ಮಾಹಿತಿ ಚುನಾವಣಾಧಿಕಾರಿ ಮುನೀಶ್‌ ಮೌದ್ಗಿಲ್‌ ಅವರಿಗೆ ಲಭಿಸಿತ್ತು. ಅವರು ಮಾದರಿ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿ ನಿಖಿತಾ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರು. ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನಗಳಲ್ಲಿದ್ದ ಹಣವನ್ನು ಫಾರ್ಚೂನರ್‌ ಕಾರ್‌ಗೆ ಸ್ಥಳಾಂತರಿಸುವ ಪ್ರಯತ್ನದಲ್ಲಿದ್ದಾಗಲೇ ಸ್ಥಳಕ್ಕೆ ತೆರಳಿದ ಅಧಿಕಾರಿ, ನಗದನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

‘ದ್ವಿಚಕ್ರ ವಾಹನದಲ್ಲಿದ್ದ ಹಣದ ಚೀಲವನ್ನು ನಿಖಿತಾ ವಶಕ್ಕೆ ಪಡೆಯುತ್ತಿದ್ದಂತೆಯೇ ಮರ್ಸಿಡೀಸ್‌ ಬೆಂಝ್‌ ಮತ್ತು ವೋಕ್ಸ್‌ವ್ಯಾಗನ್‌ ಪೋಲೊ ಕಾರುಗಳನ್ನು ಬಿಟ್ಟು ಫಾರ್ಚೂನರ್‌ ಕಾರಿನಲ್ಲಿಯೇ ಹಲವರು ಪರಾರಿಯಾದರು. ಎರಡೂ ಕಾರುಗಳ ಕಿಟಕಿ ಗಾಜು ಒಡೆದು ನಗದು ಇದ್ದ ಚೀಲಗಳನ್ನು ವಶಕ್ಕೆ ಪಡೆಯಲಾಯಿತು’ ಎಂದು ಮುನೀಶ್‌ ಮೌದ್ಗಿಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮರ್ಸಿಡೀಸ್‌ ಬೆಂಝ್‌ ಕಾರನ್ನು ಸೋಮಶೇಖರ್‌ ಎಂಬುವವರ ಹೆಸರಿನಲ್ಲಿ ಶುಕ್ರವಾರವಷ್ಟೇ ನೋಂದಣಿ ಮಾಡಿಸಿದ್ದು, ನೋಂದಣಿ ಸಂಖ್ಯೆಯ ಫಲಕ ಅಳವಡಿಸಿಲ್ಲ. ದ್ವಿಚಕ್ರ ವಾಹನ ಧನಂಜಯ್‌ ಎಂಬುವವರ ಹೆಸರಿನಲ್ಲಿದೆ. ವೋಕ್ಸ್‌ವ್ಯಾಗನ್‌ ಕಾರಿನ ಮಾಲೀಕರ ವಿವರ ಇನ್ನೂ ಪತ್ತೆಯಾಗಿಲ್ಲ ಎಂದು ಮೂಲಗಳು ಹೇಳಿವೆ.

ಒಟ್ಟು ₹ 1,34,09,000 ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜಯನಗರ ಪೊಲೀಸ್‌ ಠಾಣೆಗೆ ಚುನಾವಣಾಧಿಕಾರಿಗಳು ದೂರು ನೀಡಿದ್ದು, ನ್ಯಾಯಾಲಯದ ಅನುಮತಿ ಪಡೆದು ಎಫ್‌ಐಆರ್‌ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪ– ಪ್ರತ್ಯಾರೋಪ: ಹಣ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಆರೋಪ ಅಲ್ಲಗಳೆದಿರುವ ಇದೇ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರ ತಂದೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ‘ವಶಪಡಿಸಿಕೊಂಡ ಹಣಕ್ಕೂ ನಮ್ಮ ಪಕ್ಷಕ್ಕೂ ಸಂಬಂಧ ಇಲ್ಲ. ಬಿಜೆಪಿಯವರು ವಿನಾಕಾರಣ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದಿದ್ದಾರೆ.

ಜಪ್ತಿ ಮಾಡಿದ ಹಣ ಬಿಜೆಪಿಯವರದ್ದು: ರಾಮಲಿಂಗಾ ರೆಡ್ಡಿ

‘ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜಯನಗರದಲ್ಲಿ ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ ಹಣಕ್ಕೂ ನಮಗೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿಯವರು ವಿನಾ ಕಾರಣ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು ‘ಬಿಜೆಪಿಯ ದಾಖಲೆಯಿಲ್ಲದ ಕೋಟ್ಯಂತರ ರೂಪಾಯಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದು ಚುನಾವಣಾ ಬಾಂಡ್‌ ರೂಪದಲ್ಲಿ ಕೊಳ್ಳೆ ಹೊಡೆದ ಪಾಪದ ಹಣ ಇದು’ ಎಂದರು.

‘ಈ ಹಣವನ್ನು ಪ್ರಧಾನಿಯ ಬೆಂಗಳೂರು ಕಾರ್ಯಕ್ರಮಕ್ಕೆ ಜನ ಸೇರಿಸಲು ಬಳಸುವ ಉದ್ದೇಶದಿಂದ ಸಾಗಿಸುತ್ತಿದ್ದರೇ’ ಎಂದು ಪ್ರಶ್ನಿಸಿದರು. ‘ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಚುನಾವಣೆ ನಡೆಸುವುದು ಬಹುಮತ ಬರದಿದ್ದಾಗ ನೂರಾರು ಕೋಟಿ ಹಣ ಹಾಕಿ ಶಾಸಕರು ಸಂಸದರನ್ನು ಖರೀದಿಸುವುದು ಬಿಜೆಪಿ ಜಾಯಮಾನ. ಈಗ ಅವರ ಹಣವಂತೂ ಹೋಗಿದೆ ಮಾನವನ್ನಾದರೂ ಉಳಿಸಿಕೊಳ್ಳಬೇಕು ಎನ್ನುವ ಕಾರಣದಿಂದ ಕಾಂಗ್ರೆಸ್ ಮೇಲೆ ಆಧಾರ ರಹಿತ ಆರೋಪವನ್ನು ಮಾಡುತ್ತಿದ್ದಾರೆ’ ಎಂದರು.

‘ಬೆಂಗಳೂರು ದಕ್ಷಿಣ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಸೋಲುವ ಭಯ ಉಂಟಾಗಿದೆ. ಹೀಗಾಗಿ ಲೂಟಿ ಮಾಡಿದ ಹಣವನ್ನೆಲ್ಲ ಖರ್ಚು ಮಾಡಿಯಾದರೂ ಶತಾಯಗತಾಯ ಗೆಲ್ಲಬೇಕೆಂದು ಬಿಜೆಪಿಯವರು ಹೊರಟಿರುವಂತಿದೆ. ನಾವು ಜನ ಬಲ ನಂಬಿದವರು. ಬಿಜೆಪಿಯಂತೆ ಹಣ ಬಲವನ್ನು ಅಲ್ಲ’ ಎಂದರು.

ವಶಪಡಿಸಿಕೊಂಡ ಹಣ ಕಾಂಗ್ರೆಸ್‌ನದ್ದು: ತೇಜಸ್ವಿ ಸೂರ್ಯ

‘ಜಯನಗರದಲ್ಲಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ನಗದು ಕಾಂಗ್ರೆಸ್‌ನವರದ್ದು. ಹಣ ಸಾಗಿಸುತ್ತಿರುವ ಕುರಿತು ಅಧಿಕಾರಿಗಳಿಗೆ ನಾನೇ ಖುದ್ದಾಗಿ ಮಾಹಿತಿ ನೀಡಿದ್ದೆ’ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಶನಿವಾರ ಬೆಳಿಗ್ಗೆ ದೂರವಾಣಿ ಕರೆಮಾಡಿದ್ದ ವ್ಯಕ್ತಿಯೊಬ್ಬರು ಚುನಾವಣೆಗಾಗಿ ಕಾಂಗ್ರೆಸ್‌ ಅಕ್ರಮವಾಗಿ ಹಣ ಸಾಗಿಸುತ್ತಿರುವ ಮಾಹಿತಿಯನ್ನು ನೀಡಿದ್ದರು. ಕಾಂಗ್ರೆಸ್‌ ನಾಯಕರು ಯಾರಿಂದ ಬಲವಂತದಿಂದ ಹಣ ಪಡೆದಿದ್ದರೋ ಅವರಿಂದಲೇ ಮಾಹಿತಿ ಸೋರಿಕೆಯಾಗಿತ್ತು’ ಎಂದರು. ‘ಮಾಹಿತಿ ಸಿಕ್ಕ ತಕ್ಷಣ ನಾನು ಚುನಾವಣಾಧಿಕಾರಿಗಳ ಗಮನಕ್ಕೆ ತಂದಿದ್ದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಕೆಂಪು ಬಣ್ಣದ ವೋಕ್ಸ್‌ವ್ಯಾಗನ್‌ ಕಾರು ಬೆಂಝ್‌ ಕಾರನ್ನು ತಡೆದು ತಪಾಸಣೆ ನಡೆಸಿದರು. ₹ 1 ಕೋಟಿಗೂ ಹೆಚ್ಚು ನಗದು ಪತ್ತೆಯಾಗಿದೆ’ ಎಂದು ಹೇಳಿದರು.

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಕಾಂಗ್ರೆಸ್‌ನವರಿಗೆ ಅರಿವಾಗಿದೆ. ಹೀಗಾಗಿ ಹಣದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಆರೋಪಿಸಿದರು. ಕೆಲವು ದಿನಗಳ ಹಿಂದೆ ಪಿಸ್ತೂಲ್‌ ಹೊಂದಿದ್ದ ವ್ಯಕ್ತಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣಾ ಪ್ರಚಾರದ ವೇಳೆ ಹಾರ ಹಾಕಿದ್ದ. ಜನರನ್ನು ಭಯಪಡಿಸುವ ಉದ್ದೇಶ ಇದರ ಹಿಂದಿತ್ತು. ಈಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಗೆಲ್ಲಲು ಯತ್ನಿಸುತ್ತಿದ್ದಾರೆ ಎಂದರು. ‘ಬೆಂಗಳೂರು ದಕ್ಷಿಣ ಕ್ಷೇತ್ರದ ಜನರು ಹಣಬಲ ತೋಳ್ಬಲಕ್ಕೆ ಮಣಿಯುವುದಿಲ್ಲ. ನರೇಂದ್ರ ಮೋದಿ ಅವರಿಗಾಗಿ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.