ಬೆಂಗಳೂರು: ನಗರದ ವಿವಿಧೆಡೆ ವಾಹನ ಹಾಗೂ ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ, 76 ಮೊಬೈಲ್ ಹಾಗೂ 9 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಸಿ ಮೊಬೈಲ್ ಕಳವು ಮಾಡುತ್ತಿದ್ದ ದಾಸನಪುರದ ಲಿಖಿನ್ ವಿಶಾಲ್ ಮತ್ತು ವೆರಾಕುಲಾ ಸಾಕಿಮ್ ಎಂಬುವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿ, ₹6.60 ಲಕ್ಷ ಮೌಲ್ಯದ 38 ಮೊಬೈಲ್ ಫೋನ್ ಹಾಗೂ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.
ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳುವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಪೈಪ್‌ಲೈನ್ ರಸ್ತೆಯ ವಾಟರ್ ಟ್ಯಾಂಕ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
‘ಸ್ನೇಹಿತನ ಜತೆ ಸೇರಿ ದ್ವಿಚಕ್ರ ವಾಹನ ಹಾಗೂ ಮೊಬೈಲ್‌ಗಳನ್ನು ಕಳವು ಮಾಡಿದ್ದಾಗಿ ಆರೋಪಿ ತಿಳಿಸಿದ್ದಾನೆ. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಬಚ್ಚಿಟ್ಟಿದ್ದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಯಿತು. ಸಂಬಂಧಪಟ್ಟ ಮಾಲೀಕರಿಗೆ ಏಳು ಮೊಬೈಲ್ ನೀಡಲಾಗಿದೆ. ಉಳಿದ ಮೊಬೈಲ್ ಫೋನ್‌ಗಳ ಮಾಲೀಕರ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಟು ದ್ವಿಚಕ್ರ ವಾಹನ ಜಪ್ತಿ: ಗೋವಿಂದರಾಜ ನಗರ ಠಾಣೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ, ಎಂಟು ದ್ವಿಚಕ್ರ ವಾಹನ ಹಾಗೂ 28 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಹಮ್ಮದ್ ಸೋಹೆಲ್, ಭರತ್, ಹರೀಶ್, ಸಂತೋಷ್, ಸಲ್ಮಾನ್ ಖಾನ್ ಎಂಬುವರನ್ನು ಬಂಧಿಸಿ, ₹5.50 ಲಕ್ಷ ಮೌಲ್ಯದ ಸ್ವತ್ತು ಜಪ್ತಿ ಮಾಡಿದ್ದಾರೆ.
‘ಆರೋಪಿಗಳು ದ್ವಿಚಕ್ರ ವಾಹನ ಕಳವು ಮಾಡಿ ಅವುಗಳನ್ನು ಮೊಬೈಲ್ ಕಳ್ಳತನಕ್ಕೆ ಬಳಸುತ್ತಿದ್ದರು. ದಾರಿಹೋಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ ಬಳಿಕ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.