ಬೆಂಗಳೂರು: ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವ ಜೊತೆಯಲ್ಲಿಯೇ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯೂ ಏರಿಕೆ ಆಗುತ್ತಿದೆ. ಇದರ ಪರಿಣಾಮವಾಗಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಪ್ರಸಕ್ತ ವರ್ಷದ ಜನವರಿ ಒಂದೇ ತಿಂಗಳಿನಲ್ಲಿ 432 ಅಪಘಾತಗಳು ಸಂಭವಿಸಿದ್ದು, 90 ಮಂದಿ ಮೃತಪಟ್ಟಿದ್ದಾರೆ.
ಹೆಲ್ಮೆಟ್ ರಹಿತ ಚಾಲನೆ ಹಾಗೂ ಅತೀ ವೇಗದ ಚಾಲನೆ ಸೇರಿದಂತೆ ವಿವಿಧ ಪ್ರಕಾರಗಳ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚುತ್ತಿರುವುದು ಸಂಚಾರ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
ಹೊರವರ್ತುಲ ರಸ್ತೆಗಳು, ಪ್ರಮುಖ ರಸ್ತೆಗಳು ಹಾಗೂ ಇತರೆ ಒಳ ರಸ್ತೆಗಳಲ್ಲಿ ನಿತ್ಯವೂ ಅಪಘಾತಗಳು ಸಂಭವಿಸುತ್ತಿವೆ. ಇಂಥ ಅಪಘಾತಗಳಲ್ಲಿ ಪ್ರತಿದಿನ ಕನಿಷ್ಠ ಇಬ್ಬರು ಸಾವಿಗೀಡಾಗುತ್ತಿದ್ದು, ಅವರನ್ನೇ ನಂಬಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.
‘2023ರ ಜನವರಿ ತಿಂಗಳಿನಲ್ಲಿ 86 ಮಂದಿ ಮೃತಪಟ್ಟಿದ್ದರು. ಪ್ರಸಕ್ತ ವರ್ಷ (2024) ಜನವರಿ 1ರಿಂದ 31ರವರೆಗೆ 432 ಅಪಘಾತಗಳು ಸಂಭವಿಸಿದ್ದು, 90 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 369 ಮಂದಿ ಗಾಯಗೊಂಡಿದ್ದಾರೆ. ಪ್ರತಿಯೊಂದು ಅಪಘಾತದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಅಪಘಾತ ಸಂಭವಿಸಿದೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ರಸ್ತೆ ವ್ಯವಸ್ಥೆಯಲ್ಲಿ ಏನಾದರೂ ಬದಲಾವಣೆ ಬೇಕಾದರೆ, ಸಂಬಂಧಪಟ್ಟ ಇಲಾಖೆ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಪಾದಚಾರಿ, ಸವಾರರಿಗೆ ಅಪಾಯ ಹೆಚ್ಚು: ‘ಬಹುತೇಕ ಅಪಘಾತಗಳಲ್ಲಿ ಮೃತಪಟ್ಟವರಲ್ಲಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಹೆಚ್ಚಿದ್ದಾರೆ. ರಸ್ತೆ ದಾಟುವ ಹಾಗೂ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವ ಸಂದರ್ಭಗಳಲ್ಲಿ ವಾಹನಗಳು ಡಿಕ್ಕಿ ಹೊಡೆದು ಪಾದಚಾರಿಗಳು ಮೃತಪಡುತ್ತಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.
‘ನಗರದ ಹಲವು ರಸ್ತೆಗಳಲ್ಲಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ಸಾಗಬೇಕಾದ ಜನರು, ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಜೊತೆಗೆ, ನಿಯಮ ಉಲ್ಲಂಘಿಸಿ ರಸ್ತೆ ದಾಟುತ್ತಿದ್ದಾರೆ. ಇದರಿಂದಾಗಿ ವಾಹನಗಳು ಪಾದಚಾರಿಗಳಿಗೆ ಡಿಕ್ಕಿ ಹೊಡೆಯುತ್ತಿವೆ. ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಪಾದಚಾರಿ ಮಾರ್ಗಗಳನ್ನು ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೂ ಕೋರಲಾಗುತ್ತಿದೆ’ ಎಂದು ಹೇಳಿದರು.
‘ಅತೀ ವೇಗದಲ್ಲಿ ದ್ವಿಚಕ್ರ ವಾಹನ ಚಲಾಯಿಸಿದ್ದರಿಂದ, ಉರುಳಿ ಬಿದ್ದು ಸವಾರರು ಮೃತಪಟ್ಟಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಮೃತ ಸವಾರರು, ಹೆಲ್ಮೆಟ್ ಧರಿಸದಿರುವುದು ಗೊತ್ತಾಗಿದೆ. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ನಿಯಮವಿದ್ದರೂ ಕೆಲವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.
‘ದ್ವಿಚಕ್ರ ವಾಹನ ಸವಾರರ ಸಾವಿನ ಪ್ರಮಾಣ ಶೇ 40’
‘ಜನವರಿಯಲ್ಲಿ ಮೃತಪಟ್ಟ 90 ಮಂದಿಗಳ ಪೈಕಿ ಶೇ 40ರಷ್ಟು ಮಂದಿ ಬೈಕ್ ಸವಾರರು. ಶೇ 25ರಷ್ಟು ಪಾದಚಾರಿಗಳು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಪಾದಚಾರಿಗಳು ಜಿಬ್ರಾ ಕ್ರಾಸಿಂಗ್ ಬಳಸುತ್ತಿಲ್ಲ. ಎಲ್ಲೆಂದರಲ್ಲಿ ರಸ್ತೆ ದಾಟುತ್ತಿದ್ದಾರೆ. ಅಪಾಯಕಾರಿ ರಸ್ತೆಗಳಲ್ಲಿ ಬ್ಯಾರಿಕೇಡ್ ನಿಲ್ಲಿಸಿದರೆ ಜನರು ಅದನ್ನು ಹತ್ತಿ ಇಳಿದು ಹೋಗುತ್ತಿದ್ದಾರೆ. ಇದರಿಂದಲೇ ಪಾದಚಾರಿಗಳ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಹೇಳಿದರು. ‘ಹೆಲ್ಮೆಟ್ ಇಲ್ಲದಿದ್ದರಿಂದ ದ್ವಿಚಕ್ರ ಸವಾರರು ಹೆಚ್ಚು ಸಾಯುತ್ತಿದ್ದಾರೆ. ಈ ಬಗ್ಗೆ ಶಾಲೆ– ಕಾಲೇಜು ಹಾಗೂ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್ ಧರಿಸಿ ಸಂಚರಿಸಬೇಕು. ಅಪಘಾತ ಸಂಭವಿಸಿದರೂ ಜೀವ ಉಳಿಯುವ ಸಾಧ್ಯತೆ ಹೆಚ್ಚು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.