ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿಯಿಂದ ಬಿಡುವು ನೀಡಿದ್ದ ಮಳೆ, ಬುಧವಾರ ಮಧ್ಯಾಹ್ನ ಕೆಲವು ಪ್ರದೇಶಗಳಲ್ಲಿ ಅಬ್ಬರಿಸಿತು. ಜಲಾವೃತವಾಗಿದ್ದ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗದಿದ್ದರೂ, ಮನೆಗಳಿಂದ ನೀರು ಹೊರಹೋಗದೆ ನಿವಾಸಿಗಳು ಪರಿತಪಿಸಿದರು.
ಬುಧವಾರ ‘ಆರೆಂಜ್ ಅಲರ್ಟ್’ ಇದ್ದ ಕಾರಣದಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಶಾಲೆಗಳಿಗೆ ರಜೆ ಘೋಷಿಸಿದ್ದರು. ಆದರೆ, ಬುಧವಾರ ಮಧ್ಯಾಹ್ನದವರೆಗೂ ನಗರದಲ್ಲಿ ಬಿಸಿಲು ಹೆಚ್ಚಾಗಿತ್ತು. ನಂತರ ಕೆಲವು ಪ್ರದೇಶಗಳಲ್ಲಿ ಮಳೆಯಾಯಿತು.
ಜಯನಗರ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್, ಎಚ್ಎಸ್‌ಆರ್ ಲೇಔಟ್, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಮಡಿವಾಳ, ಕೋರಮಂಗಲದಲ್ಲಿ ಹೆಚ್ಚು ಮಳೆಯಾಯಿತು. ಮಳೆ ನೀರು ರಸ್ತೆಗಳಲ್ಲೇ ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಹಲವು ಕಡೆ ಮರಗಳು ಧರೆಗುರುಳಿದವು.
ತೆರವಾಗದ ನೀರು: ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಮತ್ತು ಜಕ್ಕೂರು ಬಳಿಯ ಡೈನಸ್ಟಿ ಲೇಔಟ್‌ನಲ್ಲಿ ಮಂಗಳವಾರ ತುಂಬಿಕೊಂಡಿದ್ದ ಮಳೆನೀರನ್ನು ಹೊರಹಾಕಲು ಬಿಬಿಎಂಪಿ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿಗೆ ಬುಧವಾರ ಸಂಜೆಯವರೆಗೂ ಸಾಧ್ಯವಾಗಿರಲಿಲ್ಲ.
ಮಹದೇವಪುರ ವಲಯದಲ್ಲಿ ಆರು ಸ್ಥಳಗಳಲ್ಲಿ ನೀರು ತೆರವುಗೊಳಿಸಲಾಗಿದೆ. ಆದರೆ, ಸಾಯಿ ಲೇಔಟ್ ಹಾಗೂ ವಡ್ಡರಪಾಳ್ಯದಲ್ಲಿ ಮನೆ ಹಾಗೂ ರಸ್ತೆಯಲ್ಲಿ ನೀರು ನಿಂತಿದ್ದು, ನಿವಾಸಿಗಳು ಸಂಕಷ್ಟ ಅನುಭವಿಸಿದರು.
1,079 ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಅಲ್ಲಿನ ಎಲ್ಲ ನಿವಾಸಿಗಳನ್ನೂ ತೆರವುಗೊಳಿಸಲಾಗಿದೆ. ಅವರಿಗೆ ಪರಿಹಾರವನ್ನು ಶೀಘ್ರ ನೀಡಲಾಗುತ್ತದೆ. ಒಟ್ಟು 30 ಪ್ರದೇಶಗಳಲ್ಲಿ ನೀರು ನಿಂತಿದ್ದು, 29 ಸ್ಥಳಗಳಲ್ಲಿ ನೀರನ್ನು ತೆರವು ಮಾಡಲಾಗಿದೆ. 85 ರಸ್ತೆಗಳಲ್ಲಿ ಮರ– ಕೊಂಬೆಗಳು ಉರುಳಿ ಬಿದ್ದಿದ್ದವು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
ಅರಣ್ಯ ವಿಭಾಗದ 30 ತಂಡಗಳು, ಅಗ್ನಿಶಾಮಕ ದಳದ ಒಂದು ತಂಡ, ಒಂದು ಬೋಟ್, 15 ಪಂಪ್‌ಸೆಟ್, 10 ಜೆಸಿಬಿಗಳಿಂದ ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಾಯಿ ಲೇಔಟ್‌ನಲ್ಲಿ ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ 300 ಜನರಿಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗಿದೆ. ಏಳು ಜನರಿಗೆ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.