ADVERTISEMENT

ಪರಭಾಷಿಕರಿಗೆ ಕನ್ನಡ ಕಲಿಸುವ ಆಟೊ ಚಾಲಕ: ಭಿನ್ನ ಪ್ರಯತ್ನಕ್ಕೆ ಜನಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2024, 11:25 IST
Last Updated 22 ಅಕ್ಟೋಬರ್ 2024, 11:25 IST
   

ಬೆಂಗಳೂರು: ಕನ್ನಡ ಕಡೆಗಣನೆ, ಹಿಂದಿ ಹೇರಿಕೆ ವಿಷಯಗಳು ಚರ್ಚೆಯಾಗುತ್ತಿರುವುದರ ನಡುವೆಯೇ ಪರಭಾಷಿಕರಿಗೆ ಸುಲಭವಾಗಿ ಕನ್ನಡ ಕಲಿಸುವ ಪ್ರಯತ್ನಕ್ಕೆ ಬೆಂಗಳೂರಿನ ಆಟೊ ಚಾಲಕರೊಬ್ಬರು ಕೈಹಾಕಿದ್ದಾರೆ.

ಆಟೊ ಚಾಲಕನ ಈ ವಿನೂತನ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಯಾಣಿಕರಿಗೆ ಕಾಣಿಸುವಂತೆ ಚಾಲಕನ ಸೀಟಿನ ಹಿಂದೆ ಪೋಸ್ಟರ್‌ವೊಂದನ್ನು ಅಂಟಿಸಲಾಗಿದ್ದು, ‘ಲರ್ನ್‌ ಕನ್ನಡ ವಿತ್ ಆಟೊ ಕನ್ನಡಿಗ’ ಎಂದು ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಆಟೊದಲ್ಲಿ ಪ್ರಯಾಣಿಸುವಾಗ ಸಾಮಾನ್ಯವಾಗಿ ಬಳಸುವ ಕನ್ನಡವನ್ನು ಇಂಗ್ಲೀಷ್‌ನಲ್ಲಿ ಬರೆಯಲಾಗಿದೆ. ಅದಕ್ಕೆ ಇಂಗ್ಲೀಷ್‌ನಲ್ಲಿ ಅರ್ಥವನ್ನು ನೀಡಲಾಗಿದೆ.

ADVERTISEMENT

ಉದಾಹರಣೆಗೆ ‘please wait maadi. eradu nimishadalli bartini’ (please wait..I'II be there in two minutes).. ಈ ರೀತಿಯಲ್ಲಿ ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗಿದೆ.

‘ಇದು ಕನ್ನಡ ಕಲಿಯಲು ವೇಗವಾದ ಮತ್ತು ಸುಲಭವಾದ ಮಾರ್ಗವಾಗಿದೆ. ಆಟೊ ಚಾಲಕನ ಸೃಜನಶೀಲತೆಯನ್ನು ಮೆಚ್ಚಬೇಕು. ಪೋಸ್ಟರ್‌ನಲ್ಲಿ ‘Namasakara sir’ (Hello, sir), ‘Elli idira’ (Where are you?), ‘Yeshtu aaytu’ (How much?), ‘UPI idya athva cash aa?’ (Is it UPI or cash?) ಈ ವಾಕ್ಯಗಳನ್ನು ಕನ್ನಡದಲ್ಲಿ ಹೇಗೆ ಹೇಳುವುದೆಂದು ತಿಳಿಸಲಾಗಿದೆ’ ಎಂದು ಎಕ್ಸ್‌ ಬಳಕೆದಾರರೊಬ್ಬರು ಆಟೊ ಚಾಲಕನ ಪ್ರಯತ್ನವನ್ನು ಮೆಚ್ಚಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಬಹುಭಾಷಿಕ ಆಟೊ ಚಾಲಕರು:

ಬೆಂಗಳೂರಿನ ಬಹುತೇಕ ಆಟೊ ಚಾಲಕರು ಐದಾರು ಭಾಷೆಗಳನ್ನು ಬಲ್ಲವರು. ಕನ್ನಡದ ಜೊತೆಗೆ ಹಿಂದಿ ಇಂಗ್ಲಿಷ್ ತಮಿಳು ತೆಲುಗು ಮಲಯಾಳಂ ಭಾಷೆಗಳಲ್ಲಿಯೂ ಪ್ರಯಾಣಿಕರೊಂದಿಗೆ ವ್ಯವಹರಿಸುತ್ತಾರೆ. ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಅವರು ಬೆಂಗಳೂರಿಗೆ ಭೇಟಿ ನೀಡಿದ್ದಾಗ ಬಹುಭಾಷೆ ಮಾತನಾಡುವ ಆಟೊ ಚಾಲಕರ ಬಗ್ಗೆ ಅಚ್ಚರಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.