ಬೆಂಗಳೂರು: ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಡೆದ ಕರ್ನಾಟಕ ಬಂದ್ ವೇಳೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯನ್ನು ತಡೆದ ಪೊಲೀಸರು, ಹೋರಾಟಗಾರರನ್ನು ವಶಕ್ಕೆ ಪಡೆದು ಬಸ್‌ಗಳಲ್ಲಿ ಸ್ವಾತಂತ್ರ್ಯ ಉದ್ಯಾನಕ್ಕೆ ಬಿಟ್ಟರು. ಉದ್ಯಾನದಲ್ಲಿ ಸೇರಿದ್ದ ಹೋರಾಟಗಾರರು, ಮಧ್ಯಾಹ್ನದವರೆಗೂ ಪ್ರತಿಭಟನೆ ನಡೆಸಿದರು.
ಬಂದ್ ಅಂಗವಾಗಿ ಬೃಹತ್ ಮೆರವಣಿಗೆ ನಡೆಸಲು ಸಜ್ಜಾಗಿದ್ದ ಹೋರಾಟಗಾರರು, ಬೆಳಿಗ್ಗೆ 8 ಗಂಟೆಯಿಂದಲೇ ಪುರಭವನ ಎದುರು ಸೇರುತ್ತಿದ್ದರು. ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. 20ಕ್ಕೂ ಹೆಚ್ಚು ಬಸ್‌ಗಳನ್ನು ಸ್ಥಳಕ್ಕೆ ಕರೆಸಲಾಗಿತ್ತು. ಪೊಲೀಸ್ ಕಮಿಷನರ್ ಬಿ. ದಯಾನಂದ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ನಗರದ ನಾನಾ ಭಾಗಗಳಿಂದ ಪಾದಯಾತ್ರೆ ಹಾಗೂ ವಾಹನಗಳ ಮೂಲಕ ಹೋರಾಟಗಾರರು ಪುರಭವನ ಎದುರು ಬಂದು ಸೇರಿದರು. ‘ಕಾವೇರಿ ನಮ್ಮ ಜನ್ಮಸಿದ್ಧ ಹಕ್ಕು’ ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು. ಗುಂಪು ಗುಂಪಾಗಿ ಸೇರಿದ್ದ ಕಾರ್ಯಕರ್ತರು, ಉರುಳು ಸೇವೆ ಮಾಡಿದರು. ಕೈಯಲ್ಲಿ ಪೊರಕೆ ಹಾಗೂ ಕೊಡ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಬೆಳಿಗ್ಗೆ 11 ಗಂಟೆ ಸುಮಾರಿಗೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದತ್ತ ಮೆರವಣಿಗೆ ಹೊರಡಲು ಸಜ್ಜಾಗಿದ್ದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ‘ಪ್ರತಿಭಟನೆ ಹಾಗೂ ಮೆರವಣಿಗೆಗೆ ಅವಕಾಶವಿಲ್ಲ’ ಎಂದು ತಿಳಿಸಿದರು. ಇದೇ ವಿಚಾರವಾಗಿ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು, ಬಿಎಂಟಿಸಿ ಬಸ್‌ಗಳಲ್ಲಿ ಅವರನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ತಂದು ಬಿಟ್ಟರು. ನಗರದ ವಿವಿಧ ಭಾಗಗಳಲ್ಲಿ ಪ್ರತ್ಯೇಕವಾಗಿ ಮೆರವಣಿಗೆ ಮಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವರನ್ನೂ ಉದ್ಯಾನಕ್ಕೆ ಕರೆತಂದಿದ್ದರು. ಇದರಿಂದಾಗಿ, ಉದ್ಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಗಾರರು ಸೇರಿದ್ದರು.
ಕೆಲ ಕಾರ್ಯಕರ್ತರು, ಶುದ್ಧ ಕುಡಿಯುವ ನೀರನ್ನು ಮೈ ಮೇಲೆ ಎರಚಿಕೊಂಡು ಉರುಳು ಸೇವೆ ಮಾಡಿದರು. ಖಾಲಿ ಬಾಟಲಿ ಹಾಗೂ ಕೊಡಗಳನ್ನು ಪ್ರದರ್ಶಿಸಿ, ‘ಅಯ್ಯ ಸಿದ್ರಾಮಯ್ಯ, ನೀರು ಕೊಡಯ್ಯ’ ಎಂದು ಕೂಗಿದರು. ಘೋಷಣಾ ಫಲಕಗಳನ್ನು ಪ್ರದರ್ಶಿಸಿ, ‘ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸಬಾರದು’ ಎಂದು ಆಗ್ರಹಿಸಿದರು.
ಮಂಡ್ಯದಿಂದ ಬಂದಿದ್ದ ಗೋಪಿನಾಥ್ ಹಾಗೂ ಕುಟುಂಬದವರು, ರ‍್ಯಾಂಬೊ ಹೆಸರಿನ ಶ್ವಾನದ ಜೊತೆ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾವಚಿತ್ರವನ್ನು ಬಾಯಿಯಲ್ಲಿ ಕಚ್ಚಿ ಹಿಡಿದಿದ್ದ ಶ್ವಾನ, ಪ್ರತಿಭಟನೆಯಲ್ಲಿ ಅತ್ತಿತ್ತ ಓಡಾಡಿ ಗಮನ ಸೆಳೆಯಿತು.
ಶಾಂತಿಯುತ ಪ್ರತಿಭಟನೆ: ‘ನಗರದಲ್ಲಿ ಬಂದ್ ಶಾಂತಿಯುತವಾಗಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ. ಅಹಿತಕರ ಘಟನೆಗಳು ನಡೆದ ಬಗ್ಗೆ ಎಲ್ಲಿಯೂ ವರದಿಯಾಗಿಲ್ಲ’ ಎಂದು ಕಮಿಷನರ್ ಬಿ. ದಯಾನಂದ್ ಹೇಳಿದರು.
ಕಪ್ಪುಬಟ್ಟೆ ದಿರಿಸಿನಲ್ಲಿ ವಾಟಾಳ್
ಮೈತುಂಬಾ ಕಪ್ಪು ದಿರಿಸು ಧರಿಸಿ ಖಾಲಿ ಕೊಡವನ್ನು ತಲೆ ಮೇಲಿಟ್ಟುಕೊಂಡು ಡಾಲರ್ಸ್ ಕಾಲೊನಿಯಲ್ಲಿರುವ ತಮ್ಮ ಮನೆ ಎದುರು ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾನು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಈ ಕಪ್ಪು ಬಟ್ಟೆಯನ್ನು ನ್ಯಾಯದೇವತೆ ಸಂದೇಶ ಹಾಗೂ ಮಹಿಳೆಯರ ಗೌರವದ ಸಂಕೇತ ಸಾರುವ ಬಟ್ಟೆ ಎಂದು ಧರಿಸಿದ್ದೇನೆ’ ಎಂದರು. ‘ಬಂದ್ ಹತ್ತಿಕ್ಕುತ್ತಿರುವ ಸರ್ಕಾರ ಹೋರಾಟಗಾರರನ್ನು ಬಂಧಿಸಲು ಪೊಲೀಸರನ್ನು ನಿಯೋಜಿಸಿದೆ. ಶಾಂತಿಯುತವಾಗಿ ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಲು ಮುಂದಾಗಿರುವ ನಮ್ಮ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಅವರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.