ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರಿಗೆ ಬೆಂಗಳೂರು ಬಂದ್ ಬಿಸಿ ತಟ್ಟಿತು. ಪ್ರಯಾಣಿಕರು ವಿಮಾನ ಟಿಕೆಟ್‌ಗಿಂತ ಹೆಚ್ಚು ಹಣ ಪಾವತಿಸಿ ತಮ್ಮ ಸ್ಥಳ ತಲುಪಿದರು.
ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಸೋಮವಾರ ಬೆಂಗಳೂರಿನಲ್ಲಿ ಸಾರಿಗೆ ಬಂದ್ ಮಾಡಿದ್ದರ ಪರಿಣಾಮವಾಗಿ ಬೆಂಗಳೂರು ನಗರಕ್ಕೆ ತೆರಳಲು ಟ್ಯಾಕ್ಸಿ ಇಲ್ಲದೇ ಪ್ರಯಾಣಿಕರು ಪರದಾಡಿದರು.
ಲಭ್ಯವಾದ ಕೆಲ ಟ್ಯಾಕ್ಸಿಗಳಲ್ಲಿ ದೇವನಹಳ್ಳಿಯಿಂದ ಮೆಜೆಸ್ಟಿಕ್‌ಗೆ ₹4,000 ಬಾಡಿಗೆ ತೆತ್ತು ಪ್ರಯಾಣಿಸಬೇಕಾಯಿತು.
ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ವಾಯುವಜ್ರ ಬಸ್ ಸೇವೆಯನ್ನು ಹೆಚ್ಚುವರಿಯಾಗಿ ಒದಗಿಸಲಾಯಿತು. ಕೆಲ ಪ್ರಯಾಣಿಕರು ಬಸ್‌ನಲ್ಲಿ ತೆರಳಲು ಇಚ್ಛಿಸದೇ ಖಾಸಗಿ ವೈಟ್ ಬೋರ್ಡ್ ಕಾರುಗಳಲ್ಲಿ ದುಪ್ಪಟ್ಟು ಹಣ ಕೊಟ್ಟು ಪ್ರಯಾಣಿಸಿದರು.
ಟ್ಯಾಕ್ಸಿ ದರ ಕೇಳಿ ಬೆಚ್ಚಿ ಬಿದ್ದ ಕೆಲ ಪ್ರಯಾಣಿಕರು ಬಿಎಂಟಿಸಿ ಬಸ್‌ನಲ್ಲಿ ಸಾಗಿದರು. ಮತ್ತೊಂದಷ್ಟು ಜನ ಅವರ ಸ್ವಂತ ವಾಹನ ಬರುವವರಿಗೂ ವಿಮಾನ ನಿಲ್ದಾಣದಲ್ಲೆ ಕಾದು ಕುಳಿತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡು ಬಂದವು.
ಹಣ ವಸೂಲಿಗೆ ಇಳಿಸಿದ್ದ ಕಾರು ಚಾಲಕರನ್ನು ನಿಯಂತ್ರಿಸಲು ವಿಮಾನ ನಿಲ್ಧಾಣದ ಪೊಲೀಸರಾಗಲಿ, ಟ್ಯಾಕ್ಸಿ ನಿರ್ವಹಣೆಯ ಹೊಣೆ ಹೊತ್ತ ವಿಮಾನದ ಲ್ಯಾಂಡ್ ಸೈಡ್‌ನ ವ್ಯವಸ್ಥಪಕರಾಗಲಿ ಗಮನ ಹರಿಸಲಿಲ್ಲ.
ಟರ್ಮಿನಲ್‌ನಲ್ಲಿ ಶ್ವಾನಗಳ ಆಟ: ಬೆಂಗಳೂರಿನಲ್ಲಿ ಬಂದ್ ಇದ್ದ ಕಾರಣ ಸಾಕಷ್ಟು ಜನ ಪ್ರಯಾಣಿಕರು ವಿರಳ ಸಂಖ್ಯೆಯಲ್ಲಿ ವಿಮಾನ ಬಳಕೆ ಮಾಡಿದ್ದು, ಸಾಕಷ್ಟು ಟಿಕೆಟ್ ರದ್ದು ಮಾಡಿದ್ದಾರೆ. ಟರ್ಮಿನಲ್–1 ಹಾಗೂ ಟರ್ಮಿನಲ್-2 ಕೆಲ ಕಾಲ ಬಿಕೋ ಎನ್ನುವ ಸ್ಥಿತಿಯಲ್ಲಿ ಕಂಡು ಬಂತು. ಅಲ್ಲಿದ್ದ ಕೆಲ ಶ್ವಾನಗಳು, ಆಟದ ಸ್ಥಳವಾಗಿ ಟರ್ಮಿನಲ್ ಬದಲಾಗಿತ್ತು.
ಭಾನುವಾರ ರಾತ್ರಿಯಿಂದಲೆ ಖಾಸಗಿ ಬಸ್ ಆಟೋ ಓಲಾ ಉಬರ್‌ನಂತಹ ಕ್ಯಾಬ್ ಸೇವೆ ಸ್ಥಗಿತಗೊಂಡಿದೆ. ಇದರ ಬೆನ್ನಲ್ಲೇ ವಿಮಾನ ನಿಲ್ದಾಣದ ಟ್ಯಾಕ್ಸಿಯೊಂದರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ವಿಮಾನ ನಿಲ್ದಾಣದಿಂದ ಆಗಮಿಸುವ ವೇಳೆ ಏರ್‌ಪೋರ್ಟ್ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಪ್ರದ್ಯುಮ್ನ ಎಂಬುವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಏನಾಗಿದೆ? ಏರ್‌ಪೋರ್ಟ್‌ನಿಂದ ಆಗಮಿಸು ವೇಳೆ ನಾನು ಸಂಚರಿಸುತ್ತಿದ್ದ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ನಾನು ನನ್ನ ಹೆಂಡತಿ ಹಾಗೂ ಆರು ವರ್ಷದ ಮಗ ದಾಳಿಯಿಂದ ಭೀತಿಗೊಳಗಾದೆವು. ಟ್ಯಾಕ್ಸಿ ಗಾಜು ಪುಡಿಪುಡಿಯಾಗಿದೆ. ಭಾನುವಾರ ರಾತ್ರಿಯಿಂದಲೇ ಬಂದ್ ಇರುವುದಾದರೆ ಸೂಕ್ಷ್ಮ ಪ್ರದೇಶಗಳಲ್ಲಿ ಏಕೆ ಪೊಲೀಸರನ್ನು ನಿಯೋಜಿಸಿಲ್ಲ’ ಎಂದು ಅವರು ಎಕ್ಸ್‌ನಲ್ಲಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.