ADVERTISEMENT

ಬೆಂಗಳೂರು: 1.66 ಲಕ್ಷ ಮತದಾರರಲ್ಲಿ ಒಂದಕ್ಕಿಂತ ಹೆಚ್ಚು ಗುರುತಿನ ಚೀಟಿ

ಬಿಬಿಎಂಪಿ ವ್ಯಾಪ್ತಿಯಲ್ಲಿ 8,972 ಮತಗಟ್ಟೆ; ಅಕ್ಟೋಬರ್‌ 29ಕ್ಕೆ ಮತದಾರರ ಕರಡು ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 2:20 IST
Last Updated 27 ಅಕ್ಟೋಬರ್ 2024, 2:20 IST
   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ 1.66 ಲಕ್ಷ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ (ಎಪಿಕ್‌) ಹೊಂದಿರುವುದು ಪರಿಶೀಲನೆಯಿಂದ ಪತ್ತೆಯಾಗಿದೆ.

ಎಪಿಕ್‌ನಲ್ಲಿರುವ ಭಾವಚಿತ್ರ, ಹೆಸರು, ತಂದೆಯ ಹೆಸರಿನ ಮೂಲಕ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಹೊಂದಿರುವುದು ಕಂಡುಬಂದಿದೆ. 

ಬಿಬಿಎಂಪಿಯ 28 ವಿಧಾನಸಭೆ ಕ್ಷೇತ್ರಗಳಲ್ಲಿ ಒಂದೇ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲೇ 3,885 ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಮತಪಟ್ಟಿಯಲ್ಲಿದೆ. 7,973 ಮಂದಿಯ ಹೆಸರು ಪಾಲಿಕೆಯ ವ್ಯಾಪ್ತಿಯಲ್ಲೇ ಒಂದಕ್ಕಿಂತ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿರುವುದು ಕಂಡುಬಂದಿದೆ. ಬಿಬಿಎಂಪಿ ವ್ಯಾಪ್ತಿಯ 1,54,226 ಮತದಾರರ ಹೆಸರು ರಾಜ್ಯದ ಇತರೆ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಇದೆ ಎಂಬುದನ್ನು ಗುರುತಿಸಲಾಗಿದೆ.

ADVERTISEMENT

28 ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗಳಿಗೆ ತೆರಳಿ ಮತದಾರರ ಪರಿಶೀಲನೆ ನಡೆಸಿದಾಗ, 41,876 ಮತದಾರರು ಅವರು ನೀಡಿದ್ದ ವಿಳಾಸದಲ್ಲಿ ಇರಲಿಲ್ಲ. 22,382 ಮತದಾರರು ಆ ವಿಳಾಸದಿಂದ ಬೇರೆಡೆಗೆ ಹೋಗಿದ್ದರು. 12,817 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿತು. 5,524 ಮತದಾರರ ಭಾವಚಿತ್ರ ಮಸುಕಾಗಿರುವುದು ಕಂಡುಬಂದಿತು ಎಂದು  ಬಿಬಿಎಂಪಿ ಚುನಾವಣೆ ವಿಭಾಗದ ಸಹಾಯಕ ಆಯುಕ್ತ ಶರಣಪ್ಪ ಅವರು ಮಾಹಿತಿ ನೀಡಿದರು.

10 ಮತಗಟ್ಟೆ ಕಡಿಮೆ: ಕೇಂದ್ರ ಚುನಾವಣೆ ಆಯೋಗದ ನಿರ್ದೇಶನದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಮತಗಟ್ಟೆಗಳ ಪುನರ್‌ವಿಂಗಡಣೆ ಕಾರ್ಯ ಪೂರ್ಣಗೊಳಿಸಲಾಗಿದೆ. 8,982 ಮತಗಟ್ಟೆಗಳಿದ್ದು, ಪುನರ್‌ವಿಂಗಡಣೆಯಿಂದ 8,972 ಮತಗಟ್ಟೆಗಳನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ವಿಭಾಗದ ವಿಶೇಷ ಆಯುಕ್ತ ಆರ್‌. ಸೆಲ್ವಮಣಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಮತದಾರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪುನರ್‌ವಿಂಗಡಣೆ ಕಾರ್ಯ ಕೈಗೊಳ್ಳಲಾಗಿತ್ತು. ಮತದಾರರ ನಿವಾಸದಿಂದ ಯಾವ ಮತಗಟ್ಟೆಯೂ ಎರಡು ಕಿ.ಮೀ ದೂರದಲ್ಲಿಲ್ಲದಂತೆ ನಿರ್ವಹಿಸಲಾಗಿದೆ. ಒಂದು ಮತಗಟ್ಟೆ ಮಾತ್ರ 1,500 ಮತದಾರರನ್ನು ಹೊಂದಿದೆ. 11 ಮತಗಟ್ಟೆಗಳನ್ನು ಸಮೀಪದ ಮತಗಟ್ಟೆಗಳೊಂದಿಗೆ ವಿಲೀನಗೊಳಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.