ADVERTISEMENT

ಬೆಂಗಳೂರು | ನಂಬಿಕೆ ನಕ್ಷೆ: ಮಂಜೂರು ಬಳಿಕ ಶುಲ್ಕ

ನಿಧಾನಗತಿಯಲ್ಲಿದ್ದ ಯೋಜನೆಗೆ ವೇಗ ನೀಡಲು ಬಿಬಿಎಂಪಿ ನಿರ್ಧಾರ

ಆರ್. ಮಂಜುನಾಥ್
Published 9 ಮೇ 2024, 0:25 IST
Last Updated 9 ಮೇ 2024, 0:25 IST
ನಂಬಿಕೆ ನಕ್ಷೆ
ನಂಬಿಕೆ ನಕ್ಷೆ   

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಧಾನಗತಿಯಲ್ಲಿದ್ದ ‘ನಂಬಿಕೆ ನಕ್ಷೆ’ ಯೋಜನೆಗೆ ಇದೀಗ ವೇಗ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ನಕ್ಷೆ ಮಂಜೂರಾದ ನಂತರವಷ್ಟೇ ಶುಲ್ಕ ಪಾವತಿಸಿಕೊಳ್ಳಲು ಚಿಂತಿಸುತ್ತಿದೆ.

ಬಿಬಿಎಂಪಿ ಕಚೇರಿಗೆ ಹೋಗದೆ 15 ದಿನಗಳಲ್ಲಿ ಕಟ್ಟಡ ನಕ್ಷೆ ಪಡೆಯುವ ‘ನಂಬಿಕೆ ನಕ್ಷೆ– ನಿಮ್ಮ ಮನೆ ನಕ್ಷೆ, ನಿಮ್ಮ ಮನೆ ಬಾಗಿಲಿಗೆ’ ಯೋಜನೆಗೆ ಮಾರ್ಚ್‌ 11ರಂದು ಚಾಲನೆ ನೀಡಲಾಗಿತ್ತು. ‘ಬ್ರ್ಯಾಂಡ್‌ ಬೆಂಗಳೂರು’ ಪರಿಕಲ್ಪನೆಯಡಿಯ ಈ ಯೋಜನೆಯಲ್ಲಿ 50 ಅಡಿ x 80 ಅಡಿ ಅಳತೆವರೆಗಿನ ಕಟ್ಟಡಗಳಿಗೆ ಸ್ವಯಂ ಚಾಲಿತವಾಗಿ ನಕ್ಷೆ ಸಿಗಲಿದೆ.

ಬಿಬಿಎಂಪಿ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಲಯದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಆರಂಭಿಕ ಹಂತದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಾಗದವು. ನಂತರದ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ್ದರಿಂದ, ಸಿಬ್ಬಂದಿಯೆಲ್ಲ ಚುನಾವಣಾ ಕಾರ್ಯಕ್ಕೆ ನಿಯೋಜಿತರಾದರು. ಹೀಗಾಗಿ, ತಾಂತ್ರಿಕ ಸಮಸ್ಯೆ ನಿವಾರಣೆ ಸಾಧ್ಯವಾಗಲಿಲ್ಲ. ಜೊತೆಗೆ ಕಂದಾಯ ವಿಭಾಗದ ಸಿಬ್ಬಂದಿ ಚುನಾವಣೆ ಕಾರ್ಯದಲ್ಲೇ ನಿರತರಾಗಿದ್ದರು. ಅವರು ಪರಿಶೀಲನೆ ಮಾಡಲು ಸಾಧ್ಯವಿರಲಿಲ್ಲ. ಇದು ಸ್ವಯಂ ಚಾಲಿತ ವ್ಯವಸ್ಥೆಯಾಗಿದ್ದರಿಂದ ಅವರ ಪರಿಶೀಲನೆ ಇಲ್ಲದೆ ದಿನಕ್ಕೆ ಅನುಗುಣವಾಗಿ ಸ್ವಯಂ ಮಂಜೂರಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳಿಂದ ‘ನಂಬಿಕೆ ನಕ್ಷೆ’ ಯೋಜನೆ ಬಹುತೇಕ ಸ್ಥಗಿತಗೊಂಡಿತ್ತು ಎಂದು ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳು ಮಾಹಿತಿ ನೀಡಿದರು.

ADVERTISEMENT

‘ನಂಬಿಕೆ ನಕ್ಷೆ’ ಯೋಜನೆಗೆ ವೇಗ ನೀಡಲಾಗಿದ್ದು, ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯದ ನಾಗರಿಕರು ಕಟ್ಟಡ ನಕ್ಷೆಗೆ ಆನ್‌ಲೈನ್‌ನಲ್ಲೇ ಆರ್ಕಿಟೆಕ್ಟ್‌ ಅಥವಾ ಎಂಜಿನಿಯರ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದು. ಈ ಮೊದಲು, ನಿಯಮದಂತೆ ಎಲ್ಲ ದಾಖಲೆಗಳು ಸರಿ ಇದ್ದರೆ ಒಂದು ದಿನದಲ್ಲಿ ತಾತ್ಕಾಲಿಕ ನಕ್ಷೆಯನ್ನು ಅಗತ್ಯ ಶುಲ್ಕ ಪಾವತಿಸಿ ಪಡೆಯಬಹುದಿತ್ತು. ಆದರೆ, ಇದೀಗ, ತಾತ್ಕಾಲಿಕ ನಕ್ಷೆ ಪಡೆಯುವ ಸಂದರ್ಭದಲ್ಲಿ ಕಟ್ಟಡ ನಕ್ಷೆ ಶುಲ್ಕ ಪಾವತಿಸುವಂತಿಲ್ಲ. 15 ದಿನಗಳಲ್ಲಿ ಸ್ವಯಂಚಾಲಿತವಾಗಿ ಕಟ್ಟಡ ನಕ್ಷೆ ಲಭ್ಯವಾಗುತ್ತದೆ. ಆ ಸಂದರ್ಭದಲ್ಲಿ ಶುಲ್ಕ ಪಾವತಿಸಿ, ಕಟ್ಟಡ ನಕ್ಷೆ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಕ್ರಿಯೆ ಹೇಗೆ?: 

ಅನುಮತಿ ಹೊಂದಿರುವ ಆರ್ಕಿಟೆಕ್ಟ್‌ಗಳು ಅಥವಾ ಎಂಜಿನಿಯರ್‌ಗಳು, ಮಾಲೀಕರು ಒದಗಿಸುವ ದಾಖಲೆ ಮತ್ತು ಕಟ್ಟಡ ನಕ್ಷೆಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bpas.bbmpgov.in/BPAMSClient4/Default.aspx?TAV-1) ಅಪ್‌ಲೋಡ್‌ ಮಾಡುತ್ತಾರೆ.

ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಆನ್‌ಲೈನ್‌ನಲ್ಲೇ ಪರಿಶೀಲಿಸಿ, ಕೆರೆ, ಸರ್ಕಾರಿ ಪ್ರದೇಶಗಳ ಯಾವುದೇ ಬಫರ್‌ ಝೋನ್‌ನಲ್ಲಿ ಈ ಕಟ್ಟಡ ಬರುವುದಿಲ್ಲ ಎಂಬುದನ್ನು ಸ್ಪಷ್ಟೀಕರಿಸುತ್ತದೆ. ಆಟೊ ಡಿಸಿಆರ್‌ ಮೂಲಕ ವರದಿ ಸಿದ್ಧಗೊಂಡು, ತಾತ್ಕಾಲಿಕ ನಕ್ಷೆ ಹಾಗೂ ಅನುಮತಿ ಪತ್ರವನ್ನು ನೀಡಲಾಗುತ್ತದೆ.

ನಂತರ ಕಂದಾಯ ಅಧಿಕಾರಿಗಳು, ನಗರ ಯೋಜನೆ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ನಕ್ಷೆ ಮಂಜೂರು ಮಾಡುತ್ತಾರೆ. ದಾಖಲೆಗಳಲ್ಲಿ ಯಾವುದಾದರೂ ಸಮಸ್ಯೆ ಅಥವಾ ತಪ್ಪಿದ್ದರೆ ಬಿಬಿಎಂಪಿ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ‘ತಾತ್ಕಾಲಿಕ ನಕ್ಷೆ’ಯನ್ನು ರದ್ದುಗೊಳಿಸಿ, ಕಟ್ಟಡ ನಿರ್ಮಿಸದಂತೆ ನಿರ್ಬಂಧಿಸಲಾಗುತ್ತದೆ.

ಎಂಜಿನಿಯರ್‌ಗಳ ನೋಂದಣಿ

‘ನಂಬಿಕೆ ನಕ್ಷೆ’ ಯೋಜನೆಯಲ್ಲಿ ನಕ್ಷೆ ಅನುಮೋದನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸುವ ಬಿಬಿಎಂಪಿಯಿಂದ ಅನುಮತಿ ಪಡೆದಿರುವ ಎಂಜಿನಿಯರ್‌ಗಳು/ ಆರ್ಕಿಟೆಕ್ಟ್‌ಗಳ ವಿವರವನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈಗ ಸುಮಾರು 20 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇವರಲ್ಲದೆ ಇನ್ನಷ್ಟು ಎಂಜಿನಿಯರ್‌ಗಳು/ ಆರ್ಕಿಟೆಕ್ಟ್‌ಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಬಿಬಿಎಂಪಿ ನಗರ ಯೋಜನೆ ವಿಭಾಗದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.