ಯುವ ನರ್ತಕಿ ಭುವನಾ ಹೊಳ್ಳ ಎಡಿಎ ರಂಗಮಂದಿರದಲ್ಲಿ ನಡೆದ ತನ್ನ ಚೊಚ್ಚಲ ಭರತನಾಟ್ಯ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ರಚನೆಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು. ಅವರ ಪ್ರತಿಭಾನ್ವಿತ ಗುರು ಪ್ರೀತಿ ಪ್ರಸಾದ್‌ರವರಿಗೂ ಮೊಟ್ಟಮೊದಲ ಶಿಷ್ಯೆಯನ್ನು ಕಲಾಕ್ಷೇತ್ರಕ್ಕೆ ಯಶಸ್ವಿಯಾಗಿ ಸಮರ್ಪಿಸಿದ ಧನ್ಯತೆಯನ್ನು ಉಂಟು ಮಾಡುವ ರೀತಿಯಲ್ಲಿ ಭುವನಾ ಹೊಳ್ಳ ಕಾರ್ಯಕ್ರಮದಾದ್ಯಂತ ವರ್ತಿಸಿದುದು ಭೇಷ್ ಎನಿಸಿಕೊಂಡಿತು. ಕಾರ್ಯಕ್ರಮದ ಮೊದಲ ಕ್ಲಿಷ್ಟಕರ ಲಯ ಬಿಕ್ಕಟ್ಟಿನ ರಚನೆಯಲ್ಲಿ ವಿಭಿನ್ನ ಲಯಮಾದರಿಗಳನ್ನು ಆತ್ಮವಿಶ್ವಾಸದೊಂದಿಗೆ ಲೀಲಾಜಾಲವಾಗಿ ನಿರೂಪಿಸಿ ಪಾಂಡಿತ್ಯವನ್ನು ಪ್ರದರ್ಶಿಸಿದ ಭುವನಾ ತಮ್ಮ ಗುರುಗಳ ಸಂಯೋಜನೆಯಾದ ಏಕಶ್ಲೋಕೀ ರಾಮಾಯಣವನ್ನು ಆಧರಿಸಿ ಚುಟುಕಾಗಿ ಚೊಕ್ಕವಾಗಿ ರಾಮಾಯಣವನ್ನು ಕಾಣಿಸಿದ್ದಕ್ಕೆ ಪ್ರೇಕ್ಷಕರು ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಗುರು ಪ್ರೀತಿ ಪ್ರಸಾದ್ ಸಂಯೋಜನಾ ಚಾತುರ್ಯ ಮತ್ತು ಪರಿಣತಿ ಕಾರ್ಯಕ್ರಮದಲ್ಲಿ ಪ್ರಕಟಗೊಂಡಿದ್ದು ಪ್ರಶಂಸಾರ್ಹ. ರಾಗ, ಭಾವ, ತಾಳಗಳ ಮೇಳದೊಂದಿಗೆ ನರ್ತಿಪ ನಟೇಶ ಪ್ರಭುವಿನ ಅದ್ಭುತ ನರ್ತನ, ಪ್ರಭುವಿನ ಕರುಣಾಶೀಲತೆ ಇತ್ಯಾದಿಗಳನ್ನು ಹಾಡಿ ಹೊಗಳುವಂತಹ ಶಕ್ತಿ ಮತ್ಯ ಯುಕ್ತಿಗಳನ್ನು ದಯಪಾಲಿಸು ಎಂದು ವಿನಂತಿಸಿಕೊಳ್ಳುವ ವಿಷಯ-ವಸ್ತುವನ್ನು ಔಚಿತ್ಯಪೂರ್ಣವಾಗ ಅಭಿನಯ ಮತ್ತು ನೃತ್ಯದ ಕವಚದೊಂದಿಗೆ ರಾಗಮಾಲಿಕಾ ಶಬ್ದವನ್ನು ನಿರೂಪಿಸಲಾಯಿತು.
ಕೃಷ್ಣ-ಪರವಾದ ಪದವರ್ಣ(ಇನ್ನು ಎನ್ಮನಂ, ಚಾರುಕೇಶಿರಾಗ)ದ ಮಂಡನೆಯಲ್ಲಿ ಭುವನಾರ ತಾಂತ್ರಿಕ ಕೌಶಲ್ಯ ಮತ್ತು ಲಯದ ಮೇಲಿನ ಸುಂದರ ಹಿಡಿತ ಸುವ್ಯಕ್ತವಾಯಿತು. ರಮಿಸಿ ಪ್ರೇಮಿಸಿ ಪರವಶಗೊಳಿಸಿರುವ ಹೇ ಯಾದವ-ಮಾಧವಾ, ನನ್ನನ್ನು ಭ್ರಮಾಲೋಕಕ್ಕೆ ತಳ್ಳಿ ಸಂಪರ್ಣವಾಗಿ ನಿರಾಕರಿಸಿರುವುದು ಸರಿಯೇ? ನನ್ನ ಮುಗ್ಧ ಮನಸ್ಸನ್ನು ಅರಿಯದವನಂತೆ ನಟಿಸುತ್ತಾ ನನಗೆ ಉಂಟಾಗಿರುವ ವೇದನೆಯನ್ನು ನೀಗಲಾರೆಯಾ? ಎಂದು ಪರಿಪರಿಯಾಗಿ ಬೇಡುವ ದೀನ ನಾಯಕಿಯ ಪಾತ್ರ ನಿರ್ವಹಣೆ ಉತ್ತಮ ಮಟ್ಟದಾಗಿತ್ತು. ಅವರ ಸಾತ್ವಿಕಾಭಿಯ ಆ ಉತ್ಕೃಷ್ಟತೆಯನ್ನು ಮತ್ತಷ್ಟು ವಿಸ್ತರಿಸುತ್ತದೆ.
ಬಿಲಹರಿ ರಾಗದ ʼಶ್ರೀಚಾಮುಂಡೇಶ್ವರಿʼ ಕೀರ್ತನೆಯ ಮೂಲಕ ಶ್ರೀ ಚಾಮುಂಡೇಶ್ವರಿಯ ಗುಣಗಾನ ಮಾಡಿದ ನರ್ತಕಿಯು ತೋರಿದ ಮುಖಭಾವ, ಹಸ್ತ ಪಾದ ವಿನ್ಯಾಸಗಳು ಮತ್ತು ಸಂಕೀರ್ಣವಾದ ಕಾಲ್‌ಚಲನೆಗಳ ಸಮನ್ವಯದ ಮೂಲಕ ನಾಟಕೀಯ ಅಂಶಗಳ ಪ್ರದರ್ಶನ ಔಚಿತ್ಯಪೂರ್ಣವೂ ಅರ್ಥಪೂರ್ಣವೂ ಆಗಿತ್ತು. ತಮಿಳು ಕವಿ ಸುಬ್ರಹ್ಮಣ್ಯ ಭಾರತೀಯರ್ ಅವರ ತಮಿಳು ಪದ ʼಚಿನ್ನಂ ಚಿನ್ನಕಿಳಿಯೆʼ(ರಾಗಮಾಲಿಕೆ, ತ್ರಿಶ್ರ ಆದಿತಾಳ) ವಾತ್ಸಲ್ಯದ ಪಾರಮ್ಯವನ್ನು ತೆರೆದಿಡುವಂತಹುದು. ತಾಯಿ-ತಂದೆಯರ ಅಥವಾ ಪೋಷಕರ ವಾತ್ಸಲ್ಯದ ಸೂಕ್ಷ್ಮಾತಿಸೂಕ್ಷ್ಮ ವೈಶಿಷ್ಟ್ಯಗಳನ್ನು ಗ್ರಹಿಸಿ ವಿಶ್ಲೇಷಿಸಿ ಅದರ ಪರಾಕಾಷ್ಠೆಯನ್ನು ಸೆರೆ ಹಿಡಿಯುವಂತಹ ಸಂಯೊಜನೆಯನ್ನು ಮಾಡಿ ಸೈ ಎನಿಸಿಕೊಂಡು ಗುರು ಪ್ರೀತಿ ಪ್ರಸಾದ್ ಅವರು, ತಮ್ಮ ಶಿಷ್ಯೆ ಭುವನಾ ಅದನ್ನು ತನ್ನ ಭಾವನೆಯ ಆಳದಿಂದ ಹಾಗೂ ಸುಲಲಿತವಾಗಿ ಚಿತ್ರಿಸುವಂತೆ ಮಾಡಿದರು. ಗುರು ಪ್ರೀತಿ ಪ್ರಸಾದ್(ನಟುವಾಂಗ), ಡಿ.ಎಸ್.ಶ್ರೀವತ್ಸ(ಗಾಯನ) ಮುಂತಾದವರೊಳಗೊಂಡಿದ್ದ ಸಂಗೀತ ಮೇಳದ ಪಾತ್ರ ಮಹತ್ವದ್ದಾಗಿತ್ತು.
ತಪ್ಪೋಲೆ: ಕಳೆದ ವಾರ ಪ್ರಕಟವಾದ ನೃತ್ಯ ವಿಮರ್ಶೆಯಲ್ಲಿ ಎ ಡಿ ಎ ರಂಗಮಂದಿರದಲ್ಲಿ ನರ್ತಿಸಿದ ನರ್ತಕಿಯ ಹೆಸರನ್ನು ಮಹಿಮಾ ಹಂಸೋಗೆ, ಗುರುಗಳ ಹೆಸರು ಪರಿಮಳ ಹಂಸೋಗೆ ಹಾಗೂ ಮೃದಂಗ ವಾದಕರ ಹೆಸರನ್ನು ಗುರುಮೂರ್ತಿಎಂದು ಓದಿಕೊಳ್ಳತಕ್ಕದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.