ಬೆಂಗಳೂರು: ಅಂಧ ಪ್ರಮಾಣಪತ್ರ ಹೊಂದಿದ್ದ ಕಲಬುರಗಿಯ 16 ವರ್ಷದ ಬಾಲಕನಿಗೆ ಇಲ್ಲಿನ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ದೃಷ್ಟಿ ಮರಳಿಸಿದ್ದಾರೆ.
‘ಬಾಲಕನಿಗೆ ಮೂರನೇ ವರ್ಷದಿಂದಲೇ ದೃಷ್ಟಿ ಸಮಸ್ಯೆ ಕಾಣಿಸಿಕೊಂಡಿತ್ತು. ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಿಂದ ಸಕಾಲಕ್ಕೆ ಚಿಕಿತ್ಸೆ ಸಾಧ್ಯವಾಗಿರಲಿಲ್ಲ. ವರ್ಷ ಕಳೆದಂತೆ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿತ್ತು.
ತಪಾಸಣೆಯ ಬಳಿಕ‘ವಾನ್-ಹಿಪ್ಪೆಲ್–ಲಿಂಡೌ’ ಎಂಬ ಆನುವಂಶಿಕ ರೋಗ ದೃಢಪಟ್ಟಿತು. ಬಾಲಕನ ಪಾಲಕರು, ಇಬ್ಬರು ಸಹೋ ದರರು ಇದೇ ರೋಗಕ್ಕೆ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಬಾಲಕನಿಗೆ ಲೇಸರ್ ಥೆರಪಿಯೊಂದಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಲಾಯಿತು’ ಎಂದು ಆಸ್ಪತ್ರೆ ತಿಳಿಸಿದೆ.
‘ಶಸ್ತ್ರಚಿಕಿತ್ಸೆಯ ನಂತರ 2 ವಾರಗಳಲ್ಲಿ ಬಾಲಕನಿಗೆ ದೃಷ್ಟಿ ಮರಳಿದೆ. ಈಗ ಎಲ್ಲರಂತೆ ಜೀವನ ನಡೆಸುತ್ತಿದ್ದಾನೆ.ನವಜಾತ ಶಿಶುಗಳು ಮತ್ತು ಮುಂಬರುವ ಸಂತತಿಯಲ್ಲಿ ರೋಗದ ಆರಂಭಿಕ ಪತ್ತೆಗೆ ಆನುವಂಶಿಕ ವಿಶ್ಲೇಷಣೆ ಹಾಗೂ ಪ್ರಸವಪೂರ್ವ ರೋಗನಿರ್ಣಯ ಪರೀಕ್ಷೆಗಳು ಮುಖ್ಯ’ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಡಾ. ಮಹೇಶ್ ಷಣ್ಮುಗಂ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.