ಬೆಂಗಳೂರು: ‘ಹೊಟ್ಟೆಪಾಡಿಗಾಗಿ ಊರು ತೊರೆದು ಬಂದಿದ್ದೆವು. ವಯಸ್ಸಾದ ತಂದೆ–ತಾಯಿ, ಪುಟ್ಟ ಮಕ್ಕಳನ್ನು ಸಾಕಲು ಹಗಲಿರುಳು ದುಡಿಯುತ್ತಿದ್ದೆವು. ಮಂಗಳವಾರ ಬೆಳಿಗ್ಗೆ ಕರೆ ಮಾಡಿ ರಾತ್ರಿ ಊಟಕ್ಕೆ ಬರುವಂತೆ ಗೆಳೆಯ ಕೋರಿದ್ದ. ಆದರೆ, ಸಂಜೆ ವೇಳೆಗೆ ಅವನೇ ಇಲ್ಲ’ ಎಂದು ಕಟ್ಟಡ ಕುಸಿತದಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ತಿರುಪಾಲಿ ಅವರನ್ನು ನೆನೆದು ಸ್ನೇಹಿತ ರಮೇಶ್ ಕುಮಾರ್ ಕಣ್ಣೀರಾದರು.
ಬಾಬು ಸಾ ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನಲ್ಲಿ ಬುಡಮೇಲಾಗಿ ಉರುಳಿಬಿದ್ದ ಕಟ್ಟಡದ ಅವಶೇಷಗಳ ಎದುರು ಉಳಿದವರಾದರೂ ಬದುಕಿ ಬರಲೆಂದು ಬಿಹಾರ, ಆಂಧ್ರಪ್ರದೇಶದ ವಿವಿಧ ಊರುಗಳು ಹಾಗೂ ರಾಜ್ಯದ ಯಾದಗಿರಿಯ ಕಾರ್ಮಿಕರ ಕುಟುಂಬಸ್ಥರು ಬುಧವಾರ ಕಾದು ಕುಳಿತಿದ್ದರು. ರಕ್ಷಣಾ ಸಿಬ್ಬಂದಿ ಒಂದೊಂದಾಗಿ ಮೃತದೇಹ ಹೊರಕ್ಕೆ ತೆಗೆಯುತ್ತಿದ್ದಂತೆಯೇ ಅವರ ಭರವಸೆ, ಆಸೆಗಳು ಕ್ಷಣದಿಂದ ಕ್ಷಣಕ್ಕೆ ಕ್ಷೀಣಿಸುತ್ತಿದ್ದವು. ಆಕ್ರಂದನ ಮುಗಿಲು ಮುಟ್ಟಿತ್ತು.
‘ಕಳೆದ ವಾರ ಇದೇ ಕಟ್ಟಡದಲ್ಲಿ ನಾನೂ ಟೈಲ್ಸ್ ಕೆಲಸಕ್ಕೆಂದು ಬಂದಿದ್ದೆ. ಈ ವಾರ ಬಂದಿರಲಿಲ್ಲ. ಬೇರೆ ಮೇಸ್ತ್ರಿಯೊಂದಿಗೆ ಕೆಲಸಕ್ಕೆ ತೆರಳಿದ್ದೆ. ನಾನೂ ಬಂದಿದ್ದರೆ ಕಥೆ ಮುಗಿಯುತ್ತಿತ್ತು’ ಎನ್ನುತ್ತಾ ರಮೇಶ್ ಅವರು ಭಾವುಕರಾದರು.
‘ತಿರುಪಾಲಿ ಕುಟುಂಬಕ್ಕೆ ಈ ವಿಷಯವನ್ನು ಹೇಗೆ ತಿಳಿಸಲಿ’ ಎಂದು ಗೋಳಾಡುತ್ತಿದ್ದ ರಮೇಶ್ ಅವರನ್ನು ಉಳಿದವರು ಸಂತೈಸುತ್ತಿದ್ದರು. ರಕ್ಷಣಾ ಸಿಬ್ಬಂದಿ ತಮಗಾಗಿ ತಂದಿದ್ದ ಕುಡಿಯುವ ನೀರನ್ನೇ ನೀಡಿ ಸಮಾಧಾನ ಪಡಿಸಿದರು. ಅಷ್ಟಾದರೂ ರಮೇಶ್ ಅವರ ಕಣ್ಣಾಲಿಗಳು ತೇವಗೊಳ್ಳುತ್ತಲೇ ಇದ್ದವು.
ಜೊತೆಯಲ್ಲೇ ಹಲವು ವರ್ಷದಿಂದ ಕೆಲಸ ಮಾಡುತ್ತಿದ್ದವರನ್ನು ಕಳೆದುಕೊಂಡ ದುಃಖದಲ್ಲಿ ಸಹ ಕಾರ್ಮಿಕರಿದ್ದರು. ಮೇಲಿನ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದ ಸೋಲೊ ಪಾಸ್ವಾನ್‌ಗಾಗಿ ಸ್ನೇಹಿತ ಮೋಹನ್ ಕುಮಾರ್ ಹುಡುಕಾಟ ನಡೆಸುತ್ತಿದ್ದರು. ಕಟ್ಟಡ ಕುಸಿದ ಸ್ಥಳವು ಕಾರ್ಮಿಕರ ಕಣ್ಣೀರಿನ ಕಥೆಗೆ ಸಾಕ್ಷಿಯಾಗಿತ್ತು. ದುರಂತದ ಸ್ಥಳ ವೀಕ್ಷಿಸಲು ಸಾವಿರಾರು ಮಂದಿ ಬಂದು ಹೋಗುತ್ತಿದ್ದರು.
ಕಿರಿದಾದ ಸ್ಥಳದಲ್ಲಿ 13 ತಾಸು: ಕಟ್ಟಡ ಬುಡಮೇಲಾದ ಸಂದರ್ಭದಲ್ಲಿ ಆಯಾಜ್ ಪಾಷಾ ಅವರು ಮಧ್ಯದ ಅಂತಸ್ತಿನಲ್ಲಿ ಕೆಲಸ ಮಾಡುತ್ತಿದ್ದರು. ಅವಶೇಷಗಳ ಅಡಿ ಪುಟ್ಟ ಜಾಗದಲ್ಲಿ ಸಿಲುಕಿಕೊಂಡಿದ್ದರು. ತಲೆಯ ಮೇಲೆ ಕಟ್ಟಿಗೆಗಳು ಬಿದ್ದಿದ್ದವು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬುಧವಾರ ನಸುಕಿನ ವೇಳೆ ಆಯಾಜ್ ಪಾಷಾ ಇದ್ದ ಸ್ಥಳವನ್ನು ಪತ್ತೆ ಹಚ್ಚಲಾಯಿತು. 13 ತಾಸಿನ ಬಳಿಕ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತು.
ಮತ್ತೊಬ್ಬ ಕಾರ್ಮಿಕ ಕಟ್ಟಡ ಬುಡಮೇಲಾಗುತ್ತಿರುವುದನ್ನು ಗಮನಿಸಿ ಮೇಲಂತಸ್ತಿಗೆ ತೆರಳಿ ಮರದ ಕೊಂಬೆ ನೆರವಿನಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಂದು ತಿಂಗಳಿಂದ ಟೈಲ್ಸ್ ಕೆಲಸ ಮಾಡುತ್ತಿದ್ದೆವು. ಕೆಲಸಕ್ಕಾಗಿ ನಮ್ಮನ್ನು ಮೇಸ್ತ್ರಿ ಕರೆ ತಂದಿದ್ದರು. ಮಾಲೀಕರನ್ನು ನೋಡಿಲ್ಲ. ಮಂಗಳವಾರ ಮಧ್ಯಾಹ್ನ ಮಳೆ ಬಂದು ನಿಂತ ಕೆಲವೇ ಕ್ಷಣಗಳಲ್ಲಿ ಕಟ್ಟಡ ವಾಲಿತು. ಕ್ಷಣಾರ್ಧದಲ್ಲಿ ಧರೆಗುರುಳಿತು. ನಾನು ಸಿಲುಕಿಕೊಂಡಿದ್ದ ಸ್ಥಳದಲ್ಲಿ ಬಾಗಿಲಿತ್ತು. ಅದನ್ನು ಒದ್ದು ಹೊರಕ್ಕೆ ಬಂದು ಜೀವ ಉಳಿಸಿಕೊಂಡೆ’ ಎಂದು ಆಂಧ್ರಪ್ರದೇಶದ ಚಿತ್ತೂರಿನ ಪ್ರದೀಪ್ ರೆಡ್ಡಿ ಹೇಳಿದರು.
ನಿಟ್ಟುಸಿರು ಬಿಟ್ಟ ನಿವಾಸಿಗಳು: ಕುಸಿದ ಕಟ್ಟಡದ ಬಲಭಾಗದಲ್ಲಿ ನಾಲ್ಕರಿಂದ ಐದು ಅಂತಸ್ತಿನ ನಾಲ್ಕು ಮನೆಗಳಿವೆ. ಎಲ್ಲ ಮನೆಗಳಲ್ಲೂ ಮಾಲೀಕರು, ಬಾಡಿಗೆದಾರರು ನೆಲಸಿದ್ದಾರೆ. ಕಟ್ಟಡವು ಖಾಲಿ ನಿವೇಶನದ ಬದಲಿಗೆ ಪಕ್ಕದ ಕಟ್ಟಡಗಳತ್ತ ಬಿದ್ದಿದ್ದರೆ ಸಾವು– ನೋವು ಇನ್ನೂ ಹೆಚ್ಚಾಗುವ ಅಪಾಯವಿತ್ತು.
‘ಕಟ್ಟಡ ಕುಸಿಯುವ ಕೆಲವೇ ಕ್ಷಣಗಳ ಹಿಂದೆ ಅದೇ ಮಾರ್ಗದಲ್ಲಿ ಮನೆಗೆ ಬಂದಿದ್ದೆ. ದೇವರು ಕಾಪಾಡಿದ. ನಿತ್ಯ ಮನೆಯ ಎದುರೇ ಕೆಲಸ ಮಾಡುತ್ತಿದ್ದ ಕಾರ್ಮಿಕರು ಶವವಾಗಿ ಹೋದರು’ ಎಂದು ಕಾವೇರಿ ರೆಸಿಡೆನ್ಸಿಯ ನಿವಾಸಿ ಶಾಲಿಕಾ ಕಣ್ಣೀರು ಹಾಕಿದರು.
ನಾಗವಾರದ ಏಳುಮಲೈ ಅವರು ಸುರಕ್ಷಿತವಾಗಿ ಹೊರಬರುವ ನಿರೀಕ್ಷೆಯಲ್ಲಿ ಸಂಬಂಧಿ ಮಗೇಶ್ ಇದ್ದರು. ಕಲಬುರಗಿಯ ಜಗಮ್ಮ ಅವರು ಕಟ್ಟಡದಲ್ಲಿ ಶೌಚಾಲಯದಲ್ಲಿ ಸಿಲುಕಿಕೊಂಡಿದ್ದರು. ಅವರನ್ನೂ ರಕ್ಷಿಸಲಾಯಿತು.
‘ಮುಂದಿನ ತಿಂಗಳು ಗೃಹಪ್ರವೇಶ ನಡೆಸಲು ಮಾಲೀಕರು ನಿರ್ಧರಿಸಿದ್ದರು. ಬೇಗ ಕೆಲಸ ಮುಗಿಸುವಂತೆಯೂ ಗುತ್ತಿಗೆದಾರರಿಗೆ ಸೂಚಿಸಿದ್ದರು. ವೇಗವಾಗಿ ಕೆಲಸ ನಡೆಯುತ್ತಿತ್ತು’ ಎಂದು ಕಾರ್ಮಿಕರೊಬ್ಬರು ತಿಳಿಸಿದರು.
ಕಾರ್ಯಾಚರಣೆ ಹೇಗಿತ್ತು?
* ಮಂಗಳವಾರ ಮಧ್ಯಾಹ್ನ 3.40ರ ಸುಮಾರಿಗೆ ಉರುಳಿದ ಕಟ್ಟಡ
* ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸ್ಥಳೀಯ ಪೊಲೀಸರು
* ಮಂಗಳವಾರ ರಾತ್ರಿಯಿಡೀ ನಡೆದ ಕಾರ್ಯಾಚರಣೆ
* 35 ತಾಸಿಗೂ ಹೆಚ್ಚು ನಿರಂತರ ರಕ್ಷಣಾ ಕಾರ್ಯ
ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆ
ದುರಂತದಲ್ಲಿ ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ಇನ್ನೂ ಇಬ್ಬರು ನಾಪತ್ತೆಯಾಗಿದ್ದು ಅವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ. ಬಿಹಾರದ ಅರ್ಮಾನ್ (26) ಮೊಹ್ಮದ್ ಸಾಹೀಲ್ ಶ್ರೀರಾನ್ ಕಿರುಪಾಲ ಸೋಲೋ ಪಾಸ್ವಾನ್ ತಮಿಳುನಾಡಿನ ಮಣಿಕಂಠನ್ ಸತ್ಯರಾಜು ಆಂಧ್ರಪ್ರದೇಶದ ತುಳಸಿ ರೆಡ್ಡಿ ಉತ್ತರ ಪ್ರದೇಶದ ಪುಲ್ಚನ್ ಯಾದವ್ ಮೃತಪಟ್ಟಿದ್ದು ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಆಂಧ್ರಪ್ರದೇಶದ ಚಿತ್ತೂರಿನ ಗಜೇಂದ್ರ ಹಾಗೂ ಬೆಂಗಳೂರಿನ ನಾಗವಾರದ ಏಳುಮಲೈ ನಾಪತ್ತೆ ಆದವರು. ಕಲಬುರಗಿಯ ಜಗಮ್ಮ(50) ಯಾದಗಿರಿಯ ನಾಗರಾಜು(25) ಬಿಹಾರದ ರಮೇಶ್ ಕುಮಾರ್ (28) ವಕೀಲ್ ಪಾಸ್ವಾನ್ ಅರ್ಮಾನ್ (22) ಅಯಾಜ್ (40) ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಗಮ್ಮ ಹಾಗೂ ಆಯಾಜ್ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಎನ್‌ಡಿಆರ್‌ಎಫ್ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿ ಬಿಹಾರದ ಸಮಸ್ಟಿಪುರದ ಅರ್ಮಾನ್ ಜಿಸಾನ್ ಮಹ್ಮದ್ ಸಾಹಿಲ್ ರಶೀದ್ (25) ಸಿತಾರೆ ಇಲ್ತಾಫ್ (30) ಸೋಹಿಲ್ ಹಾಗೂ ಪ್ರದೀಪ್ ರೆಡ್ಡಿ ಅವರನ್ನು ರಕ್ಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.