ಬೆಂಗಳೂರು: ಬಾಬು ಸಾ ಪಾಳ್ಯದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿದ ಪ್ರಕರಣದಲ್ಲಿ ಕಟ್ಟಡದ ಮಾಲೀಕ, ಆಂಧ್ರಪ್ರದೇಶದ ಮುನಿರೆಡ್ಡಿ, ಅವರ ಪುತ್ರ ಭುವನ್ ರೆಡ್ಡಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಮೊದಲನೇ ಗುತ್ತಿಗೆದಾರ ಮುನಿಯಪ್ಪ ಅವರನ್ನು ಹೆಣ್ಣೂರು ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಿರ್ವಹಿಸುತ್ತಿದ್ದ ಎರಡನೇ ಗುತ್ತಿಗೆದಾರ ಏಳುಮಲೈ ವಿರುದ್ಧವೂ ಎಫ್‌ಐಆರ್ ದಾಖಲಾಗಿದ್ದು, ಅವರು ಕಟ್ಟಡದ ಅವಶೇಷಗಳ ಅಡಿ ಸಿಲುಕಿದ್ದಾರೆ. ಅವರು ಇನ್ನೂ ಪತ್ತೆಯಾಗಿಲ್ಲ.
‘ಸಿವಿಲ್ ಎಂಜಿನಿಯರ್, ಗುತ್ತಿಗೆದಾರರು, ಮೇಸ್ತ್ರಿ ಅವರ ಜೊತೆಗೆ ಕಟ್ಟಡದ ಮಾಲೀಕರು ಸೇರಿಕೊಂಡು ಜನವಸತಿ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಸಾಮಗ್ರಿ ಬಳಸದೇ ಹಣ ಉಳಿಸುವ ಉದ್ದೇಶದಿಂದ ಕಳಪೆ ಸಾಮಗ್ರಿ ಬಳಸಿ ಕಟ್ಟಡ ನಿರ್ಮಿಸಿದ್ದಾರೆ. ಭವಿಷ್ಯದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆಯ ಅರಿವಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಕಟ್ಟಡ ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮ ಅನುಸರಿಸಿಲ್ಲ. ಸಂಬಂಧಿಸಿದ ಪ್ರಾಧಿಕಾರದ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಲಾಗಿದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
‘ಮುನಿರಾಜು ರೆಡ್ಡಿ ಅವರು ಕೆಲವು ವರ್ಷಗಳ ಹಿಂದೆಯೇ ಆಂಧ್ರಪ್ರದೇಶದಿಂದ ನಗರಕ್ಕೆ ಬಂದಿದ್ದರು. ಮಲ್ಲೇಶ್ವರದಲ್ಲಿ ನೆಲಸಿದ್ದರು. ಬಾಬು ಸಾ ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನಲ್ಲಿ ಕೆಲವು ವರ್ಷಗಳ ಹಿಂದೆ 60X40 ಅಡಿ ಅಳತೆಯ ನಿವೇಶನ ಖರೀದಿಸಿದ್ದರು. ಅಲ್ಲಿ ಕಟ್ಟಡ ನಿರ್ಮಿಸುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.
‘ಮುನಿರಾಜು ಕಟ್ಟಡ ನಿರ್ಮಾಣದ ಸ್ಥಳಕ್ಕೆ ಹೆಚ್ಚಾಗಿ ಬರುತ್ತಿರಲಿಲ್ಲ. ಭುವನ್ ರೆಡ್ಡಿಯೇ ಕಟ್ಟಡ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು’ ಎಂದು ಸ್ಥಳೀಯ ತಿಳಿಸಿದ್ದಾರೆ.
ನಿರ್ಮಿಸಿದ್ದು ಏಳು ಅಂತಸ್ತು: ಭುವನ್ ರೆಡ್ಡಿ ಯಾವುದೇ ಅನುಮತಿ ಪಡೆಯದೇ ಏಳು ಮಹಡಿಯ ಕಟ್ಟಡ ಕಟ್ಟಿಸುತ್ತಿದ್ದರು. ಅಲ್ಲದೇ ಕಟ್ಟಡ ಕುಸಿಯಲು ಕಳಪೆ ಕಾಮಗಾರಿ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
‘ಬಾಡಿಗೆ ಉದ್ದೇಶಕ್ಕೆ ಮನೆ ನಿರ್ಮಿಸುತ್ತಿದ್ದರು. ಆರನೇ ಅಂತಸ್ತಿನಲ್ಲಿ ಮಾಲೀಕರು ವಾಸಕ್ಕೆ ಡ್ಯುಪ್ಲೆಕ್ಸ್ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಸಿದ್ದರು’ ಎಂದು ಸ್ಥಳೀಯರು ಹೇಳಿದರು.
‘ತಳಪಾಯದಲ್ಲಿ ಕಬ್ಬಿಣದ ರಾಡುಗಳನ್ನು ಸರಿಯಾಗಿ ಅಳವಡಿಕೆ ಮಾಡಿರಲಿಲ್ಲ. ಕಾಂಪೌಂಡ್ ನಿರ್ಮಾಣಕ್ಕೆ ಅಗೆಯಲಾಗಿದ್ದ ಗುಂಡಿಯಲ್ಲಿ ಅಪಾರ ಪ್ರಮಾಣದ ಮಳೆ ನೀರು ಶೇಖರಣೆಗೊಂಡು ಭೂಮಿ ಸಡಿಲವಾಗಿತ್ತು. ತಳಪಾಯದಲ್ಲಿ 22 ಎಂ.ಎಂನ ಕಬ್ಬಿಣದ ರಾಡು ಬಳಸಬೇಕಿತ್ತು. 12 ಹಾಗೂ 16 ಎಂ.ಎಂ ಕಬ್ಬಿಣದ ರಾಡು ಬಳಸಲಾಗಿದೆ. ಮಣ್ಣು ಪರೀಕ್ಷೆ ಮಾಡಿಸಿ ವರದಿ ಆಧರಿಸಿ ಕಟ್ಟಡದ ಸಾಮರ್ಥ್ಯ ಹೆಚ್ಚಿಸಬೇಕಿತ್ತು. ಮಣ್ಣು ಸಡಿಲವಾಗಿದ್ದರೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾಮಗಾರಿ ನಡೆಸಬೇಕಿತ್ತು. ಈ ರೀತಿಯ ಕ್ರಮ ಅನುಸರಿಸಿಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಅಗ್ನಿಶಾಮಕದ ದಳದ ಅಧಿಕಾರಿಯೊಬ್ಬರು ತಿಳಿಸಿದರು.
‘ಕಾಮಗಾರಿ ವೇಳೆ ಗುತ್ತಿಗೆದಾರ ಹಾಗೂ ಮಾಲೀಕರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮೂರು ಅಂತಸ್ತಿನ ಕಾಮಗಾರಿ ಮುಕ್ತಾಯವಾದ ಮೇಲೆ ಬೇರೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಆರ್‌ಡಿಒ ಸಾಧನ ಬಳಸಿ ಕಾರ್ಮಿಕರು ಸಿಲುಕಿದ್ದ ಸ್ಥಳವನ್ನು ಪತ್ತೆ ಹಚ್ಚಲಾಯಿತು. ಗ್ಯಾಸ್ ಕಟ್ಟರ್ ಸಹಾಯದಿಂದ ಕಬ್ಬಿಣದ ರಾಡು ತುಂಡು ಮಾಡಿ ಕಾರ್ಯಾಚರಣೆ ನಡೆಸಲಾಯಿತು. ಸ್ಥಳದಲ್ಲಿ ನಾಲ್ಕು ಆಂಬುಲೆನ್ಸ್‌ಗಳು ಬೀಡುಬಿಟ್ಟಿದ್ದವು. ಗಾಯಾಳುಗಳನ್ನು ಹೊರಕ್ಕೆ ತಂದ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.
‘ಕಟ್ಟಡದ ಪಕ್ಕದಲ್ಲೇ ಶೆಡ್ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಅವರ ಮೇಲೆ ಅವಶೇಷಗಳು ಬಿದ್ದಿರುವ ಸಾಧ್ಯತೆ ಇದೆ. ಕಟ್ಟಡದ ಅವಶೇಷಗಳನ್ನು ಪೂರ್ಣ ತೆರವುಗೊಳಿಸಿದ ಬಳಿಕ ಕಾರ್ಯಾಚರಣೆ ಸ್ಥಗಿತ ಮಾಡಲಾಗುವುದು’ ಎಂದು ಎನ್‌ಡಿಆರ್‌ಎಫ್ ಸಿಬ್ಬಂದಿ ತಿಳಿಸಿದರು.
ಕಟ್ಟಡದ ದುರಂತದ ವಿವರ 14 ಕಾರ್ಮಿಕರ ರಕ್ಷಣೆಎಂಟು ಕಾರ್ಮಿಕರ ಸಾವು, ಇಬ್ಬರು ನಾಪತ್ತೆ
ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ
ದುರಂತ ಸ್ಥಳಕ್ಕೆ ಲೋಕಾಯುಕ್ತ ಬಿ.ಎಸ್.ಪಾಟೀಲ ಉಪ ಲೋಕಾಯುಕ್ತರಾದ ಕೆ.ಎನ್.ಫಣಿಂದ್ರ ಬಿ.ವೀರಪ್ಪ ಅವರು ಬುಧವಾರ ರಾತ್ರಿ ಭೇಟಿನೀಡಿ ಪರಿಶೀಲಿಸಿದರು. ಬಿಬಿಎಂಪಿ ಮತ್ತು ಪೊಲೀಸ್ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡರು. ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಬಿಬಿಎಂಪಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿತ್ತೆ? ಇಲ್ಲವೇ ಎಂಬುದುರ ಕುರಿತು ಸಮಗ್ರ ಮಾಹಿತಿ ನೀಡುವಂತೆ ಲೋಕಾಯುಕ್ತರು ಸೂಚಿಸಿದರು. ಸ್ಥಳದಲ್ಲಿದ್ದ ಬಿಬಿಎಂಪಿಯ ವಲಯ ಆಯುಕ್ತ ಸಹಾಯಕ ಆಯುಕ್ತ ಕಾರ್ಯನಿರ್ವಾಹಕ ಎಂಜಿನಿಯರ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳನ್ನು ಲೋಕಾಯುಕ್ತರು ಪ್ರಾಥಮಿಕ ವಿಚಾರಣೆ ನಡೆಸಿದರು.
‘ಪ್ರಾಥಮಿಕ ತನಿಖೆ ಪ್ರಕಾರ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡುತ್ತಿರುವುದು ಪತ್ತೆಯಾಗಿದೆ. ಅನುಮತಿ ಪಡೆಯದೇ ಕಟ್ಟಡ ನಿರ್ಮಾಣ ಮಾಡುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲು ಮಾಡಲಾಗಿದೆ. ಶುಕ್ರವಾರ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ’ ಎಂದು ಲೋಕಾಯುಕ್ತ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ. ಅನಧಿಕೃತವಾಗಿ ಕಾಮಗಾರಿ ಮಾಡಿದಲ್ಲದೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಕೊಡುತ್ತಾರೆ ಎಂಬ ಭಯದಲ್ಲಿ ಕಾರ್ಮಿಕರಿಂದ ಹಗಲು–ರಾತ್ರಿ ಕೆಲಸ ಮಾಡಿಸಿ ಅಮಾಯಕರ ಜೀವ ತೆಗೆದಿದ್ದಾರೆ. ಈ ಘಟನೆಯನ್ನು ಲೋಕಾಯುಕ್ತ ಗಂಭೀರವಾಗಿ ಪರಿಗಣಿಸಿದೆ ಎಂದರು. ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಅಧಿಕಾರಿಗಳಿಗೆ ಅನಧಿಕೃತ ಕಟ್ಟಡ ಎಂಬ ಮಾಹಿತಿ ಲಭ್ಯವಾಗಿತ್ತು. ಆದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳಿಂದ ಕರ್ತವ್ಯಕಲೋಪ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದರು.
ಕಟ್ಟಡ ಕುಸಿತ: ಎಇಇ ಅಮಾನತು
ಬಾಬುಸಾ ಪಾಳ್ಯದಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದರೂ ಕ್ರಮ ಕೈಗೊಳ್ಳದ ಆರೋಪದಡಿ ಹೊರಮಾವು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ. ವಿನಯ್ ಅವರನ್ನು ಅಮಾನತುಗೊಳಿಸಲಾಗಿದೆ. ಹೊರಮಾವು ಉಪ ವಿಭಾಗ ವ್ಯಾಪ್ತಿಯ ಬಾಬುಸಾ ಪಾಳ್ಯದ ಅಂಜನಾದ್ರಿ ಎನ್‌ಕ್ಲೇವ್‌ನ 7ನೇ ಬಿ ಅಡ್ಡರಸ್ತೆಯಲ್ಲಿ ನಿವೇಶನ ಸಂಖ್ಯೆ 24ರಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಬಿಬಿಎಂಪಿ –2020 ಕಾಯ್ದೆ ಪ್ರಕಾರ ಉಪವಿಧಿಗಳನ್ನು ಉಲ್ಲಂಘಿಸಿ ನಿರ್ಮಾಣ ಮಾಡಿರುವ ಕಟ್ಟಡದ ಭಾಗಗಳನ್ನು ತೆರವುಗೊಳಿಸಲು ಸ್ಥಿರೀಕರಣದ ಆದೇಶವನ್ನು ವಿನಯ್ ಸೆಪ್ಟೆಂಬರ್ 21ರಂದು ಹೊರಡಿಸಿದ್ದರು. ಈ ಆದೇಶದ ನಂತರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಕಟ್ಟಡವು ಅ.22ರಂದು ಉರುಳಿಬಿದ್ದು ಎಂಟು ಮಂದಿ ಕಟ್ಟಡ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಮಹದೇವಪುರ ವಲಯ ಆಯುಕ್ತರು ವರದಿ ನೀಡಿದ್ದಾರೆ. ಆದ್ದರಿಂದ ಕರ್ತವ್ಯ ಲೋಪ ಎಸಗಿದ ಆರೋಪದಡಿ ವಿನಯ್ ಅವರನ್ನು ಅಮಾನತುಗೊಳಿಸಿ ಆಡಳಿತ ವಿಭಾಗದ ಉಪ ಆಯುಕ್ತರು ಬುಧವಾರ ಆದೇಶ ಹೊರಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.