ಬೆಂಗಳೂರು: ‘ಆರ್ಥಿಕ ಸಂಕಷ್ಟದಿಂದ ಹೋಟೆಲ್ ಉದ್ಯಮಿ, ನಾಗರಬಾವಿ ಎರಡನೇ ಹಂತದ ನಿವಾಸಿ ಪ್ರದೀಪ್(42) ಅವರು ಕಾರಿನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ’ ಎಂದು ಪೊಲೀಸರು ಹೇಳಿದರು.
ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದ ಕೆಎಲ್ಇ ರಸ್ತೆಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಪ್ರದೀಪ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಶನಿವಾರ ಮಧ್ಯಾಹ್ನ ಮನೆಯಿಂದ ಸ್ಕೋಡಾ ಕಾರಿನಲ್ಲಿ ಮುದ್ದಿನಪಾಳ್ಯಕ್ಕೆ ಬಂದಿದ್ದರು. ಅಲ್ಲಿ ಕೆಲಕಾಲ ಕಾರಿನಲ್ಲೇ ಕುಳಿತಿದ್ದರು. ಕೆಲವೇ ಕ್ಷಣಗಳಲ್ಲಿ ಕಾರು ಹೊತ್ತಿ ಉರಿಯಲು ಆರಂಭಿಸಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ ನಂತರ ಕಾರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ದಾಖಲೆ ಪರಿಶೀಲಿಸಿದಾಗ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳಲು ಅವರು ಪೆಟ್ರೋಲ್ ಖರೀದಿಸಿ ತಂದಿದ್ದರು ಎನ್ನಲಾಗಿದೆ.
ಕಾರು ಹೊತ್ತಿ ಉರಿಯುತ್ತಿರುವ ಸಂದರ್ಭದಲ್ಲಿ ಜೋರಾದ ಶಬ್ದ ಕೇಳಿಬಂದಿತ್ತು. ಶಬ್ದದಿಂದ ಅಕ್ಕಪಕ್ಕದ ನಿವಾಸಿಗಳು ಬೆಚ್ಚಿ ಬಿದ್ದಿದ್ದರು. ಕೆಲವರು ಮನೆಯಿಂದ ಹೊರಕ್ಕೆ ಓಡಿ ಬಂದಿದ್ದರು. ಕಾರಿಗೆ ಬೆಂಕಿ ತಗುಲಿದ ಬಳಿಕ ಏರ್ ಬಲೂನ್ ತೆರೆದುಕೊಂಡು ಸಂಭವಿಸಿದ ಸ್ಫೋಟದಿಂದ ಜೋರು ಶಬ್ದ ಬಂದಿರುವ ಸಾಧ್ಯತೆಯಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
ಭಾನುವಾರವೂ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಬ್ಯಾಡರಹಳ್ಳಿ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.