ADVERTISEMENT

ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ: ಹೆಗಡೆನಗರದಲ್ಲಿ ವಾಸ, ಜಕ್ಕೂರಿನಲ್ಲಿ ಕೆಲಸ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 20:49 IST
Last Updated 1 ಏಪ್ರಿಲ್ 2024, 20:49 IST
<div class="paragraphs"><p>ದಿ ರಾಮೇಶ್ವರ ಕೆಫೆ </p></div>

ದಿ ರಾಮೇಶ್ವರ ಕೆಫೆ

   

ಬೆಂಗಳೂರು: ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿರುವ ಮುಜಮೀಲ್ ಶರೀಫ್‌ (31), ಬೆಂಗಳೂರಿನಲ್ಲಿ ಐದು ವರ್ಷಗಳಿಂದ ವಾಸವಿದ್ದನೆಂಬ ಸಂಗತಿ ಎನ್‌ಐಎ ಅಧಿಕಾರಿಗಳ ತನಿಖೆಯಿಂದ ಗೊತ್ತಾಗಿದೆ.

‘ಚಿಕ್ಕಮಗಳೂರು ಜಿಲ್ಲೆಯ ಕಳಸದ ಮುಜಮೀಲ್, 2019ರಲ್ಲಿ ಬೆಂಗಳೂರಿಗೆ ಬಂದಿದ್ದ. ಸ್ನೇಹಿತರ ಸಹಾಯದಿಂದ ಹೆಗಡೆನಗರದ ಕೊಠಡಿಯೊಂದರಲ್ಲಿ ಉಳಿದುಕೊಂಡಿದ್ದ. ಜಕ್ಕೂರು ಲೇಔಟ್‌ನಲ್ಲಿರುವ ಔಷಧಿ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

ADVERTISEMENT

‘ಮುಜಮೀಲ್‌ ಅವರ ಕುಟುಂಬದವರು ಸಹ ಕಳಸದಿಂದ ಚಿಕ್ಕಮಗಳೂರಿಗೆ ಸ್ಥಳಾಂತರಗೊಂಡಿದ್ದರು. ಬೆಂಗಳೂರಿನಲ್ಲಿದ್ದ ಮುಜಮೀಲ್, ಆಗಾಗ ಚಿಕ್ಕಮಗಳೂರಿಗೆ ಹೋಗಿ ಬರುತ್ತಿದ್ದ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಮನೆಯಲ್ಲಿ ಹೇಳಿದ್ದ. ಬೆಂಗಳೂರಿನ ಬಹುತೇಕ ಪ್ರದೇಶಗಳ ಪರಿಚಯ ಈತನಿಗಿತ್ತು’ ಎಂದು ಮೂಲಗಳು ತಿಳಿಸಿವೆ.

ಕೆಲಸ ಬಿಡಿಸಿದ್ದ ಮಾಲೀಕ: ‘ಜಕ್ಕೂರು ಲೇಔಟ್‌ನಲ್ಲಿರುವ ಪ್ರತಿಷ್ಠಿತ ಕ್ಲಿನಿಕ್ ಪಕ್ಕವೇ ಔಷಧಿ ಮಳಿಗೆ ಇದೆ. ಈ ಮಳಿಗೆಯಲ್ಲಿ ಸಹಾಯಕನಾಗಿ ಮುಜಮೀಲ್ ಕೆಲಸಕ್ಕೆ ಸೇರಿದ್ದ. ಈತನಿಗೆ ಪ್ರತಿ ತಿಂಗಳು ₹ 8,000 ಸಂಬಳ ನೀಡಲಾಗುತ್ತಿತ್ತು’ ಎಂದು ಮೂಲಗಳು ಹೇಳಿವೆ.

‘ಹೆಗಡೆನಗರದಿಂದಲೇ ನಿತ್ಯವೂ ಕೆಲಸಕ್ಕೆ ಹೋಗಿ ಬರುತ್ತಿದ್ದ ಮುಜಮೀಲ್, ಹೆಚ್ಚಾಗಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದ. ಈತ, ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಿದ್ದ. ನಂತರ, ಕೆಲಸಕ್ಕೆ ತಡವಾಗಿ ಬರಲಾರಂಭಿಸಿದ್ದ. ಏಕಾಏಕಿ ರಜೆ ಪಡೆದು, ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗುತ್ತಿದ್ದ. ಕೆಲಸದಲ್ಲೂ ನಿರಾಸಕ್ತಿ ತೋರುತ್ತಿದ್ದ. ಮಾಲೀಕರು ಎಷ್ಟೇ ಎಚ್ಚರಿಕೆ ನೀಡಿದರೂ ಸುಧಾರಿಸಿರಲಿಲ್ಲ. ಇದೇ ಕಾರಣಕ್ಕೆ ಮುಜಮೀಲ್‌ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಹೋಟೆಲ್‌ನಲ್ಲಿ ಕೆಲಸ: ‘ಶಂಕಿತ ಮುಜಮೀಲ್, ಜಕ್ಕೂರು ಲೇಔಟ್ ವಿಳಾಸ ಬಳಸಿ ಗುರುತಿನ ಚೀಟಿಗಳನ್ನು ಪಡೆದುಕೊಂಡಿದ್ದ. ಔಷಧಿ ಮಳಿಗೆ ಕೆಲಸ ಹೋದ ನಂತರ ಹೋಟೆಲ್‌ವೊಂದಕ್ಕೆ ಸೇರಿದ್ದ. ಅಲ್ಲಿಯೂ ಜಕ್ಕೂರು ಲೇಔಟ್ ವಿಳಾಸದ ದಾಖಲೆಗಳನ್ನು ನೀಡಿದ್ದ. ತಾನು ಜಕ್ಕೂರು ಲೇಔಟ್ ನಿವಾಸಿಯೆಂದು ಹೇಳಿಕೊಂಡಿದ್ದ’ ಎಂದು ಮೂಲಗಳು ವಿವರಿಸಿವೆ.

‘ಕೆಲಸ ಜೊತೆಗೇ ಮುಜಮೀಲ್‌, ಶಂಕಿತ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಜೊತೆ ಸಂಪರ್ಕದಲ್ಲಿದ್ದ. ತಾಹಾ ಮೂಲಕ ಮುಜಮೀಲ್‌ಗೆ ಶಂಕಿತ ಮುಸಾವೀರ್ ಹುಸೇನ್ ಶಾಜೀಬ್ ಪರಿಚಯವಾಗಿತ್ತು. ಬಳಿಕ, ಮೂವರು ಬಾಂಬ್ ಸ್ಫೋಟ ಹಾಗೂ ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸುತ್ತಿದ್ದರು. ಇದಕ್ಕೆ ಹಲವರ ಸಹಕಾರವಿತ್ತು. ಜೊತೆಗೆ, ಎಲ್ಲರೂ ಆಗಾಗ ಭೇಟಿ ಸಹ ಆಗುತ್ತಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಹಲವು ಪುರಾವೆಗಳು ಲಭ್ಯವಾಗಿವೆ’ ಎಂದು ತಿಳಿಸಿವೆ.

‘ಐಎಸ್‌ (ಇಸ್ಲಾಮಿಕ್ ಸ್ಟೇಟ್) ಉಗ್ರರ ಜೊತೆ ಒಡನಾಟ ಇಟ್ಟುಕೊಂಡಿದ್ದ ವ್ಯಕ್ತಿಗಳ ಜೊತೆಗೂ ಮುಜಮೀಲ್ ಸಂಪರ್ಕದಲ್ಲಿದ್ದ ಮಾಹಿತಿ ಲಭ್ಯವಾಗಿದೆ. ಆದರೆ, ಈ ಬಗ್ಗೆ ಮುಜಮೀಲ್ ಯಾವ ವಿಷಯವನ್ನೂ ಬಾಯ್ಬಿಡುತ್ತಿಲ್ಲ’ ಎಂದು ತಿಳಿಸಿವೆ.

‘ಕಚ್ಚಾ ಬಾಂಬ್ (ಐಇಡಿ) ತಯಾರಿಕೆಯಲ್ಲಿ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಹಾಗೂ ಮುಸಾವೀರ್, ಪರಿಣಿತರು. ಇವರಿಬ್ಬರು ತಯಾರಿಸಿದ್ದ ಬಾಂಬ್‌ಗಳನ್ನು ಶಿವಮೊಗ್ಗದಲ್ಲಿ ಪರೀಕ್ಷಾರ್ಥವಾಗಿ ಸ್ಫೋಟಿಸಲಾಗಿತ್ತು. ಈ ಸಂಗತಿ ಮುಜಮೀಲ್‌ಗೂ ಗೊತ್ತಿತ್ತು. ಶಿವಮೊಗ್ಗದಲ್ಲಿ ಸಿಕ್ಕ ಬಾಂಬ್‌ ಅವಶೇಷಗಳು ಹಾಗೂ ರಾಮೇಶ್ವರಂ ಕೆಫೆಯಲ್ಲಿ ಸಿಕ್ಕ ಅವಶೇಷಗಳು ಬಹುತೇಕ ಸಾಮ್ಯತೆ ಹೊಂದಿವೆ’ ಎಂದು ಮೂಲಗಳು ಹೇಳಿವೆ.

‘ಮುಸಾವೀರ್ ಹಾಗೂ ಅಬ್ದುಲ್‌ನನ್ನು ಮೊಬೈಲ್ ವಿಚಾರವಾಗಿ ಕೆಲ ಬಾರಿ ಮಾತ್ರ ಭೇಟಿಯಾಗಿದ್ದೆ ಎಂಬುದಾಗಿ ಮುಜಮೀಲ್ ಹೇಳುತ್ತಿದ್ದಾನೆ. ಆದರೆ, ಮುಜಮೀಲ್ ಹಲವು ಬಾರಿ ಭೇಟಿಯಾಗಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ತಿಳಿಸಿವೆ.

ಕಸ್ಟಡಿ ಅಂತ್ಯ ನಾಳೆ: ಬಂಧಿತ ಮುಜಮೀಲ್‌ನನ್ನು ಮಾರ್ಚ್ 28ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎನ್‌ಐಎ ಅಧಿಕಾರಿಗಳು, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದರು. ಕಸ್ಟಡಿ ಅವಧಿ ಏಪ್ರಿಲ್ 3ರಂದು ಅಂತ್ಯವಾಗಲಿದ್ದು, ಅಧಿಕಾರಿಗಳು ಶಂಕಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

‘ಮುಜಮೀಲ್‌ ಓಡಾಡಿದ್ದ ಸ್ಥಳ, ಇತರೆ ಶಂಕಿತನನ್ನು ಭೇಟಿಯಾಗಿದ್ದ ಪ್ರದೇಶ, ಮನೆ ಹಾಗೂ ಮಳಿಗೆಗಳಿಗೆ ಕರೆದೊಯ್ದು ಮಹಜರು ಪ್ರಕ್ರಿಯೆ ನಡೆಸಲಾಗುತ್ತಿದೆ. ಜೊತೆಗೆ, ಇತರೆ ಆರೋಪಿಗಳ ಪತ್ತೆಗಾಗಿಯೂ ಈತನಿಂದ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.