ADVERTISEMENT

ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಕ್ಯಾಮೆರಾ ಕಾವಲು: 18.34 ಲಕ್ಷ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 4:10 IST
Last Updated 17 ಏಪ್ರಿಲ್ 2023, 4:10 IST
ನಗರದ ಕಬ್ಬನ್ ರಸ್ತೆ ವೃತ್ತದಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ ಸಂಚಾರ ನಿರ್ವಹಣಾ ವ್ಯವಸ್ಥೆಯ ಕ್ಯಾಮೆರಾಗಳು – ಪ್ರಜಾವಾಣಿ ಚಿತ್ರ
ನಗರದ ಕಬ್ಬನ್ ರಸ್ತೆ ವೃತ್ತದಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ ಸಂಚಾರ ನಿರ್ವಹಣಾ ವ್ಯವಸ್ಥೆಯ ಕ್ಯಾಮೆರಾಗಳು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪತ್ತೆಗಾಗಿ ಕೃತಕ ಬುದ್ಧಿಮತ್ತೆ (ಎ.ಐ) ಸಂಚಾರ ನಿರ್ವಹಣಾ ವ್ಯವಸ್ಥೆಯಡಿ (ಐಟಿಎಂಎಸ್) ಆಧುನಿಕ ಕ್ಯಾಮೆರಾ ಅಳವಡಿಸಲಾಗಿದ್ದು, ಇದರಿಂದಾಗಿ ಮೂರು ತಿಂಗಳಿನಲ್ಲಿ 18.34 ಲಕ್ಷ ಪ್ರಕರಣಗಳು ದಾಖಲಾಗಿವೆ. ₹ 80.61 ಕೋಟಿ ದಂಡ ವಿಧಿಸಲಾಗಿದೆ.

ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಸಂಪರ್ಕ ರಹಿತವಾಗಿ ದಂಡ ವಿಧಿಸಲು ನಗರದ 50 ಜಂಕ್ಷನ್‌ಗಳಲ್ಲಿ 250 ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಸಲಾಗಿದೆ. ದಿನದ 24 ಗಂಟೆಯೂ ಕ್ಯಾಮೆರಾಗಳು ಸಕ್ರಿಯವಾಗಿದ್ದು, ನಿಯಮ ಉಲ್ಲಂಘಿಸುವವರ ಫೋಟೊವನ್ನು ಕ್ಲಿಕ್ಕಿಸುತ್ತಿವೆ. ವಾಹನ ನೋಂದಣಿ ಸಂಖ್ಯೆ ಆಧರಿಸಿ ಐಟಿಎಂಎಸ್ ಮೂಲಕ ಮಾಲೀಕರಿಗೆ ದಂಡದ ಬಗ್ಗೆ ಸಂದೇಶಗಳು ರವಾನೆಯಾಗುತ್ತಿವೆ.

ಅತೀ ವೇಗದ ಚಾಲನೆ, ಸಿಗ್ನಲ್ ಜಂಪ್, ಜಿಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್ ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆ ಉಲ್ಲಂಘನೆ ಕ್ಯಾಮೆರಾದಲ್ಲಿ ಸೆರೆಯಾಗಲಿದೆ.

ADVERTISEMENT

‘ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಕರ್ತವ್ಯ. ನಿಯಮ ಉಲ್ಲಂಘನೆ ಪತ್ತೆ ಮಾಡುವುದರಲ್ಲಿ ಹೆಚ್ಚು ಸಮಯ ಹೋಗುತ್ತಿತ್ತು. ಹೀಗಾಗಿ, ಸ್ವಯಂಚಾಲಿತ ಕ್ಯಾಮೆರಾ ಅಳವಡಿಸಲಾಗಿದೆ. ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಹೇಳಿದರು.

‘ಹೆಲ್ಮೆಟ್‌ ಧರಿಸದ 10.50 ಲಕ್ಷ ಸವಾರರಿಗೆ ದಂಡ’
‘ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ್ದ ಸವಾರ ಹಾಗೂ ಹಿಂಬದಿ ಸವಾರನ ಫೋಟೊವನ್ನು ಕ್ಯಾಮೆರಾಗಳು ಸೆರೆ ಹಿಡಿದಿವೆ. ನಿಯಮ ಉಲ್ಲಂಘಿಸಿದ್ದ 10.50 ಲಕ್ಷ ಮಂದಿಗೆ ದಂಡ ವಿಧಿಸಲಾಗಿದ್ದು, ಅವರಿಗೆ ಸಂದೇಶ ಸಹ ಕಳುಹಿಸಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘1,197 ಅಪಘಾತ, 205 ಸಾವು’
‘2023ರ ಜನವರಿಯಿಂದ ಮಾರ್ಚ್‌ ಅಂತ್ಯದವರೆಗೆ ನಗರದಲ್ಲಿ 1197 ಅಪಘಾತಗಳು ಸಂಭವಿಸಿದೆ. ಇದರಲ್ಲಿ 205 ಮಂದಿ ಮೃತಪಟ್ಟಿದ್ದಾರೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಹೆಲ್ಮೆಟ್‌ ಧರಿಸದ 10.50 ಲಕ್ಷ ಸವಾರರಿಗೆ ದಂಡ’
‘ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಲಾಯಿಸಿದ್ದ ಸವಾರ ಹಾಗೂ ಹಿಂಬದಿ ಸವಾರನ ಫೋಟೊವನ್ನು ಕ್ಯಾಮೆರಾಗಳು ಸೆರೆ ಹಿಡಿದಿವೆ. ನಿಯಮ ಉಲ್ಲಂಘಿಸಿದ್ದ 10.50 ಲಕ್ಷ ಮಂದಿಗೆ ದಂಡ ವಿಧಿಸಲಾಗಿದ್ದು, ಅವರಿಗೆ ಸಂದೇಶ ಸಹ ಕಳುಹಿಸಲಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.