ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಕಂಪನಿಯ ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮಾಜಿ ಸಚಿವ ಆರ್.ರೋಷನ್ ಬೇಗ್ ವಿರುದ್ಧದ ವಿಚಾರಣೆಗೆ ತಡೆ ಕೋರಿದ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಕುರಿತಂತೆ ರೋಷನ್ ಬೇಗ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯ ಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಪ್ರತಿವಾದಿ ಸಿಬಿಐ, ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ ಅಧಿಕಾರಿ ಹಾಗೂ ದೂರುದಾರರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿದೆ.
ಹಗರಣದಲ್ಲಿ ಬೇಗ್ ವಿರುದ್ಧ ಐಪಿಸಿ ಕಲಂ 406, 409 ಮತ್ತು 120 ಬಿ ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆದಾರರ ಹಿತರಕ್ಷಣಾ (ಕೆಪಿಐಡಿಇಎಫ್) ಕಾಯ್ದೆ-2004ರ ಅನ್ವಯ 2019ರ ಅಕ್ಟೋಬರ್ ನಲ್ಲಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಈ ಸಂಬಂಧ ಸಿಟಿ ಸಿವಿಲ್ ಕೋರ್ಟ್ ನ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಎಂದು ಬೇಗ್ ಕೋರಿದ್ದಾರೆ.
ಆರೋಪವೇನು?: ಪ್ರಕರಣಕ್ಕೆ ಸಂಬಂಧಿಸಿದಂತೆ ಇಷ್ತಿಯಾಕ್ ಎಂಬುವರು ಪೊಲೀಸರ ಮುಂದೆ ನೀಡಿದ್ದ ಸ್ವಯಂ ಹೇಳಿಕೆಯಲ್ಲಿ, ‘ಮನ್ಸೂರ್ ಖಾನ್ ಅವರು ರೋಷನ್‌ಬೇಗ್‌ಗೆ 2018ರ ವಿಧಾನಸಭೆ ಚುನಾವಣೆಯಲ್ಲಿ ₹ 2 ಕೋಟಿಗೂ ಹೆಚ್ಚು ಹಣ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದರ ಅನುಸಾರ ಅವರನ್ನು ಪ್ರಕರಣದ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಬೇಗ್ಐಎಂಎಕಂಪೆನಿ ಪ್ರವರ್ತಕರಾಗಿ (ಪ್ರಮೋಟರ್) ಸಂಸ್ಥೆಯ ವಾಣಿಜ್ಯ ಚಟುವಟಿಕೆ ಫಲಾನುಭವಿ' ಎಂಬುದು ಸಿಬಿಐ ಅರೋಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.