ADVERTISEMENT

ಬೆಂಗಳೂರು: ವಿಷ ಆಹಾರ ಸೇವಿಸಿ ಮಗು ಸಾವು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2024, 16:18 IST
Last Updated 7 ಅಕ್ಟೋಬರ್ 2024, 16:18 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಭುವನೇಶ್ವರಿ ನಗರದ ಮನೆಯೊಂದರಲ್ಲಿ ಫ್ರಿಜ್‌ನಲ್ಲಿಟ್ಟಿದ್ದ ಆಹಾರ ಸೇವಿಸಿ ಅಸ್ವಸ್ಥಗೊಂಡಿದ್ದ ಮಗು ಸೋಮವಾರ ಮಧ್ಯಾಹ್ನ ಮೃತಪಟ್ಟಿದೆ. ಮಗುವಿನ ತಂದೆ– ತಾಯಿ ಸ್ಥಿತಿ ಗಂಭೀರವಾಗಿದೆ.

ಧೀರಜ್‌(5) ಮೃತಪಟ್ಟ ಮಗು.

ADVERTISEMENT

ಮಗುವಿನ ತಂದೆ ಬಾಲರಾಜ್‌ (40) ಹಾಗೂ ತಾಯಿ ನಾಗಲಕ್ಷ್ಮಿ(36) ಅವರು ಕೆಂಪೇಗೌಡ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ(ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಣ್ಣು ಮಗುವನ್ನು ಅಜ್ಜಿ ಮನೆಗೆ ಕಳುಹಿಸಿದ್ದರಿಂದ ಅಪಾಯದಿಂದ ಪಾರಾಗಿದೆ.

‘ಕೆಂಪೇಗೌಡ ಆಸ್ಪತ್ರೆಯ ವೈದ್ಯರು ಪೊಲೀಸರಿಗೆ ಪ್ರಾಥಮಿಕ ವರದಿ ನೀಡಿದ್ದು, ಸೇವಿಸಿದ್ದ ಆಹಾರವು ವಿಷವಾದ ಪರಿಣಾಮ ಮಗು ಮೃತಪಟ್ಟಿದೆ’ ಎಂದು ಮೂಲಗಳು ತಿಳಿಸಿವೆ. 

‘ಬಾಲರಾಜು ಅವರು ಸ್ವಿಗ್ಗಿಯಲ್ಲಿ ಆಹಾರ ಪದಾರ್ಥಗಳ ಡೆಲಿವರಿ ಕೆಲಸ ಮಾಡುತ್ತಿದ್ದರು. ನಾಗಲಕ್ಷ್ಮಿ ಅವರು ಗೃಹಿಣಿ. ಪಿತೃಪಕ್ಷದ ನಿಮಿತ್ತ ಮನೆಯಲ್ಲಿ ವಿವಿಧ ಬಗೆಯ ಆಹಾರ ಪದಾರ್ಥ ತಯಾರಿಸಿದ್ದರು. ಉಳಿದ ಆಹಾರವನ್ನು ಮನೆಯಲ್ಲಿದ್ದ ಫ್ರಿಜ್‌ನಲ್ಲಿ ಇಟ್ಟಿದ್ದರು. ಹದಿನೈದು ದಿನಗಳ ಹಿಂದೆ ಕರಿದಿದ್ದ ಹಪ್ಪಳವನ್ನೂ ಫ್ರಿಜ್‌ನಲ್ಲಿ ಇಡಲಾಗಿತ್ತು. ಆ ಆಹಾರವನ್ನು ಮೂವರೂ ಭಾನುವಾರ ರಾತ್ರಿ ಸೇವಿಸಿದ್ದರು. ಸೋಮವಾರ ಮುಂಜಾನೆ ಮಗುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಮನೆಯಲ್ಲಿದ್ದ ಔಷಧವನ್ನು ನೀಡಿ ಮಗುವನ್ನು ಮಲಗಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಬೆಳಿಗ್ಗೆ ಏಳು ಗಂಟೆಗೆ ನಿದ್ರೆಯಿಂದ ಎದ್ದಿದ್ದ ಮಗು ಸ್ವಲ್ಪ ಸಮಯ ಆಟವಾಡಿತ್ತು. ಬೆಳಿಗ್ಗೆ 9ರ ಸುಮಾರಿಗೆ ಪೋಷಕರೂ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರಾದ ಮೂವರನ್ನೂ ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯದಲ್ಲಿ ಮಗು ಮೃತಪಟ್ಟಿತ್ತು’ ಎಂದು ಪೊಲೀಸರು ಹೇಳಿದರು.

ಎಫ್‌ಎಸ್‌ಎಲ್‌ಗೆ ಆಹಾರ ರವಾನೆ: ‘ಮಗುವಿನ ತಂದೆ ಫುಡ್ ಡೆಲಿವರಿ ಮಾಡುತ್ತಿದ್ದ ಕಾರಣಕ್ಕೆ ಹೋಟೆಲ್‌ ಅಥವಾ ಬೇಕರಿಯಿಂದ ಯಾವುದಾದರೂ ಆಹಾರ ಪದಾರ್ಥವನ್ನು ಮನೆಗೆ ತಂದಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಹೊರಗಿನಿಂದ ಆಹಾರ ಪದಾರ್ಥ ತಂದಿದ್ದ ಎಲ್ಲ ಪೊಟ್ಟಣಗಳನ್ನು ಜಪ್ತಿ ಮಾಡಲಾಗಿದೆ. ಫ್ರಿಜ್‌ನಲ್ಲಿದ್ದ ಆಹಾರವನ್ನೂ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಘಟನೆ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಾಥಮಿಕ ಮಾಹಿತಿಯಂತೆ ಆಹಾರ ವಿಷವಾಗಿದ್ದರಿಂದಲೇ ಅನಾಹುತ ನಡೆದಿದೆ ಎಂಬುದು ಗೊತ್ತಾಗಿದೆ. ಅದು ಮನೆಯ ಆಹಾರವೇ? ಅಥವಾ ಹೊರಗಿನಿಂದ ತರಿಸಿರುವ ಆಹಾರವೇ ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಕೇಕ್ ಸೇವನೆ ಬಳಿಕ ಅಸ್ವಸ್ಥ?: ಮತ್ತೊಂದೆಡೆ ಫುಡ್ ಡೆಲವರಿ ಕೆಲಸ ಮಾಡುವ ಬಾಲರಾಜ್, ಗ್ರಾಹಕರೊಬ್ಬರು ಆನ್‌ಲೈನ್ ಕೇಕ್ ಆರ್ಡರ್ ಮಾಡಿ, ಬಳಿಕ ರದ್ದುಗೊಳಿಸಿದ್ದರು ಎನ್ನಲಾಗಿದೆ. ಅದನ್ನು ಮನೆಗೆ ತಂದು ಫ್ರಿಜ್‌ನಲ್ಲಿ ಇರಿಸಿದ್ದರು. ಭಾನುವಾರ ರಾತ್ರಿ ಊಟ ಮಾಡುವ ಸಂದರ್ಭದಲ್ಲಿ ಪತ್ನಿ, ಪುತ್ರನ ಜತೆಗೆ ಕೇಕ್ ಸಹ ಸೇವಿಸಿದ್ದರು. ಬಳಿಕ ಮೂವರೂ ಅಸ್ವಸ್ಥರಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಎಲ್ಲ ಆಯಾಮದಲ್ಲೂ ಪರಿಶೀಲನೆ ನಡೆಸಲಾಗುತ್ತಿದೆ. ಬಾಲರಾಜು ಅವರ ಹೇಳಿಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.