ADVERTISEMENT

ಚರ್ಚ್‌ಸ್ಟ್ರೀಟ್‌ ಸೌಂದರ್ಯೀಕರಣ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 23:08 IST
Last Updated 18 ನವೆಂಬರ್ 2024, 23:08 IST
ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ –ಪ್ರಜಾವಾಣಿ ಚಿತ್ರಗಳು
ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದ ಸಾಂಸ್ಕೃತಿಕ ಪರಂಪರೆಯ ಸಂಭ್ರಮಾಚರಣೆ ಮತ್ತು ಅದರ ವೈಭವ ಹೆಚ್ಚಿಸುವುದಕ್ಕೆ ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಫೌಂಡೇಷನ್‌ ಆಯೋಜಿಸಿರುವ ‘ಬಿಎಲ್‌ಆರ್‌ ಹಬ್ಬ’ಕ್ಕಾಗಿ ಚರ್ಚ್‌ಸ್ಟ್ರೀಟ್‌ ಅನ್ನು ಸೌಂದರ್ಯೀಕರಣ ಮಾಡಲಾಗುತ್ತಿದೆ.
ಬಿಬಿಎಂಪಿ ಸಹಭಾಗಿತ್ವದಲ್ಲಿ
ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಫೌಂಡೇಷನ್ ನವೆಂಬರ್ 30ರಿಂದ ‘ಬಿಎಲ್‌ಆರ್‌ ಹಬ್ಬ’ ಆಯೋಜಿಸಿದೆ.

‘ನಮ್ಮ ಬೆಂಗಳೂರು, ನಮ್ಮ ಕೊಡುಗೆ’ ಕಾರ್ಯಕ್ರಮದ ಭಾಗವಾಗಿ ಚರ್ಚ್‌ಸ್ಟ್ರೀಟ್‌ ಅನ್ನು ದುರಸ್ತಿಗೊಳಿಸಿ, ಸುಂದರಗೊಳಿಸುವ ಕಾಮಗಾರಿ ನಡೆಸಲಾಗುತ್ತಿದೆ.
ಬಿಬಿಎಂಪಿ ಜೊತೆಗಿನ ಒಪ್ಪಂದದಂತೆ ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಚರ್ಚ್‌ಸ್ಟ್ರೀಟ್‌ ಸೇರಿದಂತೆ
ರಿಚ್ಮಂಡ್ ರಸ್ತೆ ಮತ್ತು ವಿಠ್ಠಲ ಮಲ್ಯ ರಸ್ತೆಗೆ ಹೊಸ
ರೂಪ ನೀಡಲಿದೆ. ಈ ನವೀಕರಣ ಯೋಜನೆಯಲ್ಲಿ ರಸ್ತೆ, ಪಾದಚಾರಿ ರಸ್ತೆ ದುರಸ್ತಿ ಮತ್ತು ಹೊಸ ಬೀದಿದೀಪಗಳ ಅಳವಡಿಕೆ, ಕಸ ವಿಲೇವಾರಿ ಸೌಲಭ್ಯ, ಒಳಚರಂಡಿ ಮತ್ತು ಆಲಂಕಾರಿಕ ಹಸಿರು ಹೊದಿಕೆಯ ಸೌಲಭ್ಯಗಳಿವೆ. ಒಪ್ಪಂದದಂತೆ ಅನ್‌ಬಾಕ್ಸಿಂಗ್‌ ಬಿಎಲ್ಆರ್ ಎರಡು ವರ್ಷ ಕಾಲ ಚರ್ಚ್‌ಸ್ಟ್ರೀಟ್‌ ಅನ್ನು ನಿರ್ವಹಿಸಲಿದೆ.

‘ಉತ್ತಮ ಬೆಂಗಳೂರು ರೂಪಿಸುವಲ್ಲಿ ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಬದ್ಧತೆಯು ಚರ್ಚ್‌ಸ್ಟ್ರೀಟ್‌ಗೆ ಹೊಸ ರೂಪ ನೀಡುತ್ತಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವಕ್ಕೆ ಇದು ನಿದರ್ಶನವಾಗಿದೆ.

ADVERTISEMENT

ಈ ಪ್ರತಿಷ್ಠಿತ ರಸ್ತೆಯನ್ನು ನಮ್ಮ ನಗರದ ಅತ್ಯುತ್ತಮ ಹಾಗೂ ಅತ್ಯಾಕರ್ಷಕ ತಾಣವನ್ನಾಗಿ ಪರಿವರ್ತಿಸಲು ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಮುಂದಾಗಿರುವುದು ಕಂಡು ನಮಗೆ ಸಂತಸವಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ‘ಬೆಂಗಳೂರಿನ ನಗರ ಪ್ರದೇಶಗಳನ್ನು ಸುಧಾರಿಸಲು ಸಂಸ್ಥೆಯು ಗಮನ ಕೇಂದ್ರೀಕರಿಸಿದೆ.

ಚರ್ಚ್‌ಸ್ಟ್ರೀಟ್‌ ಅನ್ನು ಸ್ಥಳೀಯರು ಮತ್ತು ದೇಶ ವಿದೇಶಗಳಿಂದ ಭೇಟಿ ನೀಡುವವರಿಗೆ ಸ್ಪೂರ್ತಿದಾಯಕ ಸ್ಥಳವನ್ನಾಗಿಸುವುದು ನಮ್ಮ ಗುರಿಯಾಗಿದೆ’ ಎಂದು ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಫೌಂಡೇಷನ್‌ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಮಾಹಿತಿ ನೀಡಿದರು.

₹18 ಕೋಟಿ: ಟೆಂಡರ್‌ಶ್ಯೂರ್‌ ಯೋಜನೆಯಲ್ಲಿ
ಚರ್ಚ್‌ಸ್ಟ್ರೀಟ್‌ ಅನ್ನು ₹18 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬಿಬಿಎಂಪಿ ಅಭಿವೃದ್ಧಿ ಮಾಡಿತ್ತು.
ಹಲವು ಬಾರಿ ಕಲ್ಲುಗಳು ಕಿತ್ತು ಬಿದ್ದು, ವಾಹನ ಸಂಚಾರರು ಆಯತಪ್ಪಿ ಕೆಳಗೆ ಬಿದ್ದಿರುವ ಪ್ರಕರಣಗಳೂ ಸಾಕಷ್ಟಿವೆ. ಬಿಬಿಎಂಪಿ ಆಗಾಗ್ಗೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದ್ದ ಚರ್ಚ್ ಸ್ಟ್ರೀಟ್ ಅನ್ನು, ಈಗ ಖಾಸಗಿ ಸಹಭಾಗಿತ್ವದಲ್ಲಿ ಸುಂದರೀಕರಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.