ADVERTISEMENT

ಬೆಂಗಳೂರು: ನಾಗರಿಕರಿಗೆ ‘ಕೆರೆ ಮಿತ್ರ’ರಾಗಲು ಅವಕಾಶ

ಉದ್ಯಾನಗಳಿಗೆ ‘ಹಸಿರು ಮಿತ್ರ’: ಅ.30ರವರೆಗೆ ನೋಂದಣಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 16:27 IST
Last Updated 20 ಅಕ್ಟೋಬರ್ 2023, 16:27 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆ ಹಾಗೂ ಉದ್ಯಾನಗಳ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತರು ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ರಾಗಿ ನೋಂದಾಯಿಸಿಕೊಳ್ಳಬಹುದು.

ನಗರದ ನಿವಾಸಿಗಳು ತಮ್ಮ ವಾರ್ಡ್‌ನಲ್ಲಿರುವ ಕೆರೆ ಅಥವಾ ಉದ್ಯಾನದ ನಿರ್ವಹಣೆ ಕಾಮಗಾರಿ ಬಗ್ಗೆ ಮೇಲ್ವಿಚಾರಣೆ ನಡೆಸಲು ಆಸಕ್ತಿ ಹೊಂದಿದ್ದರೆ https://bbmp.gov.in/ ಜಾಲತಾಣದಲ್ಲಿ ಅ.30ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು.

ADVERTISEMENT

ಹೆಸರು ನೋಂದಾಯಿಸಿದವರಲ್ಲಿ ಯಾದ್ರಚ್ಛಿಕವಾಗಿ(ರ‍್ಯಾಂಡಮ್‌) 10 ಜನರನ್ನು ಆಯ್ಕೆ ಮಾಡಲಾಗುತ್ತದೆ. ಅವರು ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ರಾಗಿ ಒಂದು ತಿಂಗಳು ಕೆರೆ ಅಥವಾ ಉದ್ಯಾನದ ಮೇಲ್ವಿಚಾರಣೆಯನ್ನು ನಿರ್ವಹಿಸಬಹುದು. ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್‌ ವಿಜಯಕುಮಾರ್‌ ಹರಿದಾಸ್‌ ತಿಳಿಸಿದರು.

ಕೆರೆಯಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿ, ನಿರ್ವಹಣೆ ಕಾಮಗಾರಿಗಳನ್ನು  ಪ್ರತಿನಿತ್ಯ ಪರಿಶೀಲಿಸಿ, ಅಂತರ್ಜಾಲದಲ್ಲಿ ದಾಖಲಿಸಬೇಕು. ಈ ಪ್ರಕ್ರಿಯೆಗೆ ಮುಂದಿನ ದಿನಗಳಲ್ಲಿ ಆ್ಯಪ್‌ ಕೂಡ ಕಾರ್ಯನಿರ್ವಹಿಸಲಿದೆ. ಕೆರೆ ಹಾಗೂ ಉದ್ಯಾನಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದರು.

‘ಬ್ರ್ಯಾಂಡ್‌ ಬೆಂಗಳೂರು ಸಮ್ಮೇಳನ’ದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ನಾಗರಿಕರಿಗೆ ಕೆರೆ, ಉದ್ಯಾನಗಳ ನಿರ್ವಹಣೆ ನೀಡುವ ಬಗ್ಗೆ ಭರವಸೆ ನೀಡಿದರು. ಅವರ ಯೋಜನೆಯಂತೆ ಪ್ರಥಮ ಹಂತವಾಗಿ ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ ಆರಂಭವಾಗುತ್ತಿದೆ’ ಎಂದು ಮಾಹಿತಿ ನೀಡಿದ್ದರು.

ಆರಂಭವಾಗದ ಲಿಂಕ್‌: ಕೆರೆ ಅಥವಾ ಉದ್ಯಾನದ ನಿರ್ವಹಣೆ ಕಾಮಗಾರಿ ಮೇಲ್ವಿಚಾರಣೆಗೆ ವೆಬ್‌ಸೈಟ್‌ನಲ್ಲಿ (https://bbmp.gov.in/) ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶವಿದೆ.

ಆದರೆ, ಎಂದಿನಂತೆ ಬಿಬಿಎಂಪಿ ಐಟಿ ವಿಭಾಗ ನಿಧಾನಗತಿಯಲ್ಲಿದೆ. ಶುಕ್ರವಾರದ ರಾತ್ರಿಯವರೆಗೂ ನೋಂದಣಿಯ ಲಿಂಕ್‌ ಅಪ್‌ಲೋಡ್‌ ಆಗಿರಲಿಲ್ಲ ಎಂದು ಪರಿಸರ ಕಾರ್ಯಕರ್ತ ರಾಮ್‌ಪ್ರಸಾದ್‌ ದೂರಿದರು.

‘ಲಿಂಕ್‌ ಅಪ್‌ಲೋಡ್ ಮಾಡಲು ಐಟಿ ವಿಭಾಗಕ್ಕೆ ತಿಳಿಸಲಾಗಿದೆ. ಆದಷ್ಟು ಶೀಘ್ರವಾಗಿ ಲಿಂಕ್‌ ಲಭ್ಯವಾಗಲಿದೆ’ ಎಂದು ವಿಜಯಕುಮಾರ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.