ADVERTISEMENT

ಬೆಂಗಳೂರು ಜನದನಿ | ಕುಂದು ಕೊರತೆ - ಅಗೆದ ರಸ್ತೆ ಸರಿಪಡಿಸಿ

ಪ್ರಜಾವಾಣಿ ವಿಶೇಷ
Published 19 ಫೆಬ್ರುವರಿ 2023, 22:30 IST
Last Updated 19 ಫೆಬ್ರುವರಿ 2023, 22:30 IST
   

ಅಗೆದ ರಸ್ತೆ ಸರಿಪಡಿಸಿ

ಮಹದೇವಪುರ ಕ್ಷೇತ್ರದ ವಾರ್ಡ್ ಸಂಖ್ಯೆ 85ರ ದೊಡ್ಡನೆಕ್ಕುಂದಿಯ ವಿನಾಯಕ ಲೇಔಟ್‌ನಲ್ಲಿ ಕಳೆದ ತಿಂಗಳು ಚರಂಡಿ, ರಸ್ತೆ ಕಾಮಗಾರಿ ಪ್ರಾರಂಭಿಸಲಾಗಿತ್ತು. ಕೆಲಸ ಪೂರ್ಣಗೊಳಿಸದೇ ರಸ್ತೆಯನ್ನು ಅಗೆದು, ಚರಂಡಿ ಮೇಲಿನ ಚಪ್ಪಡಿ ಕಲ್ಲುಗಳನ್ನೂ ಕಿತ್ತು ಹೋಗಿದ್ದಾರೆ. ಈವರೆಗೂ ರಸ್ತೆ ಮತ್ತು ಚರಂಡಿಯನ್ನು ದುರಸ್ತಿಗೊಳಿಸಿಲ್ಲ. ಈ ಸಂಬಂಧ ಸ್ಥಳೀಯ ಎಂಜಿನಿಯರ್‌ಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಇವತ್ತು ನಾಳೆ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಓಡಾಡಲು ಕಷ್ಟವಾಗುತ್ತಿದೆ.

-ಎಸ್. ಪ್ರಭಾಕರ್, ಸ್ಥಳೀಯ ನಿವಾಸಿ

ADVERTISEMENT
ಮಹದೇವಪುರದ ದೊಡ್ಡನೆಕ್ಕುಂದಿಯ ವಿನಾಯಕ ಲೇಔಟ್‌ ರಸ್ತೆ.



***

ಪಾದಚಾರಿ ಮಾರ್ಗದಲ್ಲಿ ಜಲ್ಲಿಕಲ್ಲು

ಹಲಸೂರು ಮೆಟ್ರೊ ನಿಲ್ದಾಣಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಜಲ್ಲಿಕಲ್ಲು, ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಹಾಕಲಾಗಿದೆ. ಇದರಿಂದಾಗಿ ಪಾದಚಾರಿಗಳು ಹಳೇ ಮದ್ರಾಸ್‌ ಮುಖ್ಯರಸ್ತೆಯಲ್ಲಿ ನಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಪಾದಚಾರಿಗಳು ಜೀವ ಭಯದಲ್ಲಿ ಓಡಾಡಬೇಕಾಗಿದೆ. ಪಾದಚಾರಿ ಮಾರ್ಗದಲ್ಲಿ ಹಾಕಿರುವ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಕೂಡಲೇ ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.

-ರಾಜೇಂದ್ರ, ಸುಮಂತ್, ಪಾದಚಾರಿಗಳು

ಹಲಸೂರು ಮೆಟ್ರೊ ನಿಲ್ದಾಣಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಜಲ್ಲಿಕಲ್ಲು

***

‘ಕೇಬಲ್‌ ತೆರವುಗೊಳಿಸಿ’

ಜೆ.ಸಿ.ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕೇಬಲ್‌ಗಳು ಬಿದ್ದಿದ್ದು, ಸಾರ್ವಜನಿಕರು ಓಡಾಡಲು ಪ್ರಯಾಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೇಬಲ್‌ ಸರಿಯಾಗಿ ಅಳವಡಿಸದ ಕಾರಣ ಪಾದಚಾರಿ ಮಾರ್ಗದ ತುಂಬೆಲ್ಲಾ ಹರಡಿಕೊಂಡಿದೆ. ಇದರಿಂದ ಪಾದಚಾರಿಗಳು ಮುಖ್ಯರಸ್ತೆಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಾಹನಗಳ ಅತಿವೇಗದಿಂದಾಗಿ ರಸ್ತೆ ಅಂಚಿನಲ್ಲಿ ಓಡಾಡಲು ಭಯಪಡಬೇಕಾದ ಪರಿಸ್ಥಿತಿ ಇದೆ. ಬಿಬಿಎಂಪಿ, ಬೆಸ್ಕಾಂ ಸಿಬ್ಬಂದಿ ತುರ್ತಾಗಿ ದುರಸ್ತಿ ಕೈಗೊಂಡು ನಾಗರಿಕರಿಗೆ ಆಗುತ್ತಿರುವ ಸಮಸ್ಯೆ ಪರಿಹರಿಸಬೇಕು.

-ಸಂತೋಷ್‌ ಕುಮಾರ್, ಪಾದಚಾರಿ

ಜೆ.ಸಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ಹರಡಿಕೊಂಡಿರುವ ಕೇಬಲ್‌ಗಳು

***

‘ನಿರ್ವಹಣೆಯಾಗದ ವಿಶ್ವೇಶ್ವರಯ್ಯ ಉದ್ಯಾನ’

ಬಸವೇಶ್ವರನಗರದ 3ನೇ ಹಂತದ ಯುವಿಸಿಇ ಲೇಔಟ್‌ನಲ್ಲಿರುವ ವಿಶ್ವೇಶ್ವರಯ್ಯ ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಬಿಬಿಎಂಪಿಯಿಂದ ಗುತ್ತಿಗೆ ನಿರ್ವಹಣೆ ಪಡೆದವರೂ ನಿರ್ಲಕ್ಷ್ಯಿಸಿದ್ದಾರೆ. ವ್ಯಾಯಾಮ, ವಾಯುವಿಹಾರ ಹಾಗೂ ವಿಶ್ರಾಂತಿಗೆ, ಮಕ್ಕಳ ಆಟಕ್ಕೆ ಅಗತ್ಯವಿರುವ ಉದ್ಯಾನದ ನಿರ್ವಹಣೆಗೆ ನಿರ್ಲಕ್ಷ್ಯ ವಹಿಸಲಾಗಿದೆ. ಕಸ, ಕಡ್ಡಿ, ಪ್ಲಾಸ್ಟಿಕ್‌ ವಸ್ತುಗಳು, ಮರಗಳ ತರಗೆಲೆಗಳು ಉದ್ಯಾನದಲ್ಲಿ ಹರಡಿಕೊಂಡಿರುತ್ತವೆ. ಇದರಿಂದ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಕ್ಕಳು, ಮಹಿಳೆಯರು, ಹಿರಿಯ ನಾಗರಿಕರಿಗೆ ಇಲ್ಲಿ ಸರಿಯಾಗಿ ಶೌಚಾಲಯದ ವ್ಯವಸ್ಥೆಯೂ ಇಲ್ಲ. ರಾತ್ರಿ ಸಮಯದಲ್ಲಿ ಉದ್ಯಾನದ ಗೇಟ್‌ಗಳಿಗೆ ಬೀಗ ಹಾಕುವುದಿಲ್ಲ. ಇದರಿಂದ ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಕೂಡಲೇ ಬಿಬಿಎಂಪಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಉದ್ಯಾನವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು.

- ಜೆ. ಮೋಹನ್‌ ರೆಡ್ಡಿ, ಬಸವೇಶ್ವರನಗರದ ನಿವಾಸಿ

ವಿಶ್ವೇಶ್ವರಯ್ಯ ಉದ್ಯಾನದ ದುಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.