ಬೆಂಗಳೂರು: ಯೂಸುಫ್ ಷರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರು, ಮಾಜಿ ಶಾಸಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ವಿ. ದೇವರಾಜ್ ವಿರುದ್ಧ ಯಾವುದೇ ತೆರನಾದ ಹೇಳಿಕೆ ನೀಡದಂತೆ ಸಿಟಿ ಸಿವಿಲ್ ಕೋರ್ಟ್‌ನ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಆರ್.ವಿ. ದೇವರಾಜ್ ಸಲ್ಲಿಸಿರುವ ಅಸಲು ದಾವೆ ವಿಚಾರಣೆ ನಡೆಸಿದ 39ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ ಯಶವಂತ್ ಈ ಕುರಿತಂತೆ ಆದೇಶಿಸಿದ್ದು, ‘ಮುಂದಿನ ವಿಚಾರಣೆಯವರೆಗೆ ಈ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕ ಆದೇಶ ಜಾರಿಯಲ್ಲಿರುತ್ತದೆ’ ಎಂದು ಸೂಚಿಸಿದೆ.
ವಿಚಾರಣೆ ವೇಳೆ ದೇವರಾಜ್ ಪರ ವಾದ ಮಂಡಿಸಿದ ಹೈಕೋರ್ಟ್ ವಕೀಲ ಎಚ್.ಸುನಿಲ್ ಕುಮಾರ್, ‘ಕೆಜಿಎಫ್ ಬಾಬು ಅವರು ದೇವರಾಜ್ ವಿರುದ್ಧ ಖಾಸಗಿ ಟಿವಿ ಚಾನೆಲ್‌ಗಳಿಗೆ ನೀಡಿರುವ ಸಂದರ್ಶನಗಳಲ್ಲಿ ಅವರು ಆಕ್ಷೇಪಾರ್ಹ ಪದಗಳನ್ನು ಬಳಕೆ ಮಾಡಿದ್ದು, ಇದರ ವಿಡಿಯೊ ತುಣಕುಗಳು ಸಾಮಾಜಿಕ ಜಾಲತಾಣದಲ್ಲಿ ಲಭ್ಯವಿದೆ. ಇಂತಹ ಆಧಾರರಹಿತ ಹೇಳಿಕೆಗಳಿಂದ ದೇವರಾಜ್ ಅವರ ರಾಜಕೀಯ ಬದುಕು ಮತ್ತು ಗೌರವಕ್ಕೆ ಹಾನಿಯಾಗುತ್ತಿದೆ. ಆದ್ದರಿಂದ, ಇದನ್ನು ಪ್ರತಿಬಂಧಿಸಬೇಕು’ ಎಂದು ಕೋರಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಿದ್ದಾರೆ.
ದಾವೆಯಲ್ಲಿ ಏನಿದೆ?: ‘ದೇವರಾಜ್ ಅವರನ್ನು ಕೆಜಿಎಫ್ ಬಾಬು ಕಳ್ಳ, ಗೂಂಡಾ, ಮಾರ್ಕೆಟ್ ದೇವಿ, ತರಕಾರಿ ಮಾರುವವರಿಂದ, ಬಿಲ್ಡರ್ಸ್‌ಗಳಿಂದ ಮಾಮೂಲಿ ವಸೂಲಿ ಮಾಡುತ್ತಿದ್ದಾರೆ. ಈತ ಈಡಿಯಟ್, ನೀಚ ವ್ಯಕ್ತಿ, ಭಯೋತ್ಪಾದಕ, ಆರೋಗ್ಯ ಕೆಟ್ಟಿದ್ದು, ಅವರನ್ನು ಹಿಡಿದು ಎತ್ತಲು ಇಬ್ಬರು ಬೇಕು. ಎಂಎಲ್ಎ ಆಗಲು ನಾಲಾಯಕ್, ಕೆಲಸಕ್ಕೆ ಬಾರದ ವ್ಯಕ್ತಿ, ಅವರಿಗೆ ಮತ ಹಾಕಬಾರದು... ಇತ್ಯಾದಿ ಅವಮಾನಕಾರಿ ಪದಗಳನ್ನು ಬಳಕೆ ಮಾಡುತ್ತಿದ್ದಾರೆ’ ಎಂದು ಆಕ್ಷೇಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.