ಬೆಂಗಳೂರು: ‘ಕುಡಿಯುವ ನೀರು ಪೂರೈಕೆ, ತ್ಯಾಜ್ಯ ನಿರ್ವಹಣೆ, ಸಂಚಾರ ದಟ್ಟಣೆ ನಿಯಂತ್ರಣ ಹಾಗೂ ವಾಯು ಗುಣಮಟ್ಟದಲ್ಲಿ ನಗರ ಹಿಂದೆ ಉಳಿದಿದೆ’ ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಾಕೇಶ್ ಸಿಂಗ್ ಹೇಳಿದರು.
‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ’ ಅನುಷ್ಠಾನದ ಮೂಲಕ ಇಂತಹ ಎಲ್ಲ ಸಮಸ್ಯೆಯನ್ನು ಪರಿಹರಿಸಬಹುದು’ ಯೋಜನೆ ಸಂಬಂಧ ನಡೆದ ಕಾರ್ಯಾಗಾರದಲ್ಲಿ ತಿಳಿಸಿದರು.
‘ಬೆಂಗಳೂರು 1980-1990ರಲ್ಲಿ ಯೋಜನಾ ರಹಿತವಾಗಿ ಅಭಿವೃದ್ಧಿಯಾಗುತ್ತಿತ್ತು. ಇದೀಗ ಯೋಜನಾಬದ್ಧವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ರೀತಿ ವ್ಯವಸ್ಥಿತವಾಗಿ ಅಭಿವೃದ್ಧಿ ಕಾರ್ಯಗಳು ನಡೆಸಿದರೆ ಹಂತ-ಹಂತವಾಗಿ ಹವಾಮಾನದಲ್ಲಿ ಪರಿಣಾಮಕಾರಿಯಾಗಿ ಗುಣಮಟ್ಟ ತರಬಹುದು’ ಎಂದರು.
ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ ಉಪಾಧ್ಯಕ್ಷ ರಾಜೀವ್ ಗೌಡ ಮಾತನಾಡಿ, ‘ಬೆಂಗಳೂರು ಹವಾಮಾನ ಕ್ರಿಯಾಯೋಜನೆ ಅನುಷ್ಠಾನಕ್ಕೆ ಬರುತ್ತಿದ್ದು, ಇದರಿಂದ ನಗರ ದೇಶದಲ್ಲೇ ಹವಾಮಾನ ಗುಣಮಟ್ಟದಲ್ಲಿ ಮೇಲುಗೈ ಸಾಧಿಸಲಿದೆ’ ಎಂದು ತಿಳಿಸಿದರು.
ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಮಾತನಾಡಿ, ‘ದೇಶದಲ್ಲಿ ಮುಂಬೈ ಮತ್ತು ಚೆನ್ನೈ ನಂತರ ಹವಾಮಾನ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿದ 3ನೇ ನಗರ ನಮ್ಮ ಬೆಂಗಳೂರು. ಈ ಯೋಜನೆಯನ್ನು ಮಾಸ್ಟರ್ ಪ್ಲಾನ್‌ನಲ್ಲಿ ಸಂಯೋಜಿಸಿಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.
ತಕ್ಷಣ ಮತ್ತು ಭವಿಷ್ಯದ ಹವಾಮಾನ ಅಪಾಯಗಳಿಗೆ ಸ್ಥಿತಿಸ್ಥಾಪಕತ್ವ ನಿರ್ಮಿಸುವುದು ‘ಬೆಂಗಳೂರು ಹವಾಮಾನ ಕ್ರಿಯಾ ಯೋಜನೆ’ಯ ಮೊದಲ ಆದ್ಯತೆಯಾಗಿದೆ.
ಹವಾಮಾನ ವೈಪರೀತ್ಯ ಘಟಕದ ಅಧ್ಯಕ್ಷೆ ಪ್ರೀತಿ ಗೆಹ್ಲೋಟ್, ‘ಸಿ40 ಸಿಟಿಸ್’ನ ಪ್ರಾದೇಶಿಕ ನಿರ್ದೇಶಕಿ ಶ್ರುತಿ ನಾರಾಯಣ್, ಅಭಿವೃದ್ಧಿ ಸಂಸ್ಥೆಗಳು ಹಾಗೂ ನಾಗರಿಕ ಸಮಾಜ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.