ADVERTISEMENT

ಬೆಂಗಳೂರಿನ ನೂತನ ಕಮಿಷನರ್ ಆಗಿ ಭಾಸ್ಕರ್‌ ರಾವ್‌ ಅಧಿಕಾರ ಸ್ವೀಕಾರ 

ಹಿಂದಿನ ಕಮಿಷನರ್ ಅಲೋಕ್‌ಕುಮಾರ್ ಗೈರು; 10 ನಿಮಿಷ ಕಾದು ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 18:43 IST
Last Updated 2 ಆಗಸ್ಟ್ 2019, 18:43 IST
   

ಬೆಂಗಳೂರು: ಹಿಂದಿನ ಕಮಿಷನರ್ ಅಲೋಕ್‌ಕುಮಾರ್ ಅವರ ಗೈರು ಹಾಜರಿಯಲ್ಲೇ ನೂತನ ಪೊಲೀಸ್ ಕಮಿಷನರ್ ಆಗಿ ಭಾಸ್ಕರ್‌ ರಾವ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.

ಕಮಿಷನರ್ ನೇಮಕ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸುತ್ತಿದ್ದಂತೆ ಸಂಜೆ 6 ಗಂಟೆಗೆಇನ್ಫೆಂಟ್ರಿ ರಸ್ತೆಯಲ್ಲಿರುವ ಕಚೇರಿಗೆ ಭಾಸ್ಕರ್ ರಾವ್ ಬಂದರು. ಆದರೆಅಲೋಕ್‌ಕುಮಾರ್ ಕಚೇರಿ ಹಾಗೂ ಅದರ ಪಕ್ಕವೇ ಇರುವ ಮನೆಯಲ್ಲಿ ಇರಲಿಲ್ಲ.

ಅಲೋಕ್‌ಕುಮಾರ್ ಬರುವಿಕೆಗಾಗಿ 10 ನಿಮಿಷ ಕಚೇರಿಯಲ್ಲೇ ಕಾದು ಕುಳಿತ ರಾವ್, ಕಚೇರಿಗೆ ಬರುವುದು ಅನುಮಾನವಾಗಿದ್ದರಿಂದ ಸ್ವಯಂಪ್ರೇರಿತವಾಗಿ ಅಧಿಕಾರ ವಹಿಸಿಕೊಂಡರು. ಟೇಬಲ್‌ಗೆ ತಲೆ ಇಟ್ಟು ನಮಸ್ಕರಿಸಿದರು.

ADVERTISEMENT

ಸುದ್ದಿಗಾರರ ಜೊತೆ ಮಾತನಾಡಿದ ಭಾಸ್ಕರ್‌ರಾವ್, ‘ಬೆಂಗಳೂರು ‌ನನಗೆ ಹೊಸದೇನಲ್ಲ. ಇಲ್ಲಿಯೇ ಓದಿ ಬೆಳೆದಿದ್ದೇನೆ. ಬೈಕ್, ಸೈಕಲ್‌ನಲ್ಲಿ ಓಡಾಡಿ ಎಲ್ಲವನ್ನೂತಿಳಿದುಕೊಂಡಿದ್ದೇನೆ. ಕಮಿಷನರ್ ಎಂಬ ದೊಡ್ಡ ಜವಾಬ್ದಾರಿಯನ್ನು ಕೊಟ್ಟಿರುವ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರಕ್ಕೆ ವಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಸಾಕಷ್ಟು ಸವಾಲುಗಳಿವೆ. ಮುಖ್ಯವಾಗಿ‘ಡ್ರಗ್ಸ್’ ಹಾವಳಿ ಹೆಚ್ಚಾಗಿದ್ದು, ಅದರ ನಿರ್ಮೂಲನೆಗೆ ಪ್ರಯತ್ನಿಸುತ್ತೇನೆ. ಇಲಾಖೆಯಲ್ಲೂಕೆಲ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುತ್ತೇನೆ. ರೌಡಿಗಳ ಕೃತ್ಯಕ್ಕೆ ಕಡಿವಾಣ ಹಾಕಲು ಪ್ರಯತ್ನಿಸುವೆ’ ಎಂದರು.

‘ನಗರದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ, ವೈಟ್ ಕಾಲರ್ಕ್ರೈಂ ದಿನೇ ದಿನೇ ಹೆಚ್ಚಾಗುತ್ತಿರುವುದು ಆತಂಕಕಾರಿ ಸಂಗತಿ. ಆರ್ಥಿಕವಂಚನೆ ಸೇರಿದಂತೆ ಎಲ್ಲ ಮಾದರಿಯ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳುವೆ’ ಎಂದು ಹೇಳಿದರು.

ಧಾಂ ಧೂಂ ದಾಳಿಗೆ ನಾನು ವಿರುದ್ಧ: ‘ಸಿಸಿಬಿ ದಾಳಿಗೆ ಹೆದರಿ ಯುವತಿಯೊಬ್ಬರು ಕಟ್ಟಡದಿಂದ ಬಿದ್ದಿದ್ದಾರೆ’ ಎಂಬ ಸುದ್ದಿ ಎಲ್ಲೆಡೆ
ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ್‌ ರಾವ್, ‘ಧಾಂ ಧೂಂ ಎಂದು ನಡೆಸುವ ದಾಳಿಗೆ ನಾನು ವಿರುದ್ಧವಾಗಿದ್ದೇನೆ’ ಎಂದರು.

‘ದೊಡ್ಡ ಸದ್ದು ಮಾಡುತ್ತ ದಾಳಿ ನಡೆಸಿ ಭಯ ಹುಟ್ಟಿಸುವದಲ್ಲ. ರಸ್ತೆ ಬಂದ್ ಮಾಡಿ ಮೆಟ್ಟಿಲುಗಳ ಮೇಲೆ ಅವರನ್ನು ಎಳೆದುಕೊಂಡು ಬರುವುದಲ್ಲ. ಅವರೆಲ್ಲ ಶಾಂತಿಯಿಂದ ಪ್ರಾಮಾಣಿಕವಾಗಿ ಜೀವನ ನಡೆಸಲು ಬಂದವರು. ಏನೇ ಕ್ರಮಜರುಗಿಸಿದರೂ ಕಾನೂನು ರೀತಿಯಲ್ಲಿ ಜರುಗಿಸಬೇಕು’ ಎಂದು ಅಭಿಪ್ರಾಯಪಟ್ಟರು.

‘ನಮ್ಮ ಕನ್ನಡಿಗರು ಸಹನಾಶೀಲರು, ಒಳ್ಳೆಯವರು. ಅವರನ್ನು ಇಷ್ಟಬಂದಂತೆ ನಡೆಸಿಕೊಳ್ಳಲು ಬಿಡುವುದಿಲ್ಲ’ ಎಂದು ಭಾಸ್ಕರ್‌ ರಾವ್ ಹೇಳಿದರು.

ಬೆಂಗಳೂರಿನಲ್ಲಿ ಶಿಕ್ಷಣ
ಚೆನ್ನೈನಲ್ಲಿ ಜನಿಸಿದ್ದ ಭಾಸ್ಕರ್‌ ರಾವ್,1990ರ ಬ್ಯಾಚ್‌ ಐಪಿಎಸ್ ಅಧಿಕಾರಿ. ಬೆಂಗಳೂರು, ಬಿಹಾರದ ಪಟನಾದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದಿದ್ದಾರೆ.

ಬೆಂಗಳೂರಿನ ಸೇಂಟ್ ಜೋಸೆಫ್ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಹಾಗೂ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ್ದಾರೆ. ಬೆಂಗಳೂರುವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ‍ಪಡೆದಿದ್ದಾರೆ. ಕಾಲೇಜು ದಿನದಿಂದಲೂ ಎನ್‌ಸಿಸಿ, ಎನ್‌ಎಸ್‌ಎಸ್‌ನಲ್ಲಿ ತೊಡಗಿಸಿಕೊಂಡಿದ್ದರು.

ಬೇಸರದಿಂದ ನಿರ್ಗಮನ
ಟಿ. ಸುನೀಲ್‌ಕುಮಾರ್ ಅವರ ನಂತರ ಕಮಿಷನರ್ ಆಗಿ ನೇಮಕಗೊಂಡಿದ್ದ ಅಲೋಕ್‌ಕುಮಾರ್, ಜೂನ್ 17ರಂದು ಅಧಿಕಾರ ವಹಿಸಿಕೊಂಡಿದ್ದರು. ಅದಾಗಿ 45 ದಿನಕ್ಕೇ ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಆಗಿ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

‘ಅಲೋಕ್‌ಕುಮಾರ್ ಅವರು ಸಂಜೆ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದರು. ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆ ಬೇಸರದಿಂದಲೇ ಕಚೇರಿಯಿಂದ ಹೊರಬಂದು ಕಾಲ್ನಡಿಗೆಯಲ್ಲೇ, ಕಚೇರಿ ಪಕ್ಕದಲ್ಲಿರುವ ಮನೆಗೆ ಹೋದರು. ಯಾರ ಜೊತೆಯೂ ಮಾತನಾಡಲಿಲ್ಲ’ ಎಂದು ಕಚೇರಿಯ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದೂವರೆ ತಿಂಗಳಲ್ಲೇ ಕಮಿಷನರ್‌ ಎತ್ತಂಗಡಿ
ಬೆಂಗಳೂರು:
ಬೆಂಗಳೂರು ನಗರ‌ಪೊಲೀಸ್‌ ಆಯುಕ್ತ ಅಲೋಕ್ ಕುಮಾರ್‌ ಅವರನ್ನು ಕೇವಲ ಒಂದೂವರೆ ತಿಂಗಳೊಳಗೆ ಎತ್ತಂಗಡಿ ಮಾಡಲಾಗಿದೆ.

ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ದೋಸ್ತಿ ಸರ್ಕಾರ ಸುನಿಲ್‌ ಕುಮಾರ್ ಜಾಗದಲ್ಲಿಅಲೋಕ್‌ ಕುಮಾರ್‌ ಅವರನ್ನು ನೇಮಿಸಿ
ದಾಗ ಹಿರಿಯ ಐಪಿಎಸ್‌ ಅಧಿಕಾರಿಗಳಾದಭಾಸ್ಕರ ರಾವ್‌ ಮತ್ತು ಅಲೋಕ್‌ ಮೋಹನ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಬಡ್ತಿ ನೀಡಿದ ತಕ್ಷಣ ಮಹತ್ವದ ಹುದ್ದೆಗೆ ನೇಮಕಗೊಳ್ಳುವ ಪರಿಪಾಠ ಇಲ್ಲವಾದರೂ, ಅಲೋಕ್‌ ಕುಮಾರ್‌ಗೆ ಅದು ಲಭಿಸಿತ್ತು. ಅತೃಪ್ತ ಶಾಸಕರ ರಾಜೀನಾಮೆ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲ ಎಂಬ ಬಿಜೆಪಿಯ ಬಹಿರಂಗ ಆಕ್ಷೇಪಕ್ಕೂ ಅವರು ಗುರಿಯಾಗಿದ್ದರು. ಎಲ್ಲದರ ಫಲವಾಗಿ ಅವರ ಎತ್ತಂಗಡಿಯಾಗಿದ್ದು, ಅವರನ್ನು ಕೆಎಸ್‌ಆರ್‌ಪಿ ಎಡಿಜಿಪಿ ಆಗಿ ವರ್ಗಾಯಿಸಲಾಗಿದೆ.

ಭಾಸ್ಕರ ರಾವ್ ಲೋಕಸಭಾ ಚುನಾವಣೆ ವೇಳೆ ದೋಸ್ತಿ ಸರ್ಕಾರ ಟೀಕಿಸುವ ರೀತಿಯಟ್ವೀಟ್‌ ಮಾಡಿ ವಿವಾದಕ್ಕೆ ಒಳಗಾಗಿದ್ದರು. ಇದೀಗ ಯಡಿಯೂರಪ್ಪ ಸರ್ಕಾರ ಅವರಿಗೆ ಪ್ರಮುಖ ಹೊಣೆಗಾರಿಕೆ ನೀಡಿದೆ.

ಕಾಂಗ್ರೆಸ್‌ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಬ್ಬಿತ್ತು. ಆಗ ಹೇಮಂತ್‌ ನಿಂಬಾಳ್ಕರ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾಯಿಸಿ ಅಂಜಲಿ ಅವರನ್ನು ಸಮಾಧಾನಪಡಿಸುವ ಕೆಲಸ ಮಾಡಲಾಗಿತ್ತು. ಗುರುವಾರ ಮತ್ತೆ ಅವರನ್ನು ವರ್ಗಾಯಿಸಿ ಸ್ಥಾನ ತೋರಿಸಿರಲಿಲ್ಲ. ಶುಕ್ರವಾರ ಅವರನ್ನುಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆಗಿ ನಿಯೋಜಿಸಲಾಗಿದೆ.

ಒಂದೇ ದಿನ 2 ಆದೇಶ: ಹಿರಿಯ ಐಪಿಎಸ್‌ ಅಧಿಕಾರಿಗಳಾದಉಮೇಶ್‌ ಕುಮಾರ್ ಮತ್ತು ಡಾ.ಬಿ.ಆರ್‌.ರವಿಕಾಂತೇ ಗೌಡ ಅವರ ವಿಚಾರದಲ್ಲಿ ಶುಕ್ರವಾರ ಒಂದೇ ದಿನ ಎರಡು ಬಾರಿ ವರ್ಗಾವಣೆ ಆದೇಶ ಹೊರಬಿತ್ತು.

ಉಮೇಶ್‌ ಕುಮಾರ್‌ ಅವರನ್ನು ಐಜಿಪಿ, ಪೊಲೀಸ್‌ ಅಗ್ನಿಶಾಮಕ ಸೇವೆಗೆ ಹಾಗೂ ಡಾ.ಬಿ.ಆರ್‌.ರವಿಕಾಂತೇಗೌಡ ಅವರನ್ನು ಜಂಟಿ ಪೊಲೀಸ್ ಕಮಿಷನರ್‌,ಬೆಂಗಳೂರು ನಗರ ಪಶ್ಚಿಮಕ್ಕೆ ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು. ಸಂಜೆ ಇವುಗಳನ್ನು ರದ್ದುಪಡಿಸಿ, ಉಮೇಶ್‌ ಕುಮಾರ್‌ ಅವರನ್ನು ಮೊದಲಿದ್ದ ಬೆಂಗಳೂರು ಪಶ್ಚಿಮ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಮುಂದುವರಿಸಲಾಯಿತು. ರವಿಕಾಂತೇ ಗೌಡ ಅವರಿಗೆ ಯಾವುದೇ ಹುದ್ದೆ ತೋರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.