ADVERTISEMENT

ಬೆಂಗಳೂರು | ದೀಪಾವಳಿ ಹಬ್ಬ: ರಾತ್ರಿ 8ರಿಂದ 10ರವರೆಗೆ ಪಟಾಕಿ ಸಿಡಿಸಲು ಅವಕಾಶ

ಮಾರ್ಗಸೂಚಿ ಪ್ರಕಟಿಸಿದ ನಗರ ಪೊಲೀಸ್‌ ಇಲಾಖೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2024, 14:45 IST
Last Updated 29 ಅಕ್ಟೋಬರ್ 2024, 14:45 IST
<div class="paragraphs"><p>ಪಟಾಕಿ ಮಾರಾಟ (ಸಾಂದರ್ಭಿಕ ಚಿತ್ರ)&nbsp;</p></div>

ಪಟಾಕಿ ಮಾರಾಟ (ಸಾಂದರ್ಭಿಕ ಚಿತ್ರ) 

   

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಆದೇಶದಂತೆ ರಾತ್ರಿ 8ರಿಂದ 10ರವರೆಗೆ ಮಾತ್ರ ಹಸಿರು ಪಟಾಕಿ ಸಿಡಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಸಂಬಂಧ ನಗರ ಪೊಲೀಸ್‌ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾರ್ಗಸೂಚಿ ಬಿಡುಗಡೆ ಮಾಡಿದರು.

ಮಾರ್ಗಸೂಚಿಯಲ್ಲಿ ಏನಿದೆ?:

* ಹಸಿರು ಪಟಾಕಿಗಳನ್ನೇ ಖರೀದಿಸಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು
* ಹಸಿರು ಪಟಾಕಿ ಖರೀದಿ ಸಂದರ್ಭದಲ್ಲಿ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ ಖಚಿತ ಪಡಿಸಿಕೊಳ್ಳಬೇಕು 
* ಅಧಿಕೃತ ಪರವಾನಗಿ ಪಡೆದ ಅಂಗಡಿ/ಮಳಿಗೆಗಳಿಂದಲೇ ಪಟಾಕಿ ಖರೀದಿಸಬೇಕು
* ಕೆಲವು ಅಂಗಡಿಗಳಲ್ಲಿ ಅನಧಿಕೃತವಾಗಿ ಪಟಾಕಿ ಮಾರಾಟ ಮಾಡುವ ಸಾಧ್ಯತೆಯಿದ್ದು, ಅಂತಹ ಸ್ಥಳದಲ್ಲಿ ಪಟಾಕಿ ಖರೀದಿಸಬಾರದು
* ಹೆಚ್ಚು ಶಬ್ದ ಹಾಗೂ ವಾಯು ಮಾಲಿನ್ಯ ಉಂಟು ಮಾಡುವ ಪಟಾಕಿ ಖರೀದಿಸುವುದು ಬೇಡ
* ಚಿಕ್ಕ ಮಕ್ಕಳು ಪಟಾಕಿ ಹಚ್ಚಲು ಅವಕಾಶ ಕೊಡಬಾರದು. ಚಿಕ್ಕ ಮಕ್ಕಳೊಂದಿಗೆ ಪೋಷಕರೂ ಜೊತೆಯಲ್ಲಿದ್ದು, ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು
* ಜನದಟ್ಟಣೆ ಪ್ರದೇಶ, ಮುಖ್ಯ ರಸ್ತೆ ಹಾಗೂ ವಾಹನಗಳ ನಿಲುಗಡೆ ಸ್ಥಳಗಳಲ್ಲಿ ಪಟಾಕಿ ಸಿಡಿಸಬಾರದು
* ಪಟಾಕಿ ಸುಡುವ ಸಂದರ್ಭದಲ್ಲಿ ಅಂತರ ಕಾಯ್ದುಕೊಳ್ಳಬೇಕು
* ಪಟಾಕಿ ಸಿಡಿಸುವಾಗ ಪ್ರಾಣಿಗಳಿಗೆ ತೊಂದರೆ ಆಗದಂತೆ ಮುನ್ನೆಚರಿಕೆ ಕ್ರಮ ತೆಗೆದುಕೊಳ್ಳಬೇಕು
* ಪಟಾಕಿ ಸಿಡಿಸುವ ಸಂದರ್ಭದಲ್ಲಿ ಕೈಗಳಿಗೆ ಗ್ಲೌಸ್‌ ಧರಿಸಬೇಕು; ಕಣ್ಣುಗಳಿಗೆ ಸುರಕ್ಷತಾ ಕನ್ನಡಕ ಧರಿಸಬೇಕು
* ಮೊದಲ ಪ್ರಯತ್ನದಲ್ಲಿ ಸಿಡಿಯದ ಪಟಾಕಿಗಳನ್ನು ಹತ್ತಿರಕ್ಕೆ ಹೋಗಿ ಮತ್ತೊಮ್ಮೆ ಪರೀಕ್ಷಿಸುವುದು ಬೇಡ
* ಪಟಾಕಿ ಹಚ್ಚುವ ವೇಳೆ ಬಟ್ಟೆಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ಹತ್ತಿಯ ಬಟ್ಟೆ ಧರಿಸುವುದು ಉತ್ತಮ. ಆದಷ್ಟೂ ಸಿಂಥೆಟಿಕ್, ನೈಲಾನ್, ಪಾಲಿಸ್ಟರ್ ಬಟ್ಟೆ ಧರಿಸುವುದು ಬೇಡ
* ಕೈಯಲ್ಲಿ ಪಟಾಕಿ ಹಿಡಿದು ಹಚ್ಚುವುದು ಅಪಾಯಕಾರಿ. ಪಟಾಕಿ ಸಿಡಿಸುವ ಸಂದರ್ಭದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಹತ್ತಿರದಲ್ಲೇ ಇಟ್ಟುಕೊಳ್ಳಬೇಕು
* ಅವಘಡಗಳು ಸಂಭವಿಸಿದಲ್ಲಿ 112 ಹಾಗೂ 108 ಸಂಪರ್ಕಿಸಬೇಕು. ವೈದ್ಯರ ಸಲಹೆ ಪಡೆದುಕೊಳ್ಳಬೇಕು
* ಸಿಡಿಯದ ಪಟಾಕಿಗಳನ್ನು ಗುಡ್ಡೆ ಹಾಕಿ ಬೆಂಕಿ ಹಚ್ಚುವುದು ಅಪಾಯಕಾರಿ
* ಪಟಾಕಿ ಸಿಡಿಸಿದ ನಂತರ ಮೈದಾನ, ರಸ್ತೆಗಳು, ಮನೆ ಮುಂದಿನ ಅಂಗಳಗಳಲ್ಲಿ ಸ್ವಚ್ಛತೆ ಕಾಪಾಡಬೇಕು
* ನಿಗದಿತ ಸಮಯ ಮೀರಿ ಪಟಾಕಿ ಸಿಡಿಸಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು
* ಹೆಚ್ಚು ಶಬ್ದ ಹೊಮ್ಮುವ ಪಟಾಕಿ ಹಚ್ಚುವುದರಿಂದ ಹಿರಿಯ ನಾಗರಿಕರಿಗೆ, ಅನಾರೋಗ್ಯ ಪೀಡಿತರಿಗೆ, ವಿದ್ಯಾರ್ಥಿಗಳಿಗೆ ತೊಂದರೆ ಆಗುವ ಸಂಭವವಿದೆ. ಆದ್ದರಿಂದ, ಕಡಿಮೆ ಶಬ್ದ ಹೊರಹೊಮ್ಮುವ ಹಸಿರು ಪಟಾಕಿಗಳನ್ನೇ ಹಚ್ಚುವುದು ಸೂಕ್ತ

ADVERTISEMENT

72 ಮೈದಾನದಲ್ಲಿ ಮಾರಾಟ

‘ದೀಪಾವಳಿ ಹಬ್ಬದ ಅಂಗವಾಗಿ ನಗರದ 72 ಮೈದಾನಗಳಲ್ಲಿ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ತಿಳಿಸಿದರು.

‘ಪಟಾಕಿ ಮಾರಾಟಕ್ಕೆ ಸಂಬಂಧಿಸಿದಂತೆ ಪರವಾನಗಿ ಪಡೆಯಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಒಟ್ಟು 1518 ಅರ್ಜಿಗಳು ಸಲ್ಲಿಕೆ ಆಗಿದ್ದವು. ಅದರಲ್ಲಿ 315 ಪರವಾನಗಿ ನೀಡಲಾಗಿದೆ. ಸುರಕ್ಷತಾ ಕ್ರಮ ತೆಗೆದುಕೊಳ್ಳುವಂತೆ ಮಾರಾಟಗಾರರಿಗೆ ಸೂಚಿಸಲಾಗಿದೆ. ಬಿಬಿಎಂಪಿ ಅಗ್ನಿಶಾಮಕ ಇಲಾಖೆ ಬೆಸ್ಕಾಂ ಮಾಲಿನ್ಯ ನಿಯಂತ್ರಣ ಮಂಡಳಿ ಜಿಎಸ್‌ಟಿ ಅಧಿಕಾರಿಗಳ ಜತೆಗೂ ಸಭೆ ನಡೆಸಲಾಗಿದೆ’ ಎಂದು ವಿವರಿಸಿದರು.

‘ಸುರಕ್ಷತಾ ಕ್ರಮದ ಉಸ್ತುವಾರಿಗೆ ವಿವಿಧ ಇಲಾಖೆಗಳನ್ನು ಒಳಗೊಂಡ ತಂಡ ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.