ಬೆಂಗಳೂರು: ಆಂಬುಲೆನ್ಸ್‌ಗಳು ಬರುವ ಮಾರ್ಗವನ್ನು ತಂತ್ರಾಂಶದ ಮೂಲಕ ಗ್ರಹಿಸಿ ಸಂಚಾರ ಸಿಗ್ನಲ್ ನೀಡುವ ಹೊಸ ವ್ಯವಸ್ಥೆ ಜಾರಿಗೆ ನಗರ ಸಂಚಾರ ಪೊಲೀಸರು ಸಜ್ಜಾಗಿದ್ದಾರೆ. ಇದಕ್ಕಾಗಿಯೇ ರೂಪಿಸಿರುವ ‘ಇ–ಪಾತ್’ ಆ್ಯಪ್‌ನ ಪ್ರಾಯೋಗಿಕ ಬಳಕೆ ಯಶಸ್ವಿಯಾಗಿದೆ.
ರಾಜ್ಯ ಮತ್ತು ಹೊರ ರಾಜ್ಯಗಳಿಂದಲೂ ಆರೋಗ್ಯ ಸೇವೆಗಾಗಿ ಆಂಬುಲೆನ್ಸ್‌ಗಳಲ್ಲಿ ನಗರದ ವಿವಿಧ ಆಸ್ಪತ್ರೆಗಳಿಗೆ ರೋಗಿಗಳು ಬರುತ್ತಾರೆ. ವಾಹನ ದಟ್ಟಣೆಯಲ್ಲಿ ಸಿಲುಕಿ ‘ಗೋಲ್ಡನ್ ಅವರ್’ನಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಇರುವಂತಹ ಪ್ರಕರಣಗಳು ಹೆಚ್ಚುತ್ತಿವೆ.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪೊಲೀಸರು ತಂತ್ರಜ್ಞಾನದ ಮೊರೆ ಹೋಗಿದ್ದು, ‘ಇ–ಪಾತ್’ ತಂತ್ರಾಂಶದ ನೆರವಿನಲ್ಲಿ ಸಿಗ್ನಲ್ ನಿರ್ವಹಿಸುವ ಯೋಜನೆ ರೂಪಿಸಿದ್ದರು. ಈ ಆ್ಯಪ್ ಜೊತೆ ಜೋಡಿಸಿರುವ ಆಂಬುಲೆನ್ಸ್‌ಗಳು ಸಿಗ್ನಲ್ ರಹಿತವಾಗಿ ಸಂಚರಿಸಲು ಅವಕಾಶ ದೊರೆಯಲಿದೆ.
ಆಂಬುಲೆನ್ಸ್ ಮಾಲೀಕರು, ಚಾಲಕರು ಹಾಗೂ ಸಂಘಟನೆ ಜೊತೆ ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್ ಸಭೆ ನಡೆಸಿ, ಆ್ಯಪ್ ಬಳಕೆ ಮತ್ತು ಆಂಬುಲೆನ್ಸ್ ಚಾಲಕರ ಜವಾಬ್ದಾರಿ ಕುರಿತು ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ.
ಸಿಗ್ನಲ್‌ಗಳಲ್ಲಿ ಕಿಲೋ ಮೀಟರ್‌ಗಟ್ಟಲೇ ವಾಹನಗಳು ನಿಂತಿರುತ್ತವೆ. ವಾಹನ ದಟ್ಟಣೆ ಸಮಸ್ಯೆಯಿಂದಾಗಿ ಆಂಬುಲೆನ್ಸ್‌ಗಳು ರೋಗಿಗಳನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಡುವಂತಹ ಸ್ಥಿತಿ ಇದೆ. ಹಲವು ಬಾರಿ ನಿಗದಿತ ಸಮಯಕ್ಕೆ ಆಸ್ಪತ್ರೆ ತಲುಪಲು ಸಾಧ್ಯವಾಗದೆ ರೋಗಿಗಳ ಪ್ರಾಣಕ್ಕೇ ಸಂಚಕಾರ ಉಂಟಾಗುತ್ತಿದೆ.
ಸಂಚಾರ ಪೊಲೀಸರ ಮಾಹಿತಿ ಪ್ರಕಾರ, ಸುಮಾರು ಎರಡು ಸಾವಿರ ಆಂಬುಲೆನ್ಸ್‌ಗಳು ನಗರದಲ್ಲಿ ಸಂಚರಿಸುತ್ತಿವೆ. ಎಲ್ಲಾ ಆಂಬುಲೆನ್ಸ್‌ಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಸಂಚಾರ ನಿರ್ವಹಣಾ ಕೇಂದ್ರದ (ಟಿಎಂಸಿ) ಜೊತೆ ಜೋಡಿಸಲಾಗಿದೆ.
ಆಂಬುಲೆನ್ಸ್‌ಗೆ ರೋಗಿಯನ್ನು ಹತ್ತಿಸಿಕೊಂಡ ಮೇಲೆ ‘ಇ ಪಾತ್’ನಲ್ಲಿ ಅಪ್‌ಡೇಟ್ ಮಾಡಬೇಕಿದೆ. ತುರ್ತು , ಮಧ್ಯಮ ಮತ್ತು ಸಾಮಾನ್ಯ ಸಂಚಾರ ಎಂದು ಗ್ರೇಡ್ ನೀಡಿದ್ದು, ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ವಾಹನ ದಟ್ಟಣೆಯ ಮಧ್ಯೆ ಆಂಬುಲೆನ್ಸ್ ಸಿಲುಕಿಕೊಂಡಾಗ ಸಂಚಾರ ವಿಭಾಗದ ಪೊಲೀಸರು ಸಹಾಯಕ್ಕೆ ಬರುತ್ತಾರೆ.
ಆ್ಯಪ್ ಕಾರ್ಯನಿರ್ವಹಣೆ ಹೇಗೆ:
ಚಾಲಕ ಸ್ಮಾರ್ಟ್ ಫೋನ್‌ನಲ್ಲಿರುವ ಪ್ಲೇ ಸ್ಟೋರ್ ನಲ್ಲಿ ‘ಇ-ಪಾತ್’ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಆಂಬುಲೆನ್ಸ್ ಎಲ್ಲಿಂದ, ಎಲ್ಲಿಗೆ ಪ್ರಯಾಣಿಸಲಿದೆ ಎಂಬುದರ ಮಾಹಿತಿ ಅಪ್‌ಲೋಡ್ ಮಾಡಿ, ಯಾವುದಕ್ಕೆ ಆದ್ಯತೆ ಎಂಬುದರ ಕುರಿತು ತಿಳಿಸಬೇಕು. ಗಂಭೀರ ಅಪಘಾತ, ಹೃದಯಾಘಾತದಂತಹ ತುರ್ತುಸೇವೆಗೆ ಪ್ರಮುಖ ಆದ್ಯತೆ ನೀಡಲಾಗುತ್ತದೆ.
ಅಪ್‌ಲೋಡ್ ಆದ ಮಾಹಿತಿ ಸಂಚಾರ ನಿರ್ವಹಣಾ ಕೇಂದ್ರಕ್ಕೆ ರವಾನೆಯಾಗಲಿದೆ. ಇದನ್ನು ಪರಿಶೀಲಿಸಿ ಜಿಪಿಎಸ್ ಆಧಾರದಲ್ಲಿ ಅಡಾಪ್ಟಿವ್ ಸಿಗ್ನಲ್‌ಗಳ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಸಿಗ್ನಲ್ ಸಮೀಪ ಆಂಬುಲೆನ್ಸ್ ಬರುತ್ತಿದ್ದಂತೆ ಮಾಹಿತಿ ತಿಳಿಯುತ್ತದೆ. ತಕ್ಷಣ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಜೊತೆಗೆ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಿ ದಟ್ಟಣೆ ಕಡಿಮೆ ಮಾಡಲಾಗುತ್ತದೆ.
ಸಿಗ್ನಲ್ ಇಲ್ಲದ ಕಡೆ ಆಂಬುಲೆನ್ಸ್ ವೇಗ ಗಂಟೆಗೆ 5 ಕಿಲೋ ಮೀಟರ್‌ಗಿಂತ ಕಡಿಮೆಯಾದರೆ ಎಚ್ಚರಿಕೆ ಸಂದೇಶ ಬರುತ್ತದೆ. ಅದರ ಆಧಾರದಲ್ಲಿ ವಾಹನ ದಟ್ಟಣೆ ತಗ್ಗಿಸಲು ಸಂಚಾರ ವಿಭಾಗದ ಪೊಲೀಸರು ವ್ಯವಸ್ಥೆ ಮಾಡಲಿದ್ದಾರೆ.
‘ಸಂಚಾರ ದಟ್ಟಣೆಯಿಂದಾಗಿ ಆಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ‘ಇ ಪಾತ್’ ಆ್ಯಪ್ ಪರಿಚಯಿಸಲಾಗಿದೆ. ಆ್ಯಪ್ ಬಳಕೆ ಕುರಿತು ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದೆ. ಆಂಬುಲೆನ್ಸ್ ಚಾಲಕರಿಗೂ ಇದರ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿ, ಆ್ಯಪ್ ಬಳಸುವಂತೆ ಕೋರಲಾಗಿದೆ. ಚಾಲಕರು ಕೆಲವು ಸಲಹೆಗಳನ್ನು ನೀಡಿದ್ದು, ಅವುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ತಿಳಿಸಿದರು.
ತಿಂಗಳ ಅಂತ್ಯಕ್ಕೆ ನಗರದ ಎಲ್ಲಾ ಆಂಬುಲೆನ್ಸ್‌ಗಳು ಇ–ಪಾತ್ ಆ್ಯಪ್ ಬಳಸುವಂತೆ ಕ್ರಮ ವಹಿಸಲಾಗುವುದು. ಇದರಿಂದ ವಾಹನ ದಟ್ಟಣೆಯಲ್ಲಿ ಸಿಲುಕಿ ತೊಂದರೆ ಅನುಭವಿಸುವುದು ತಪ್ಪಲಿದೆ.ಎಂ.ಎನ್.ಅನುಚೇತ್ ಜಂಟಿ ಪೊಲೀಸ್ ಆಯುಕ್ತ (ಸಂಚಾರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.