ಬೆಂಗಳೂರು: ಕ್ರಿಕೆಟಿಗ ಜಿ.ಆರ್. ವಿಶ್ವನಾಥ್, ಗೋಕುಲ ಶಿಕ್ಷಣ ದತ್ತಿ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಜಯರಾಮ್ ಅವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿದೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಲಿಂಗರಾಜ ಗಾಂಧಿ, ಶಿಕ್ಷಣ ಮತ್ತು ಕ್ರೀಡೆಯಲ್ಲಿ ಗಣನೀಯ ಸಾಧನೆ ಮಾಡಿದ ಇಬ್ಬರಿಗೆ ಈ ಬಾರಿ ಡಾಕ್ಟರೇಟ್ ನೀಡಲಾಗಿದೆ. ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಜೂನ್ 29ರಂದು ಬೆಳಿಗ್ಗೆ 11.30ಕ್ಕೆ ನಡೆಯುವ ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ಪ್ರದಾನ ಮಾಡುವರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಟಿ.ಜಿ. ಸೀತಾರಾಮ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾಲಯದ ಕಾಲೇಜುಗಳಲ್ಲಿ ಒಟ್ಟು 1.40 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 6,424 ಸ್ನಾತಕೋತ್ತರ ವಿದ್ಯಾರ್ಥಿಗಳು, 29,484 ಪದವಿ ವಿದ್ಯಾರ್ಥಿಗಳಿಗೆ ಮೂರನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ನಾಲ್ವರಿಗೆ ಪಿಎಚ್.ಡಿ ಪ್ರಧಾನ ಮಾಡಲಾಗುವುದು. ವಿವಿಧ ವಿಭಾಗಗಳ ಒಟ್ಟು 63 ವಿದ್ಯಾರ್ಥಿಗಳು ಚಿನ್ನದ ಪದಕ, ನಗದು ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಟಿ.ಜವರೇಗೌಡ, ಪರಿಕ್ಷಾಂಗ ಕುಲಸಚಿವ ಸಿ.ಎಸ್. ಆನಂದ ಕುಮಾರ್, ಹಣಕಾಸು ಅಧಿಕಾರಿ ಎಂ.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.
ಯಶಸ್‌ಗೆ ನಾಲ್ಕು ಚಿನ್ನದ ಪದಕ
ಸ್ನಾತಕೋತ್ತರ ರಸಾಯನ ಶಾಸ್ತ್ರದಲ್ಲಿ ಸೆಂಟ್ರಲ್ ಎಂ.ಯಶಸ್ ನಾಲ್ಕು ಚಿನ್ನದ ಪದಕ ಪಡೆದಿದ್ದಾರೆ. ಬಿ.ಬಿ.ಎನಲ್ಲಿ ಬನಶಂಕರಿ ಕೃಷ್ಣ ಕಾಲೇಜಿನ ಆರ್. ರುತ್ ಮೂರು ಬಿ.ಕಾಂನಲ್ಲಿ ಆರ್.ಜೆ.ಎಸ್. ಪ್ರಥಮ ದರ್ಜೆ ಕಾಲೆಜಿನ ಎಸ್.ಎಸ್. ಧನ್ಯತಾ ಎಂ.ಎ. ಫ್ರೆಂಜ್ ಭಾಷಾ ವಿಷಯದಲ್ಲಿ ಸೆಂಟ್ರಲ್ ಕಾಲೇಜಿನ ಮೀನಲ್ ತಿವಾರಿ ಅಪ್ಲೈಡ್ ಆರ್ಟ್ಸ್‌ನಲ್ಲಿ ಬೆಂಗಳೂರು ದೃಶ್ಯ ಕಲಾ ಶಾಲೆಯ ಬಿ. ಹರ್ಷಿತಾ ಎಂ.ಬಿ.ಎನಲ್ಲಿ ಆದರ್ಶ ಕಾಲೇಜಿನ ಬಿ. ಸಹನಶ್ರೀ ಜೀವ ರಸಾಯನ ಶಾಸ್ತ್ರದಲ್ಲಿ ಎಂ.ಎಸ್. ರಾಮಯ್ಯ ಕಾಲೇಜಿನ ಎಚ್.ಪಿ. ಗಗನಶ್ರೀ ಮತ್ತು ಸೂಕ್ಷ್ಮ ಜೀವ ವಿಜ್ಞಾನದಲ್ಲಿ ಬಿ.ಪ್ರಕೃತಿ ತಲಾ ಎರಡು ಪದಕ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.