ADVERTISEMENT

ಬೆಂಗಳೂರಿನಲ್ಲಿ ಮುಂದಿನ ತಿಂಗಳು ಭಾರಿ ಮಳೆಯಾಗುವ ಮುನ್ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2018, 16:25 IST
Last Updated 21 ಆಗಸ್ಟ್ 2018, 16:25 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಬೆಂಗಳೂರು: ಈ ಬಾರಿಯ ಮಳೆಯಿಂದಾಗಿ ಕೊಡಗು ಮತ್ತು ಕೇರಳದಲ್ಲಿ ಅಪಾರ ಪ್ರಮಾಣದ ಆಸ್ತಿ–ಪಾಸ್ತಿ ನಷ್ಟವಾಗಿದೆ. ಈ ವರ್ಷದ ಈವರೆಗಿನ ವರ್ಷಧಾರೆಯ ಹೊಡೆತದಿಂದ ಬೆಂಗಳೂರು ನಗರ ಹೆಚ್ಚೇನೂ ಹೊಡೆತ ತಿಂದಿಲ್ಲ. ಆದರೆ, ನಗರದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಭಾರಿ ಮಳೆಯಾಗುವ ಸೂಚನೆಯನ್ನು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರ ಮುನ್ಸೂಚನೆ(ಕೆಎಸ್‌ಎನ್‌ಡಿಎಂಸಿ) ನೀಡಿದೆ. ಇದರಿಂದಾಗಿ ನಗರದ ಮೇಲೂ ಪ್ರವಾಹದ ಛಾಯೆ ಮೂಡಿದೆ.

ಕಳೆದ ವರ್ಷದಂತೆ ನಗರದ ಜನರು ಪ್ರವಾಹದಿಂದ ಕಷ್ಟ–ನಷ್ಟಗಳನ್ನು ಎದುರಿಸದಿರಲಿ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಮತ್ತೆ ಎಚ್ಚೆತ್ತುಕೊಂಡಿದೆ. ರಾಜಕಾಲುವೆಗಳನ್ನು ಆಕ್ರಮಿಸಿಕೊಂಡಿರುವ ಕಟ್ಟಡಗಳನ್ನು ತೆರವುಗೊಳಿಸುತ್ತಿದೆ. ಕಾಲುವೆಯಲ್ಲಿನ ಹೂಳನ್ನು ತೆಗೆಸುವ ಕಾಮಗಾರಿಯನ್ನು ಚುರುಕುಗೊಳಿಸಿದೆ.

2017ರ ಸೆಪ್ಟೆಂಬರ್‌ ಮತ್ತು ಅಕ್ಟೋಬರ್‌ನಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ನಗರದಲ್ಲಿ ಹೆಚ್ಚು ಮಳೆ ಬಿದ್ದಿತ್ತು. ಸೆಪ್ಟೆಂಬರ್‌ನಲ್ಲಿ ಸಾಮಾನ್ಯವಾಗಿ 179 ಮಿ.ಮೀ. ಸುರಿಯುತ್ತಿದ್ದ ಮಳೆ 383.3 ಮಿ.ಮೀ. ಸುರಿದಿತ್ತು. ಅಕ್ಟೋಬರ್‌ನಲ್ಲಿ ಸಾಮಾನ್ಯವಾಗಿ 159.7 ಮಿ.ಮೀ. ಬೀಳುತ್ತಿದ್ದ ವರ್ಷಧಾರೆ 226.9 ಮಿ.ಮೀ. ಬಿದ್ದಿತ್ತು. ಸೆಪ್ಟೆಂಬರ್‌ನಲ್ಲಿ ಶೇ.120 ಮತ್ತು ಅಕ್ಟೋಬರ್‌ನಲ್ಲಿ ಶೇ.42 ಮಳೆ ಪ್ರಮಾಣ ಹೆಚ್ಚಾಗಿತ್ತು. ಇದರಿಂದ ನಗರದ ಬಹುತೇಕ ಪ್ರದೇಶಗಳು ಜಲಾವೃತಗೊಂಡು ಜನಜೀವನವೇ ಅಸ್ತವ್ಯಸ್ತಗೊಂಡಿತ್ತು.

ADVERTISEMENT

‘ನಗರದಲ್ಲಿ ಈವರೆಗೂ ನಿರೀಕ್ಷಿಸಿದಷ್ಟು ಮಳೆ ಸುರಿದಿಲ್ಲ. ಹಾಗಂತ ನಗರವೇನು ಪ್ರವಾಹದಿಂದ ಸುರಕ್ಷಿತವಾಗಿದೆ ಅಂದೆನಲ್ಲ. ಮಳೆಯ ಕೊರತೆಯಿಂದಾಗಿ ಅನಾಹುತಗಳು ಸಂಭವಿಸಿಲ್ಲ. ಮುಂದಿನ ತಿಂಗಳು ಇದೇ ಸ್ಥಿತಿ ಇರುತ್ತೆ ಎಂದು ಹೇಳಲಾಗದು’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

‘ಈ ಬಾರಿಯ ಮಾನ್ಸೂನ್‌ನಲ್ಲಿ (ಜೂನ್‌ನಿಂದ ಆಗಸ್ಟ್‌) ನಗರದಲ್ಲಿ ನಿರೀಕ್ಷಿತ ಮಟ್ಟಕ್ಕಿಂತ ಶೇ30ರಷ್ಟು ಕಡಿಮೆ ಮಳೆ ಸುರಿದಿದೆ. ಕಳೆದ ವರ್ಷದ ಮಾನ್ಸೂನ್‌ನಲ್ಲಿಯೂ ಇದೆ ಸ್ಥಿತಿ ಇತ್ತು. ಮುಂದಿನ ಎರಡು ತಿಂಗಳಲ್ಲಿ, ಕಳೆದ ವರ್ಷದಷ್ಟು ಅಲ್ಲದಿದ್ದರೂ, ಸಾಮಾನ್ಯ ನಿರೀಕ್ಷೆಕ್ಕಿಂತ ಮಳೆ ಹೆಚ್ಚಾಗಿ ಬೀಳುವ ಸಾಧ್ಯತೆ ಇದೆ. ಹಾಗಾಗಿ ನಗರ ಸುರಕ್ಷಿತವಾಗಿ ಇದೆ ಎನ್ನಲು ಆಗದು’ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ವಾಯುಭಾರ ಕುಸಿತದಿಂದ, ಮೋಡಗಳು ದಕ್ಷಿಣ ಒಳನಾಡಿಗೆ ಬರುವ ಸಾಧ್ಯತೆ ಇದೆ. ಹಾಗಾಗಿ ಮುಂದಿನ ತಿಂಗಳ ಮಳೆ ಕುರಿತು ಕ್ರಮಗಳನ್ನು ಕೈಗೊಳ್ಳುವಂತೆ ಮುನ್ಸೂಚನೆಯನ್ನು ಪಾಲಿಕೆಗೆ ನೀಡಲಾಗಿದೆ’ ಎಂದು ರೆಡ್ಡಿ ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ 633 ಮಳೆನೀರು ರಾಜಕಾಲುವೆಗಳಿವೆ. ಅವುಗಳಲ್ಲಿ 142 ಕಿ.ಮೀ. ಉದ್ದದ ಬೃಹತ್‌ ಗಾತ್ರದ ಮತ್ತು 426 ಕಿ.ಮೀ. ಉದ್ದದ ಮಧ್ಯಮ ಗಾತ್ರದ ಕಾಲುವೆಗಳಿವೆ. ದಿನವೊಂದರಲ್ಲಿ ಸುರಿಯುವ 80 ಮಿ.ಮೀ. ಮಳೆನೀರಿನ ಹರಿವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಈ ಕಾಲುವೆಗಳು ಹೊಂದಿವೆ. ಒತ್ತುವರಿ ಮತ್ತು ಕಳಪೆ ನಿರ್ವಹಣೆಯಿಂದಾಗಿ ಇವುಗಳ ನೀರಿನ ಹರಿವು ನಿರ್ವಹಣಾ ಸಾಮರ್ಥ್ಯ 35ರಿಂದ 40 ಮಿ.ಮೀ. ಮಳೆಗೆ ಕುಸಿದಿದೆ ಎಂದು ಹೇಳಲಾಗುತ್ತಿದೆ.ಈ ಅಂಕಿ–ಅಂಶಗಳ ಪ್ರಮಾಣಕ್ಕಿಂತ ಹೆಚ್ಚಾಗಿ ಮಳೆ ಬಿದ್ದರೆ, ನಗರದ ಕೆಲವು ಪ್ರದೇಶಗಳು ನೀರಲ್ಲಿ ಮುಳುಗಲಿವೆ.

‘ರಾಜಕಾಲುವೆ ಒತ್ತುವರಿ ಮಾಡಿರುವ1,953 ಪ್ರಕರಣಗಳ ಪಟ್ಟಿಯನ್ನು ಮುಖ್ಯಮಂತ್ರಿ ಕಚೇರಿಗೆ ಪಾಲಿಕೆ 2016ರ ಜುಲೈನಲ್ಲಿ ನೀಡಿತ್ತು. 2017ರ ಅಂತ್ಯದ ವೇಳೆಗೆ1,255 ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ. ಸರ್ವೆಯರ್‌ಗಳ ಕೊರತೆಯಿಂದಾಗಿ ಒತ್ತುವರಿ ತೆರವು ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿಲ್ಲ’ ಎಂದು ಪಾಲಿಕೆ ಸಬೂಬು ನೀಡಿತ್ತು. ಬಳಿಕ ಕಂದಾಯ ಇಲಾಖೆ ಹತ್ತು ಸರ್ವೆಯರ್‌ಗಳನ್ನು ಪಾಲಿಕೆಗೆ ನಿಯೋಜಿಸಿತ್ತು.

‘ಕೆ.ಆರ್‌.ಪುರ, ಯಶವಂತಪುರ ಮತ್ತು ಇತರೆ ಪ್ರದೇಶಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಈಗಾಗಲೇ ಮತ್ತೆ ಆರಂಭಿಸಿದ್ದೇವೆ’ ಎಂದು ಮುಖ್ಯ ಎಂಜಿನಿಯರ್(ರಾಜಕಾಲುವೆ) ಬಿ.ಟಿ.ಬೆಟ್ಟೆಗೌಡ ತಿಳಿಸಿದ್ದಾರೆ.

‘ನಾವು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ಬಾರಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವುದಿಲ್ಲ’ ಎಂದು ಬೆಟ್ಟೆಗೌಡ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಆದರೆ, ‘ತೆಗೆದುಕೊಂಡಿರುವ ಕ್ರಮಗಳು ಪ್ರವಾಹ ನಿಯಂತ್ರಿಸಲು ಏನೇನೂ ಸಾಲದು’ ಎನ್ನುತ್ತವೆ ಪಾಲಿಕೆಯ ಮೂಲಗಳು.

‘ಸರ್ವೆಯರ್‌ಗಳು ಬರುವುದನ್ನೆ ಕಾದು ನೋಡುತ್ತ ಈ ವರ್ಷದ ಎಂಟು ತಿಂಗಳನ್ನು ಪಾಲಿಕೆ ಕಳೆದಿದೆ. ಆದರೆ ಪ್ರವಾಹ ಯಾರಿಗೂ ಕಾಯುವುದಿಲ್ಲ’ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.

ನಗರದ ಕೆರೆಗಳಲ್ಲಿ ಹೂಳು

‘ನಗರದಲ್ಲಿ 160 ಕೆರೆಗಳಿವೆ. ಅವುಗಳಲ್ಲಿ 141 ಕೆರೆಗಳು ಪಾಲಿಕೆ ವ್ಯಾಪ್ತಿಯಲ್ಲಿವೆ. 58 ಕೆರೆಗಳ ಹೂಳನ್ನು ಮಾತ್ರ ತೆಗೆಯಲಾಗಿದೆ. 15 ಕೆರೆಗಳ ಹೂಳು ತೆಗೆಸಲುಇತ್ತೀಚೆಗೆ ಟೆಂಡರ್‌ ಕರೆಯಲಾಗಿದೆ. ಈ ಕೆಲಸ ಮುಂದಿನ ಮಳೆ ಬೀಳುವ ಹೊತ್ತಿಗೇನು ಮುಗಿಯಲ್ಲ. ಈ ಕಾಮಗಾರಿಗಳಿಗೆ ಅನುದಾನವೂ ಪಾಲಿಕೆಯಲ್ಲಿ ಇಲ್ಲ. ಒಂದೇ ವೇಳೆ ನಿರೀಕ್ಷಿತ ಮಟ್ಟಕ್ಕಿಂತ ಮಳೆ ಜೋರಾಗಿ ಹೊಡೆದರೆ, ಹೂಳು ತುಂಬಿರುವ ಕೆರೆಗಳ ಸುತ್ತಲಿನ ಪ್ರದೇಶಗಳಲ್ಲಿ ಮಳೆನೀರು ತುಂಬಲಿದೆ’ ಎನ್ನುತ್ತವೆ ಪಾಲಿಕೆ ಮೂಲಗಳು.

ಕಳೆದ ವರ್ಷದ ಮಳೆಯಲ್ಲಿ ಶೇಷಾದ್ರಿಪುರ, ಕುರುಬರಹಳ್ಳಿ ಮತ್ತು ಸಿ.ವಿ.ರಾಮನ್‌ ನಗರದಲ್ಲಿ ರಾಜಕಾಲುವೆಯಲ್ಲಿ ಬಿದ್ದು ಮೂವರು ಮೃತಪಟ್ಟಿದ್ದರು. ಆ ಪರಿಸ್ಥಿತಿ ಮರುಕಳಿಸದಿರಲಿ ಎಂದು ಕೆಲವು ಜನವಸತಿ ಪ್ರದೇಶಗಳಲ್ಲಿನ ಕಾಲುವೆಗಳ ಮೇಲ್ಭಾಗವನ್ನು ಪಾಲಿಕೆ ಮುಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.