ADVERTISEMENT

ಬೆಂಗಳೂರು | ಹಸಿರು ವಲಯಕ್ಕೆ ಕಾಂಕ್ರೀಟೀಕರಣ ಮಾರಕ

ನಗರಕ್ಕೆ ಪರಿಸರ ಸ್ನೇಹಿ ಖ್ಯಾತಿ ಮರುಕಳಿಸಲು ಬೇಕಿದೆ ‘ಕಾನೂನು ಮಂತ್ರದಂಡ’

Published 14 ಏಪ್ರಿಲ್ 2023, 3:06 IST
Last Updated 14 ಏಪ್ರಿಲ್ 2023, 3:06 IST
ಹೊಸಕೆರೆಹಳ್ಳಿ ಕೆರೆಯೊಳಗೆ ಜಲವಿಸ್ತೀರ್ಣ ಕಡಿತಗೊಳಿಸುವ ಸಿವಿಲ್‌ ಎಂಜಿನಿಯರಿಂಗ್‌ ಕಾಮಗಾರಿ...
ಹೊಸಕೆರೆಹಳ್ಳಿ ಕೆರೆಯೊಳಗೆ ಜಲವಿಸ್ತೀರ್ಣ ಕಡಿತಗೊಳಿಸುವ ಸಿವಿಲ್‌ ಎಂಜಿನಿಯರಿಂಗ್‌ ಕಾಮಗಾರಿ...   

ಬೆಂಗಳೂರು: ಉದ್ಯಾನ ನಗರ, ಹವಾನಿಯಂತ್ರಿತ ನಗರ ಎನ್ನುವ ಖ್ಯಾತಿ ಹೊಂದಿದ್ದ ಬೆಂಗಳೂರು ಮಹಾನಗರಿಯನ್ನು ಮತ್ತೆ ಅದೇ ಸ್ಥಿತಿಗೆ ತರುತ್ತೇವೆ ಎನ್ನುವ ಮಾತು ಪದೇ ಪದೇ ಕೇಳಿಬರುತ್ತದೆ. ಇದಕ್ಕಾಗಿ ವಿಶೇಷ ಯೋಜನೆಗಳನ್ನೂ ರೂಪಿಸಲಾಗುತ್ತದೆ. ಆದರೆ, ಅನುಷ್ಠಾನ ಮಾತ್ರ ಕಾಂಕ್ರೀಟೀಕರಣಕ್ಕೆ ಮಾತ್ರ ಸೀಮಿತವಾಗಿದೆ

ಕೆರೆ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ವಾರ್ಷಿಕವಾಗಿ ನೂರಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ಪ್ರತಿ ವರ್ಷವೂ ಲಕ್ಷಾಂತರ ಸಸಿಗಳನ್ನು ನೆಡಲಾಗುತ್ತಿದೆ ಎಂಬುದು ಪ್ರಕಟಣೆಗೆ ಮಾತ್ರ ಸೀಮಿತವಾಗಿದೆ. ಪ್ರತಿ ವರ್ಷ ಇಷ್ಟೊಂದು ಲಕ್ಷ ಸಸಿಗಳನ್ನು ನೆಟ್ಟಿದ್ದರೆ ನಗರ ಪೂರ್ಣ ಮರಗಳೇ ಇರಬೇಕಿತ್ತು.

ಇನ್ನು, ಪ್ರತಿಯೊಂದು ಕೆರೆಯ ಅಭಿವೃದ್ಧಿಗೆ ಹತ್ತಾರು ಕೋಟಿ ವೆಚ್ಚ ಮಾಡಲಾಗುತ್ತಿದೆ. ಇಲ್ಲಿ ಜೀವವೈವಿಧ್ಯಕ್ಕೆ ಅನುವು ಮಾಡಿಕೊಡುವ ಬದಲು ಕಾಂಕ್ರೀಟ್‌ ನಿರ್ಮಾಣಕ್ಕೇ ಹೆಚ್ಚು ಗಮನವಹಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ಸಂಪರ್ಕ ಸೇತುವಾಗಿ ಕೆರೆ ಏರಿ ಬಳಕೆಯಾಗುತ್ತಿದ್ದದ್ದು ಹೊರತುಪಡಿಸಿದರೆ ಇನ್ನೇನು ಇರುತ್ತಿರಲಿಲ್ಲ. ಇದೀಗ ಕೆರೆಯ ಸುತ್ತ ವಾಕಿಂಗ್‌ ಟ್ರ್ಯಾಕ್‌ಗಾಗಿ ಕಾಂಕ್ರೀಟ್‌ ಬಳಕೆಯಾಗುತ್ತಿದೆ. ಕಟ್ಟಡಗಳ ನಿರ್ಮಾಣ, ಹೈಟೆಕ್‌ ಸೌಲಭ್ಯ ಎಂದೆಲ್ಲ ಬೇಡದ್ದೆಲ್ಲ ಸೌಲಭ್ಯಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ, ಜೀವವೈವಿಧ್ಯದ ತಾಣವಾಗಿರುವ ಕೆರೆಗಳಲ್ಲಿ ಪಕ್ಷಿ–ಪ್ರಾಣಿಗಳಿಗೆ ನೀಡಬೇಕಾದ ಸೌಲಭ್ಯಗಳಿಲ್ಲ. ವೃಕ್ಷವನಗಳಿಗೆ ಜಾಗವೇ ಇಲ್ಲ.

ADVERTISEMENT

ಒಂದು ಕೆರೆಯ ಅಭಿವೃದ್ಧಿಗೆ ಸಿವಿಲ್‌ ಎಂಜಿನಿಯರ್‌ ಅಷ್ಟೇ ಮಾನದಂಡವಾಗಿದ್ದು, ಪರಿಸರ ಸ್ನೇಹಿಯಾದ ಸೌಲಭ್ಯಗಳು ನಗಣ್ಯವಾಗಿವೆ. ಇದು ಉದ್ಯಾನಗಳಿಗೂ ಅನ್ವಯ. ಉದ್ಯಾನಗಳಲ್ಲಿ ಗಿಡಮರಗಳಿಗಿಂತ ಪೀಠೋಪಕರಣಗಳಿಗೇ ಆದ್ಯತೆ ಎಂಬುದು ನಾಗರಿಕರ ಆರೋಪ.

‘ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಸಾಕಷ್ಟು ಕೆಲಸಗಳಾಗಬೇಕಿದೆ. ವಾಯು, ನೀರು ಮಾಲಿನ್ಯವನ್ನು ಮಾಪನ ಮಾಡಿ, ಅದನ್ನು ಪ್ರಕಟಿಸುವುದಷ್ಟೇ ಕಾರ್ಯವಾಗಿದೆ. ಇಷ್ಟು ವರ್ಷಗಳಿಂದ ಇಷ್ಟಕ್ಕೇ ಸೀಮಿತವಾಗಿರುವ ಈ ಮಂಡಳಿಗೆ ಜವಾಬ್ದಾರಿ ನಿಗದಿಪಡಿಸಬೇಕಿದೆ. ಯಾವುದೇ ರೀತಿಯ ಮಾಲಿನ್ಯ ಕಂಡುಬಂದರೆ ಅದಕ್ಕೆ ಮಂಡಳಿಯನ್ನೇ ಹೊಣೆ ಮಾಡಬೇಕಿದೆ. ಇಂತಹ ನಿರೀಕ್ಷೆಗೆ ಸರ್ಕಾರದ ಅಧಿಕೃತ ಮೊಹರು ಬೇಕಿದೆ. ಇಲ್ಲದಿದ್ದರೆ ಕಾನೂನಿನಿಂದ ಆದೇಶವಾಗಬೇಕಿದೆ’ ಎಂದು ಪರಿಸರ ಕಾರ್ಯಕರ್ತರು ಆಗ್ರಹಿಸುತ್ತಾರೆ.

ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ ಕಡ್ಡಾಯವಾಗಲಿ

ನಗರ ಮತ್ತು ಅದರ ಜನಸಂಖ್ಯೆಯ ಸುಸ್ಥಿರ ಬೆಳವಣಿಗೆಗೆ ಕೆರೆಗಳು, ಉದ್ಯಾನಗಳು ಮತ್ತು ಮರಗಳು ನಿರ್ಣಾಯಕ. ವಸತಿ ಮತ್ತು ಇತರ ಮೂಲಸೌಕರ್ಯಗಳ ಅಗತ್ಯವಿದ್ದರೂ, ಸೂಕ್ಷ್ಮ ಹವಾಮಾನ ಬದಲಾವಣೆಯನ್ನು ತಗ್ಗಿಸಲು ಸುಸ್ಥಿರ ಅಭಿವೃದ್ಧಿಯಾಗಬೇಕಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಾವು ಕಳೆದುಕೊಂಡಿರುವ ಉದ್ಯಾನ ನಗರವೆಂಬ ಪಟ್ಟವನ್ನು ನಾವು ಮರಳಿ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಮುಂಬರುವ ಮತ್ತು ಪ್ರಸ್ತುತ ಎಲ್ಲಾ ಯೋಜನೆಗಳಿಗೆ ಪರಿಸರದ ಮೇಲಿನ ಪರಿಣಾಮ ಮೌಲ್ಯಮಾಪನ (ಇಐಎ) ಕಡ್ಡಾಯವಾಗಿರಬೇಕು. ಪ್ರತಿ ವರ್ಷಕ್ಕೆ ಮಾಸ್ಟರ್‌ ಪ್ಲಾನ್‌ ನಿರಂತರವಾಗಿ ರೂಪುಗೊಳ್ಳಬೇಕು. ನಗರದಲ್ಲಿ ವಾರ್ಡ್‌ವಾರು ಭೂ-ಬಳಕೆಯ ಬದಲಾವಣೆಗಳನ್ನು ಪಟ್ಟಿ ಮಾಡಿ, ಜನಸ್ನೇಹಿ ಹವಾಮಾನ ರೂಪುಗೊಳ್ಳಲು ನೆರವಾಗಬೇಕು.

ವಿನೋದ್ ಜೇಕಬ್, ಪ್ರಧಾನ ವ್ಯವಸ್ಥಾಪಕ,
ನಮ್ಮ ಬೆಂಗಳೂರು ಫೌಂಡೇಷನ್‌

ಅಭಿವೃದ್ಧಿ ಜೀವಕ್ಕೆ ಮಾರಕವಾಗದಿರಲಿ

ನಗರ ಅರಣ್ಯಗಳನ್ನು ಉಳಿಸಿಕೊಳ್ಳುವುದಕ್ಕೆ ಒತ್ತು ಕೊಟ್ಟು, ರಾಜಕಾಲುವೆಗಳನ್ನು ಪುನರ್‌ ಅಭಿವೃದ್ಧಿಗೊಳಿಸಿ, ಕೆರೆಗಳಿಗೆ ಶುದ್ಧ ನೀರು ತುಂಬಿಸುವ ಕೆಲಸ ಆಗಲೇಬೇಕು. ಇಷ್ಟಾದರೆ ಚೇತರಿಕೆ ಕಂಡಂತೆ. ನಗರದ ಹೊರ ವಲಯಗಳಲ್ಲಿ ಹೊಸ ಬಡಾವಣೆಗಳು ನಿರ್ಮಾಣವಾದಾಗ, ಶೇಕಡ 50ರಷ್ವು ವನ ನಿರ್ಮಾಣವಾಗಬೇಕು. ವಾಹನ ದಟ್ಟಣೆ ಕಡಿಮೆಯಾಗಿಸಲು ಹಲವು ಹತ್ತು ಪ್ರಚಲಿತ ಮಾರ್ಗಗಳಿದ್ದು, ಅನುಷ್ಠಾನಕ್ಕೆ ತರಬೇಕಿದೆ. ಪರಿಸರ ನಿರ್ವಹಣಾ ಹಾಗೂ ನಿಯಂತ್ರಣಾ ಮಂಡಳಿಗಳು ಪರಿಸರಕ್ಕೆ ಮಾರಕವಾಗುವ ಕಾಮಗಾರಿಗಳಿಗೆ ನಿರ್ದಾಕ್ಷಿಣ್ಯವಾಗಿ ತಡೆ ಹಾಕಬೇಕು. ಜೀವ ಇದ್ದರೆ ಮಾತ್ರ ಜೀವನ. ಅಭಿವೃದ್ಧಿ ಜೀವಕ್ಕೆ ಮಾರಕವಾಗದಿರಲಿ.

ಡಾ.ಟಿ.ಜೆ. ರೇಣುಕಾ ಪ್ರಸಾದ್, ಭೂವಿಜ್ಞಾನ ನಿವೃತ್ತ ಪ್ರಾಧ್ಯಾಪಕ, ಬೆಂಗಳೂರು ವಿಶ್ವವಿದ್ಯಾಲಯ

ಉಷ್ಣ ದ್ವೀಪಗಳ ಸೃಷ್ಟಿಯೇ ಮಾರಕ

ನಗರದಲ್ಲಿ ಕೆರೆಗಳನ್ನು ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಮಾಡುತ್ತಿದ್ದು, ಅವುಗಳನ್ನು ಉಷ್ಣ ದ್ವೀಪಗಳನ್ನಾಗಿ ನಿರ್ಮಿಸಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ಮಾನದಂಡಗಳೇ ಇಲ್ಲ. ಪರಿಸರ ತಜ್ಞರು ಅಂದರೆ ಭೂವಿಜ್ಞಾನಿಗಳು, ಜಲವಿಜ್ಞಾನಿಗಳು, ಲಿಮ್ನಾಲಜಿಸ್ಟ್‌, ವಿಷಶಾಸ್ತ್ರ ತಜ್ಞರು ಮತ್ತು ಸಿವಿಲ್‌ ಎಂಜಿನಿಯರ್‌ಗಳಿರುವ ತಾಂತ್ರಿಕ ಅನುಮೋದನಾ ಸಮಿತಿ ರಚನೆ ಅಗತ್ಯ. ಇಲ್ಲಿ ಅನುಮೋದನೆಯಾಗಿರುವುದನ್ನು ಕಾರ್ಯಗತಗೊಳಿಸಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಮುಂದಾಗಬೇಕು. ಎಲ್ಲವೂ ಈ ಪ್ರಾಧಿಕಾರದ ನಿಗಾದಲ್ಲೇ ನಡೆಯಲು ಬಲ ನೀಡಬೇಕು.

ಯಾವುದೇ ಕೆರೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ಇಲ್ಲದೆ, ಅದಕ್ಕೆ ತಾಂತ್ರಿಕ ಅನುಮೋದನಾ ಸಮಿತಿ ಸಮ್ಮತಿ ಇಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಾರದು. ಈ ಎಲ್ಲ ವಿವರಗಳು ವೆಬ್‌ಸೈಟ್‌ ಮೂಲಕ ನಾಗರಿಕರಿಗೆ ಮುಕ್ತವಾಗಿ ಸಿಗುವ ವ್ಯವಸ್ಥೆ ಇರಬೇಕು. ನ್ಯಾಯಮೂರ್ತಿ ಎನ್.ಕೆ. ಪಾಟೀಲ್‌ ವರದಿಯಂತೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಕೆರೆ ಸಮಿತಿಗಳನ್ನು ರಚಿಸಿ ಮೇಲ್ವಿಚಾರಣೆ ಜವಾಬ್ದಾರಿ ವಹಿಸಬೇಕು. ಕೆರೆ ಹಾಗೂ ಬಫರ್ ಝೋನ್‌ನಲ್ಲಿ ರಸ್ತೆ– ಮೇಲ್ಸೇತುವೆ ಸೇರಿದಂತೆ ಯಾವ ರೀತಿಯ ಕಾಂಕ್ರೀಟ್‌ ಅಭಿವೃದ್ಧಿಯೂ ಆಗಬಾರದು. ಬೆಂಗಳೂರಿನಲ್ಲಿ ಉಷ್ಣಾಂಶವನ್ನು ಕಡಿಮೆ ಮಾಡಲು ಪರಿಸರವನ್ನು ಉಳಿಸಿಕೊಳ್ಳಬೇಕಿದೆ. ಪುಸ್ತಕದಲ್ಲಿ ಎಲ್ಲವನ್ನೂ ತೋರುವ ಬದಲು ಅದನ್ನು, ಪರಿಸರಸ್ನೇಹಿ ಅಭಿವೃದ್ಧಿಗಳನ್ನೂ ಮಾತ್ರ ಕೈಗೊಳ್ಳುವಂತಾಗಬೇಕಿದೆ.

ರಾಮ್‌ಪ್ರಸಾದ್‌, ಫ್ರೆಂಡ್ಸ್‌ ಆಫ್‌ ಲೇಕ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.