ADVERTISEMENT

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2024, 23:56 IST
Last Updated 19 ಸೆಪ್ಟೆಂಬರ್ 2024, 23:56 IST
   

ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ಕಾಂಗ್ರೆಸ್‌ ನಾಯಕರು ಗುರುವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ‘ಲಜ್ಜೆಗೆಟ್ಟು ನಡೆದುಕೊಂಡಿರುವ ಮುನಿರತ್ನ ಅವರು ಜನಪ್ರತಿನಿಧಿಯಾಗಲು ಅನರ್ಹರು.‌ ರಾಜ್ಯ ಸರ್ಕಾರ ಈ ಪ್ರಕರಣ ವನ್ನು ಗಂಭೀರವಾಗಿ ಪರಿಗಣಿಸಬೇಕು. ಮುನಿರತ್ನ ಮೇಲಿನ ಪ್ರಕ‌ರಣವನ್ನು ಸ್ವಯಂಪ್ರೇರಿತ ಪ್ರಕರಣವಾಗಿ ಪರಿವರ್ತಿಸ ಬೇಕು’ ಎಂದು ಆಗ್ರಹಿಸಿದರು.

‘ಪರಿಶಿಷ್ಟರು, ಒಕ್ಕಲಿಗರು ಅದರಲ್ಲೂ ಮಹಿಳೆಯರ ಬಗ್ಗೆ ಅತ್ಯಂತ ಹೀನವಾಗಿ ಮಾತನಾಡಿರುವ ಮುನಿರತ್ನ ಅವರ ನಡೆ ಖಂಡನೀಯ. ಮುನಿರತ್ನ ಅವರು ಆಡಿರುವ ಕೆಟ್ಟ ಮಾತುಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಯ ಆಂತರ್ಯದ ಮಾತುಗಳನ್ನು ಅವರು ಹೊರ ಹಾಕಿದ್ದಾರೆ’ ಎಂದರು.

ADVERTISEMENT

‘ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯುವ ವ್ಯಕ್ತಿಯನ್ನು ಬಿಜೆಪಿ ಬೆಂಬಲಿಸುತ್ತಿದೆ. ಆರ್. ಅಶೋಕ, ಪ್ರಲ್ಹಾದ ಜೋಷಿಯವರು ಕೂಡಾ ಸಮರ್ಥನೆ ಮಾಡಿಕೊಳ್ಳುತ್ತಿ ದ್ದಾರೆಂದರೆ ಅವರೆಲ್ಲ ರಾಜಕೀಯ ಅಧಃಪತನಕ್ಕೆ ಇಳಿದಿದ್ದಾರೆ ಎಂದರ್ಥ’ ಎಂದರು.

‘ಮುನಿರತ್ನ ಅವರನ್ನು ಬಿಜೆಪಿ ತಕ್ಷಣ ವಜಾ ಮಾಡಬೇಕು’ ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್‌ ಆಗ್ರಹಿಸಿದರು.

ಕೆಪಿಸಿಸಿ ಉಪಾಧ್ಯಕ್ಷ ಎಂ. ನಾರಾಯಣಸ್ವಾಮಿ, ಆರ್.ವಿ. ವೆಂಕಟೇಶ್, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ‌ ಅಧ್ಯಕ್ಷ ಅಬ್ದುಲ್ ವಾಜಿದ್ ಸೇರಿದಂತೆ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ಕಾಂಗ್ರೆಸ್‌ ಒಕ್ಕಲಿಗ ನಾಯಕರ ಸಭೆ

ಬೆಂಗಳೂರು: ಒಕ್ಕಲಿಗ ಸಮುದಾಯದ ಕುರಿತು ಬಿಜೆಪಿ ಶಾಸಕ ಮುನಿರತ್ನ ಅವರು ಆಡಿರುವ ಮಾತುಗಳ ವಿರುದ್ಧ ಒಟ್ಟಾಗಿ ನಿಂತು ಪ್ರತಿಭಟಿಸಲು ಕಾಂಗ್ರೆಸ್‌ ಒಕ್ಕಲಿಗ ಸಚಿವರು, ಶಾಸಕರು, ಮುಖಂಡರು ನಿರ್ಧರಿಸಿದ್ದಾರೆ.

ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ನೇತೃತ್ವದಲ್ಲಿ ಗುರುವಾರ ಸಭೆ ನಡೆಯಿತು. ಮುನಿರತ್ನ ಪ್ರಕರಣ ಕುರಿತಂತೆ ಚರ್ಚೆ ನಡೆಸಿದ ಮುಖಂಡರು, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲು ಕೂಡಾ ತೀರ್ಮಾನಿಸಿದರು.

ಸಚಿವರಾದ ಎಂ.ಸಿ. ಸುಧಾಕರ್, ವೆಂಕಟೇಶ್, ಕೃಷ್ಣ ಬೈರೇಗೌಡ, ಶಾಸಕರಾದ ಟಿ.ಬಿ. ಜಯಚಂದ್ರ, ಶಿವಲಿಂಗೇಗೌಡ, ಬಾಲಕೃಷ್ಣ, ಶರತ್ ಬಚ್ಚೇಗೌಡ, ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.

‘ನಾವು ಸಹಿಸುವುದಿಲ್ಲ’

‘ಮುನಿರತ್ನ ನಮ್ಮ (ಒಕ್ಕಲಿಗ) ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ಸಹಿಸಿಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಆತ ಮೋದಿಯವರ ತಾಯಿ ಬಗ್ಗೆ ಮಾತನಾಡಿದ್ದನ್ನು ಬಿಜೆಪಿಯವರು ಸಹಿಸಿಕೊಂಡಿರಬಹುದು. ಆದರೆ ನಮಗೆ ಅದು ಸಿಟ್ಟು, ಬೇಸರ ತರಿಸಿತ್ತು. ಈಗ ಅದೇ ಮುನಿರತ್ನ ನಮ್ಮ ಸಹೋದರಿಯರು ಹಾಗೂ ಹೆಣ್ಣು ಕುಲಕ್ಕೆ ಮಾಡಿರುವ ಅಪಮಾನವನ್ನು ನಾವು ಸಹಿಸುವುದಿಲ್ಲ’ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.