ADVERTISEMENT

ಬೆಂಗಳೂರು: ಅಮೆಜಾನ್‌ ಬಾಕ್ಸ್‌ನಲ್ಲಿ ಬಂತು ಹಾವು!

ಪಿಟಿಐ
Published 20 ಜೂನ್ 2024, 0:30 IST
Last Updated 20 ಜೂನ್ 2024, 0:30 IST
ಅಮೆಜಾನ್‌ ಬಾಕ್ಸ್‌ನಲ್ಲಿ ಬಂದಿದ್ದ ಹಾವು
ಅಮೆಜಾನ್‌ ಬಾಕ್ಸ್‌ನಲ್ಲಿ ಬಂದಿದ್ದ ಹಾವು   

ಬೆಂಗಳೂರು: ಇ–ಕಾಮರ್ಸ್‌ ವಲಯದ ಅಮೆಜಾನ್ ಗ್ರಾಹಕರಿಗೆ ತಲುಪಿಸಿದ ‘ಎಕ್ಸ್‌ಬಾಕ್ಸ್‌ ಕಂಟ್ರೋಲರ್‌’ ಜೊತೆಗೆ ಜೀವಂತ ಹಾವು ಬಂದಿದೆ.

ಅಮೆಜಾನ್‌ನಿಂದ ಬಂದ ಬಾಕ್ಸ್‌ ತೆರೆದಾಗ ಹಾವು ಕಾಣಿಸಿಕೊಂಡಿತು. ಬಾಕ್ಸ್‌ಗೆ ಅಂಟಿಸಿದ್ದ ಟೇಪ್‌ನಲ್ಲಿ ಹಾವು ಸಿಲುಕಿಕೊಂಡಿದ್ದರಿಂದ, ಯಾವುದೇ ಅಪಾಯ ಸಂಭವಿಸಿಲ್ಲ. ಸರ್ಜಾಪುರದಲ್ಲಿರುವ ಐಟಿ ವೃತ್ತಿಪರರಾದ ದಂಪತಿ, ಬಾಕ್ಸ್‌ ಅನ್ನು ಬಕೆಟ್‌ನಲ್ಲಿಟ್ಟು ವಿಡಿಯೊ ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಮೆಜಾನ್‌ ಇಂಡಿಯಾದ ವಕ್ತಾರರು ಪ್ರತಿಕ್ರಿಯಿಸಿ, ‘ಈ ಪ್ರಕರಣದ ಬಗ್ಗೆ ಕಂಪನಿ ಪರಿಶೀಲನೆ ನಡೆಸಲಿದೆ. ಗ್ರಾಹಕರು, ಉದ್ಯೋಗಿಗಳು ಮತ್ತು ನಮ್ಮ ಸಹಯೋಗಿಗಳ ರಕ್ಷಣೆ ಆದ್ಯ ಕರ್ತವ್ಯ’ ಎಂದಿದ್ದಾರೆ.

ADVERTISEMENT

‘ಬಾಕ್ಸ್ ಅನ್ನು ಡೆಲಿವರಿ ಸಿಬ್ಬಂದಿ ನೇರವಾಗಿ ನಮಗೇ ನೀಡಿದರು. ನಾವು ಸರ್ಜಾಪುರದಲ್ಲಿದ್ದು, ಪೂರ್ಣ ಪ್ರಕರಣವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದೇವೆ’ ಎಂದು ದಂಪತಿ ಹೇಳಿದ್ಧಾರೆ.

‘ಬಾಕ್ಸ್‌ನಲ್ಲಿದ್ದ ಹಾವನ್ನು ಅತಿ ವಿಷಕಾರಿ ನಾಗರಹಾವು ಎಂದು ನಾವು ಗುರುತಿಸಿದ್ದೇವೆ. ಪ್ಯಾಕೇಜ್‌ನ ಸಂಪೂರ್ಣ ಮೊತ್ತವನ್ನು ಕಂಪನಿ ಮರುಪಾವತಿ ಮಾಡಿದೆ. ಆದರೆ, ವಿಷಕಾರಿ ಹಾವಿನ ಸಂಕಷ್ಟದಿಂದ ಜೀವಹಾನಿಯಾಗಿದ್ದರೆ ಏನು ಮಾಡುತ್ತಿದ್ದರು? ಅವರ ದಾಸ್ತಾನು ಮಳಿಗೆಗಳು ಹಾಗೂ ಸಾಗಣೆಯಲ್ಲಿ ಸ್ವಚ್ಛತೆ ಮತ್ತು ಮೇಲುಸ್ತುವಾರಿಯಲ್ಲಿನ ನಿರ್ಲಕ್ಷತೆಯೇ ಇದಕ್ಕೆಲ್ಲ ಕಾರಣ ’ ಎಂದು ಅವರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.