ಬೆಂಗಳೂರು: ನಗರದಲ್ಲಿ ಅಪರಾಧ ಕೃತ್ಯಗಳ ತಡೆಗೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, 500ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಗುರುವಾರ ಬೆಳಿಗ್ಗೆ ದಾಳಿ ಮಾಡಿದ್ದಾರೆ.
ನಗರದ ಪಶ್ಚಿಮ, ಪೂರ್ವ ಹಾಗೂ ಕೇಂದ್ರ ವಿಭಾಗದ ಠಾಣೆ ವ್ಯಾಪ್ತಿಗಳಲ್ಲಿ ದಾಳಿ ನಡೆದಿದೆ. ರೌಡಿ ಪಟ್ಟಿಯಲ್ಲಿ ಹೆಸರು ಇರುವ ವ್ಯಕ್ತಿಗಳ ಮನೆಯಲ್ಲಿ ಬೆಳಿಗ್ಗೆಯಿಂದ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ನೂತನ ಕಮಿಷನರ್ ಬಿ. ದಯಾನಂದ್, ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್ ಇರುವವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ನಿರ್ದೇಶನ ನೀಡಿದ್ದಾರೆ.
ಅದರನ್ವಯ ವಿಶೇಷ ಪೊಲೀಸರ ತಂಡಗಳು, ರೌಡಿಗಳು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮನೆಗಳ ಮೇಲೆ ದಾಳಿ ನಡೆಸಿವೆ.
'ದಾಳಿ ವೇಳೆ, ಕಾಟನ್‌ಪೇಟೆಯಲ್ಲಿ ರೌಡಿ ಕುಮರೇಶ್ ಅಲಿಯಾಸ್ ಮಾವತ್ತಿ ಬಳಿ ಕಳ್ಳತನದ ಬೈಕ್ ಸಿಕ್ಕಿದೆ. ರೌಡಿ ಸಂದೀಪ್ ಅಲಿಯಾಸ್ ಧೋಬಿ ಬಳಿ 500 ಗ್ರಾಂ ಗಾಂಜಾ ಪತ್ತೆಯಾಗಿದೆ' ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.