ADVERTISEMENT

ಬೆಂಗಳೂರು | ಸೈನೆಡ್ ತಿನ್ನಿಸಿ ಕೊಲೆ: ಮೃತದೇಹಕ್ಕಾಗಿ ಹುಡುಕಾಟ

ಆಸ್ತಿ ಮಾರಾಟಕ್ಕೆ ಸಹಿ ಹಾಕದಿದ್ದಕ್ಕೆ ಕೃತ್ಯ, ಆಭರಣ ಕೊಡಿಸುವ ಸೋಗಿನಲ್ಲಿ ಅಪಹರಣ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 20:22 IST
Last Updated 27 ನವೆಂಬರ್ 2021, 20:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಸಹಿ ಹಾಕಲಿಲ್ಲವೆಂಬ ಕಾರಣಕ್ಕೆ ಸೀತಾ (47) ಎಂಬುವರನ್ನು ಸೈನೆಡ್ ತಿನ್ನಿಸಿ ಕೊಂದಿದ್ದ ಪ್ರಕರಣ ಭೇದಿಸಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.

‘ಮಂತ್ರಾಲಯದ ನಿವಾಸಿಗಳಾದ ನೂರ್ ಅಹಮ್ಮದ್ ಹಾಗೂ ಸತ್ಯ ಬಂಧಿತರು. ಅವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಾಜಿನಗರದಲ್ಲಿ ವಾಸವಿದ್ದ ಸೀತಾ, ಮನೆಯಿಂದ ಮಾರ್ಚ್ 26ರಂದು ನಾಪತ್ತೆ ಆಗಿದ್ದರು. ಈ ಬಗ್ಗೆ ಅವರ ತಮ್ಮ ವೆಂಕಟೇಶ್ ಆಚಾರ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ, ಸೀತಾ ಕೊಲೆಯಾಗಿರು ವುದು ತಿಳಿಯಿತು’ ಎಂದೂ ಹೇಳಿದರು.

ADVERTISEMENT

ಜಾಗ ಖರೀದಿಸಿದ್ದ ಆರೋಪಿ: ‘ಸೀತಾ ಅವರಿಗೆ ಸೇರಿದ್ದ ಪಿತ್ರಾರ್ಜಿತ ಜಾಗ ಮಂತ್ರಾಲಯದಲ್ಲಿದೆ. ಸದ್ಯ ಅಲ್ಲಿ ತಮ್ಮ ವೆಂಕಟೇಶ್ ಇದ್ದಾರೆ. ಅದೇ ಜಾಗವನ್ನು ವೆಂಕಟೇಶ್, ಆರೋಪಿ ನೂರ್ ಅಹಮ್ಮದ್‌ಗೆ ಮಾರಿದ್ದ. ಜಾಗ ನೋಂದಣಿ ಮಾಡಲು ಸೀತಾ ಸಹಿ ಬೇಕಿತ್ತು. ಆದರೆ, ಅವರು ಸಹಿ ಮಾಡಲು ನಿರಾಕರಿಸಿದ್ದರು’ ಎಂದೂ ಅಧಿಕಾರಿ ಹೇಳಿದರು.

‘ಸಹಿ ಹಾಕುವಂತೆ ವೆಂಕಟೇಶ್‌ ಕೂಡಾ ಅಕ್ಕನ ಮೇಲೆ ಒತ್ತಡ ಹೇರಿದ್ದರು. ಜಾಗ ಖರೀದಿಸಿದ್ದ ನೂರ್ ಅಹಮ್ಮದ್ ಸಹ ಹಲವು ಬಾರಿ ಸೀತಾ ಅವರನ್ನು ಭೇಟಿಯಾಗಿದ್ದ. ಸಹಿ ಹಾಕುವಂತೆ ಬೆದರಿಸಿದ್ದ’ ಎಂದೂ ತಿಳಿಸಿದರು.

ಆಭರಣ ಖರೀದಿ ನೆಪದಲ್ಲಿ ಅಪಹರಣ: ‘ಸೀತಾ ಜೀವಂತವಿದ್ದರೆ ಸಹಿ ಹಾಕುವುದಿಲ್ಲವೆಂದು ತಿಳಿದ ಆರೋಪಿ ನೂರ್ ಅಹಮ್ಮದ್, ಕೊಲೆ ಮಾಡಲು ಸಂಚು ರೂಪಿಸಿದ್ದ. ಅದಕ್ಕೆ ಮೆಂಟಲ್ ರಘು ಹಾಗೂ ಕುಮಾರ್ ಸಹಾಯ ಪಡೆದಿದ್ದ’ ಎಂದೂ ಹೇಳಿದರು.

‘ಆಭರಣ ಕೊಡಿಸುವುದಾಗಿ ಹೇಳಿದ್ದ ಆರೋಪಿಗಳು, ಸೀತಾ ಅವ ರನ್ನು ಕಾರಿನಲ್ಲಿ ಹತ್ತಿಸಿಕೊಂಡು ತುಮ ಕೂರು ರಸ್ತೆಗೆ ಕರೆದೊಯ್ದಿದ್ದರು. ಕಾರಿನಲ್ಲೇ ಒತ್ತಾಯದಿಂದ ಸೀತಾ ಅವರಿಗೆ ಸೈನೆಡ್ ತಿನ್ನಿಸಿ ಕೊಂದಿದ್ದರು. ಈ ಬಗ್ಗೆ ಆರೋಪಿಗಳಿಬ್ಬರು ತಪ್ಪೊಪ್ಪಿಕೊಂಡಿದ್ದಾರೆ.ಸೀತಾ ಮೃತದೇಹವನ್ನು ಕಾರಿನಲ್ಲಿ ಹೊಸಪೇಟೆಗೆ ತೆಗೆದುಕೊಂಡು ಹೋಗಿ ನದಿಯಲ್ಲಿ ಎಸೆದಿರುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಇದುವರೆಗೂ ಮೃತದೇಹ ಸಿಕ್ಕಿಲ್ಲ. ವಿಶೇಷ ತಂಡವೊಂದು ಈಗಾಗಲೇ ಹೊಸ ಪೇಟೆಗೆ ಹೋಗಿದ್ದು, ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದೆ’ ಎಂದೂ ಅಧಿಕಾರಿ ಮಾಹಿತಿ ನೀಡಿದರು.

‘ತಮ್ಮನ ಪಾತ್ರದ ಬಗ್ಗೆ ತನಿಖೆ’

‘ಇದೊಂದು ಸುಪಾರಿ ಹತ್ಯೆಯೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಕ್ಕ ಕಾಣೆಯಾದ ಬಗ್ಗೆ ದೂರು ನೀಡಿದ್ದ ತಮ್ಮ ವೆಂಕಟೇಶ್ ಮೇಲೆಯೂ ಕೆಲ ಅನುಮಾನಗಳಿವೆ. ವಿಚಾರಣೆಯಿಂದಲೇ ನಿಖರ ಮಾಹಿತಿ ಸಿಗಬೇಕಿದೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.

‘ಇಬ್ಬರು ಆರೋಪಿಗಳ ಸಾವು’

‘ಕೊಲೆಗೆ ಸಹಕರಿಸಿದ್ದ ಆರೋಪದ ಹೊಂದಿರುವ ಮೆಂಟಲ್ ರಘು ಹಾಗೂ ಕುಮಾರ್ ಕೆಲ ತಿಂಗಳ ಹಿಂದೆಯೇ ಮೃತಪಟ್ಟಿದ್ದಾರೆ. ಅನಾರೋಗ್ಯದಿಂದಾಗಿ ಅವರು ತೀರಿಕೊಂಡಿರುವ ಮಾಹಿತಿ ಇದೆ. ಅವರ ಸಾವಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.