ADVERTISEMENT

ಆನ್‌ಲೈನ್ ಟ್ರೇಡಿಂಗ್: ‌ಕಂಪನಿ ನಿರ್ದೇಶಕರಿಗೆ ₹6.54 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 0:25 IST
Last Updated 21 ಅಕ್ಟೋಬರ್ 2024, 0:25 IST
   

ಬೆಂಗಳೂರು: ಆನ್‌ಲೈನ್‌ ಟ್ರೇಡಿಂಗ್‌ ಹೆಸರಿನಲ್ಲಿ ನಗರದ ಖಾಸಗಿ ಕಂಪನಿಯ ನಿರ್ದೇಶಕರೊಬ್ಬರಿಗೆ ₹ 6.54 ಕೋಟಿ ಹಣ ವಂಚಿಸಲಾಗಿದೆ. ಈ ಸಂಬಂಧ ಸೆನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ ಈ ವರ್ಷ ನಗರದಲ್ಲಿ ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಅತಿ ಹೆಚ್ಚು ಮೊತ್ತ ಕಳೆದುಕೊಂಡ ಪ್ರಕರಣ ಇದಾಗಿದೆ. ಕಳೆದ ವರ್ಷ ನಿವೃತ್ತ ಅಧಿಕಾರಿಯೊಬ್ಬರಿಗೆ 'ಫೆಡ್ಎಕ್ಸ್' ಕೊರಿಯರ್‌ ಹೆಸರಿನಲ್ಲಿ ₹ 9.14 ಕೋಟಿ ವಂಚನೆ ಮಾಡಲಾಗಿತ್ತು.

ಲ್ಯಾಂಪ್‌ಗಳನ್ನು ತಯಾರಿಸುವ ಕಂಪನಿಯೊಂದರ ನಿರ್ದೇಶಕರು, ಡಿಮ್ಯಾಟ್ ಖಾತೆ ತೆರೆದು ಷೇರು ವ್ಯವಹಾರ ಮಾಡುತ್ತಿದ್ದರು. ಆಗಸ್ಟ್‌ 11 ರಂದು, 56 ವರ್ಷದ ಈ ವ್ಯಕ್ತಿಗೆ ಅಪರಿಚಿತ ನಂಬರ್‌ನಿಂದ ವಾಟ್ಸ್‌ಆ್ಯಪ್‌ ಸಂದೇಶ ಬಂದಿದ್ದು, ವಹಿವಾಟು ಮತ್ತು ಹೂಡಿಕೆಯ ಕುರಿತ ತರಗತಿಗಳಿಗಾಗಿ ಗುಂಪು ಸೇರುವಂತೆ ಹೇಳಿದ್ದಾರೆ.

ADVERTISEMENT

ಅನಿಕೇತ್ ನೆರ್ಕರ್ ಎಂಬುವರು ವ್ಯಕ್ತಿಯನ್ನು ‘ನುವಾಮಾ ಎಲೈಟ್ ಗ್ರೂಪ್’ ಎಂಬ ಹೆಸರಿನ ವಾಟ್ಸ್‌ಆ್ಯಪ್‌ ಗುಂಪಿಗೆ ಸೇರಿಸಿದ್ದರು. ಸುಮಾರು ಒಂದು ತಿಂಗಳು ಆನ್‌ಲೈನ್ ತರಗತಿಗೆ ಹಾಜರಾಗಿದ್ದರು. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಬಗ್ಗೆ ಸಲಹೆ ನೀಡಲಾಗುತ್ತಿತ್ತು.

‘ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೆಚ್ಚು ಲಾಭಾಂಶ ಗಳಿಸುತ್ತಿರುವ ಬಗ್ಗೆ ವಾಟ್ಸ್‌ಗ್ರೂಪ್‌ನಲ್ಲಿನ ಸದಸ್ಯರು ಸಂದೇಶಗಳನ್ನು ಹಾಕುತ್ತಿದ್ದರು. ಈ ಸದಸ್ಯರು ವಂಚಕರ ಕಡೆಯವರು ಎಂಬುದು ಗೊತ್ತಿರಲಿಲ್ಲ. ಇದನ್ನು ನಂಬಿದ ವ್ಯಕ್ತಿ, ವಂಚಕರು ಸೂಚಿಸಿದ್ದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಹಣ ವಿನಿಯೋಗಿಸುತ್ತಿದ್ದರು. ಹಂತ ಹಂತವಾಗಿ ಅಕ್ಟೋಬರ್ 14ರವರೆಗೆ 12 ಬ್ಯಾಂಕ್ ಖಾತೆಗಳಿಗೆ₹ 6.54 ಕೋಟಿ ವರ್ಗಾವಣೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಟ್ರೇಡಿಂಗ್‌ನಲ್ಲಿ ಬಂದ ಲಾಭದ ಹಣವನ್ನು ತೆಗೆದುಕೊಳ್ಳಲು ನಿರ್ದೇಶಕರು ಪ್ರಯತ್ನಿಸಿದಾಗ ಸಾಧ್ಯವಾಗಲಿಲ್ಲ. ಆಗ ವಂಚಕರನ್ನು ಸಂಪರ್ಕಿಸಿದಾಗ, ಮತ್ತೆ ₹ 2.5 ಕೋಟಿ ಹಣ ವರ್ಗಾವಣೆ ಮಾಡುವಂತೆ ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದರು. 12 ಬ್ಯಾಂಕ್ ಖಾತೆಗಳ ಹಣವನ್ನು ಜಪ್ತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ’ ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.