ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದಾಬಸ್‌ಪೇಟೆಯ ಸೋಂಪುರ ಕೈಗಾರಿಕಾ ಪ್ರದೇಶದ ಆಶಾ ಸ್ವೀಟ್ಸ್ ಕಂಪನಿ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಬಿದ್ದು ಕಾರ್ಮಿಕರಿಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಂಪನಿಯ ಉಸ್ತುವಾರಿ ಸಂತೋಷ್ ಹಾಗೂ ರಮೇಶ್ ಬಂಧಿತರು. ಆಶಾ ಸ್ವೀಟ್ಸ್‌ನ ಮಾಲೀಕ ಮಯೂರ್ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ. ಎಫ್‌ಐಆರ್‌ನಲ್ಲಿ ಮಯೂರ್ ಅವರನ್ನು ಎರಡನೇ ಆರೋಪಿಯಾಗಿ ಹೆಸರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿಯಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಗುರುವಾರ ಸಂಜೆ ಆಕಸ್ಮಿಕವಾಗಿ ಬಿದ್ದು ಮಡಕಶಿರದ ನವೀನ್(45) ಹಾಗೂ ಮಧುಗಿರಿ ತಾಲ್ಲೂಕಿನ ಗಂಜಲಗುಂಟೆ ಗ್ರಾಮದ ಲಿಂಗರಾಜು (26) ಮೃತಪಟ್ಟಿದ್ದರು.
ಆಶಾ ಸ್ವೀಟ್ಸ್ ಕಂಪನಿಗೆ ಸೇರಿದ 18ಕ್ಕೂ ಹೆಚ್ಚು ಮಳಿಗೆಗಳು ಬೆಂಗಳೂರಿನಲ್ಲಿ ಇವೆ. ಕಂಪನಿಯ ಸ್ವೀಟ್ಸ್ ತಯಾರಿಕಾ ಘಟಕವು ಸೋಂಪುರದಲ್ಲಿದೆ. ಕಂಪನಿಯ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಗುರುವಾರ ಸಂಜೆ ನವೀನ್ ಹಾಗೂ ಲಿಂಗರಾಜು ಕೆಲಸ ಮಾಡುತ್ತಿದ್ದರು. ನವೀನ್ ಆಕಸ್ಮಿಕವಾಗಿ ಬಿದ್ದಿದ್ದರು. ಅವರನ್ನು ರಕ್ಷಿಸಲು ಹೋದ ಲಿಂಗರಾಜು ಸಹ ಬಿದ್ದು ಮೃತಪಟ್ಟಿದ್ದರು. ನೆಲಮಂಗಲ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದರು. ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.