ADVERTISEMENT

ನಿರ್ಮಾಪಕಿಯಿಂದ ₹ 1 ಕೋಟಿ ದೋಚಲು ಅಪಹರಣ ನಾಟಕ

* ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರ ತನಿಖೆ * ಚಾಲಕ ಸೇರಿ ಐವರು ಬಂಧನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 23:59 IST
Last Updated 16 ಫೆಬ್ರುವರಿ 2024, 23:59 IST
ಹಣ ವಂಚನೆ
ಹಣ ವಂಚನೆ   

ಬೆಂಗಳೂರು: ಧಾರಾವಾಹಿ ನಿರ್ಮಾಪಕಿಯೊಬ್ಬರಿಂದ ₹1 ಕೋಟಿ ದೋಚಲು ಅಪಹರಣ ನಾಟಕವಾಡಿದ್ದ ಕಾರು ಚಾಲಕ ಸೇರಿ ಐವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೇಮಂತ್‌ಕುಮಾರ್ (34), ಶ್ರೀನಿವಾಸ್ (40), ತೇಜಸ್ (25), ಬಿ.ಸಿ.ಮೋಹನ್ (34) ಹಾಗೂ ಕುಲದೀಪ್ ಸಿಂಗ್ (22) ಬಂಧಿತರು. ಐವರು ಸೇರಿಕೊಂಡು ಸಂಚು ರೂಪಿಸಿ ಅಪಹರಣ ನಾಟಕವಾಡಿದ್ದರು. ನಿರ್ಮಾಪಕಿ ನೀಡಿದ್ದ ದೂರು ಆಧರಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಧಾರಾವಾಹಿ ನಿರ್ಮಾಣ ಸಂಸ್ಥೆಯೊಂದನ್ನು ನಡೆಸುತ್ತಿರುವ ನಿರ್ಮಾಪಕಿ ಬಳಿ ಹೇಮಂತ್ ಕುಮಾರ್ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಮನೆ ನಿರ್ಮಾಣ ಕೆಲಸ ಆರಂಭಿಸಿದ್ದ ನಿರ್ಮಾಪಕಿ, ಬ್ಯಾಂಕ್‌ನಿಂದ ₹ 1 ಕೋಟಿ ಸಾಲ ಪಡೆದಿದ್ದರು. ಇದು ಗೊತ್ತಾಗುತ್ತಿದ್ದಂತೆ ಹೇಮಂತ್‌ಕುಮಾರ್, ಇತರೆ ಆರೋಪಿಗಳ ಜೊತೆ ಸೇರಿ ಹಣ ದೋಚಲು ಸಂಚು ರೂಪಿಸಿದ್ದ’ ಎಂದರು.

ADVERTISEMENT

ಕರೆ ಮಾಡಿ ಬೆದರಿಕೆ: ‘ಫೆ. 12ರಂದು ನಿರ್ಮಾಪಕಿಯ ಸಹಾಯಕನನ್ನು ಕರೆದುಕೊಂಡು ಹೇಮಂತ್‌ಕುಮಾರ್ ಕಾರಿನಲ್ಲಿ ಹೊರಗೆ ಹೋಗಿದ್ದ. ಅದೇ ದಿನ ರಾತ್ರಿ 9 ಗಂಟೆಗೆ ನಿರ್ಮಾಪಕಿಗೆ ಕರೆ ಮಾಡಿದ್ದ ಸಹಾಯಕ, ‘ನಮ್ಮನ್ನು ಯಾರೋ ಅಪಹರಣ ಮಾಡಿದ್ದಾರೆ’ ಎಂದಿದ್ದ. ನಂತರ, ಮೊಬೈಲ್ ಸ್ವಿಚ್ ಆಫ್ ಆಗಿತ್ತು’ ಎಂದು ಪೊಲೀಸರು ಹೇಳಿದರು.

‘ನಿರ್ಮಾಪಕಿಗೆ ಮರುದಿನ ಮತ್ತೆ ಕರೆ ಮಾಡಿದ್ದ ಆರೋಪಿಗಳು, ‘ನಿಮ್ಮ ಇಬ್ಬರು ಹುಡುಗರು ನಮ್ಮ ಬಳಿ ಇದ್ದಾರೆ. ಇವರನ್ನು ಬಿಡುಗಡೆ ಮಾಡಲು ₹1 ಕೋಟಿ ನೀಡಬೇಕು. ಇಲ್ಲದಿದ್ದರೆ, ಅವರಿಬ್ಬರನ್ನು ಕೊಲೆ ಮಾಡುತ್ತೇವೆ’ ಎಂದು ಬೆದರಿಸಿದ್ದರು. ಗಾಬರಿಗೊಂಡ ನಿರ್ಮಾಪಕಿ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಾಗ ಚಾಲಕನೇ ಆರೋಪಿ ಎಂಬುದು ತಿಳಿಯಿತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.