ADVERTISEMENT

ಕ್ಲಿನಿಕ್ ನವೀಕರಣಕ್ಕೆ ಆ್ಯಪ್‌ ಸಾಲ: ₹94,110 ಕಳೆದುಕೊಂಡ ವೈದ್ಯ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2024, 14:18 IST
Last Updated 6 ಏಪ್ರಿಲ್ 2024, 14:18 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕ್ಲಿನಿಕ್ ನವೀಕರಣಕ್ಕಾಗಿ ಆ್ಯಪ್‌ ಮೂಲಕ ₹ 5 ಲಕ್ಷ ಸಾಲ ಪಡೆಯಲು ಮುಂದಾಗಿದ್ದ ವೈದ್ಯರೊಬ್ಬರು ₹ 94,110 ಕಳೆದುಕೊಂಡಿದ್ದು, ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘33 ವರ್ಷದ ವೈದ್ಯರೊಬ್ಬರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಕ್ಲಿನಿಕ್ ನವೀಕರಣ ಮಾಡಲು ಮುಂದಾಗಿದ್ದ ವೈದ್ಯರಿಗೆ ಸಾಲದ ಅಗತ್ಯವಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಬಂದಿದ್ದ ಜಾಹೀರಾತು ನೋಡಿದ್ದ ಅವರು, ಮೊಬೈಲ್ ಆ್ಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿಕೊಂಡಿದ್ದರು.’

‘ಖಾಸಗಿ ಬ್ಯಾಂಕ್ ಪ್ರತಿನಿಧಿ ಹೆಸರಿನಲ್ಲಿ ಕರೆ ಮಾಡಿದ್ದ ಅಪರಿಚಿತರು, ದೂರುದಾರರ ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದುಕೊಂಡಿದ್ದರು. ₹ 5 ಲಕ್ಷ ಸಾಲ ಮಂಜೂರಾಗಿರುವುದಾಗಿ ಹೇಳಿದ್ದ ಅಪರಿಚಿತರು, ಅದನ್ನು ಖಾತೆಗೆ ಜಮೆ ಮಾಡಲು ಕೆಲ ಶುಲ್ಕಗಳನ್ನು ಪಾವತಿಸುವಂತೆ ತಿಳಿಸಿದ್ದರು. ಅದನ್ನು ನಂಬಿದ್ದ ವೈದ್ಯ, ಹಂತ ಹಂತವಾಗಿ ₹ 94,110 ಪಾವತಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮರುದಿನ ಪುನಃ ಕರೆ ಮಾಡಿದ್ದ ಆರೋಪಿಗಳು, ಮತ್ತಷ್ಟು ಹಣ ಕೇಳಿದ್ದರು. ಅನುಮಾನಗೊಂಡ ವೈದ್ಯ, ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳು ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.