ADVERTISEMENT

ಬಿಡಿಎಗೆ ಹೊರಗುತ್ತಿಗೆಯಡಿ 345 ಸಿಬ್ಬಂದಿ ನೇಮಕ

28 ಸಹಾಯಕ ಎಂಜಿನಿಯರ್‌ಗಳಿಗೆ ಪ್ರಥಮ ಆದ್ಯತೆ; ಒಂದು ವರ್ಷದ ಗುತ್ತಿಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 0:00 IST
Last Updated 1 ನವೆಂಬರ್ 2024, 0:00 IST
ಬಿಡಿಎ ಲೊಗೊ
ಬಿಡಿಎ ಲೊಗೊ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 28 ಸಹಾಯಕ ಎಂಜಿನಿಯರ್‌ಗಳು ಸೇರಿದಂತೆ ಒಟ್ಟು 345 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಮುಂದಾಗಿದೆ.

ಸಹಾಯಕ ಎಂಜಿನಿಯರ್‌ಗಳಿಗೆ ತಿಂಗಳಿಗೆ ₹45 ಸಾವಿರ ವೇತನ ನಿಗದಿ ಮಾಡಲಾಗಿದ್ದು, 28 ಜನರನ್ನು ಏಜೆನ್ಸಿ ಮೂಲಕ ಹೊರ ಗುತ್ತಿಗೆಯಲ್ಲಿ ನೇಮಿಸಿಕೊಳ್ಳಲಾಗುತ್ತದೆ. ವಕೀಲರ ಹುದ್ದೆಗೆ ಏಳು, ಕಂದಾಯ ವಿಷಯಗಳ ಸಲಹೆಗಾರರ ಹುದ್ದೆಗೆ ಒಬ್ಬರು, ಹಣಕಾಸು ವಿಭಾಗದ ಹಿರಿಯ ಸಲಹೆಗಾರರ ಗ್ರೇಡ್ 1–2 ಹುದ್ದೆಗೆ ಇಬ್ಬರು, ಕಿರಿಯ ಸಲಹೆಗಾರರ ಗ್ರೇಡ್‌ 1–2 ಹುದ್ದೆಗೆ ಇಬ್ಬರು, ಸಲಹೆಗಾರರು, ಕಿರಿಯ ಸಲಹೆಗಾರರು ಹುದ್ದೆಗೆ ತಲಾ ಒಬ್ಬರು, ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ಒಂಬತ್ತು, ಮಾರುಕಟ್ಟೆ ಸಹಾಯಕ ಹುದ್ದೆಗೆ ಇಬ್ಬರು, ಸೆಕ್ಯುರಿಟಿ ಸೂಪರ್‌ವೈಸರ್‌ ಹುದ್ದೆಗೆ ಒಂಬತ್ತು, ಸೆಕ್ಯುರಿಟಿ ಗಾರ್ಡ್‌ ಹುದ್ದೆಗೆ 219, ಸೆಕ್ಯುರಿಟಿ ದಳದ ಚಾಲಕ ಹುದ್ದೆಗೆ ಏಳು, ‘ಡಿ’ ಗುಂಪಿನ 56 ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.

ಸೆಕ್ಯುರಿಟಿ ಹಾಗೂ ‘ಡಿ’ ಗುಂಪಿನ ಹುದ್ದೆಗಳಿಗೆ ಮಾತ್ರ ಇಎಸ್‌ಐ, ಪಿಎಫ್‌ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಟೆಂಡರ್‌ ಮಾಹಿತಿಯಲ್ಲಿ ತಿಳಿಸಲಾಗಿದೆ. 345 ಹುದ್ದೆಗಳಿಗೆ ಪ್ರತಿ ವರ್ಷ ₹9.91 ಕೋಟಿಯನ್ನು ವೇತನವಾಗಿ ಬಿಡಿಎ ಪಾವತಿಸಬೇಕಾಗುತ್ತದೆ. ಅಧಿಕಾರಿಗಳು, ಸಿಬ್ಬಂದಿಯನ್ನು ಒದಗಿಸುವ ಏಜೆನ್ಸಿ, ಪ್ರತಿ ಹುದ್ದೆಗೆ ತಿಂಗಳಿಗೆ ₹479 ಅನ್ನು ಸೇವಾ ಶುಲ್ಕವಾಗಿ ಪಡೆಯಲಿದೆ.

ADVERTISEMENT

‘ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗುವ ಎಂಜಿನಿಯರ್‌ಗಳಿಗೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಯಾವುದೇ ರೀತಿಯ ತಪ್ಪಾದರೆ ಅವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಗುತ್ತಿಗೆ ಅಥವಾ ಹೊರ ಗುತ್ತಿಗೆಯಲ್ಲಿ ನೇಮಕ ಮಾಡಿಕೊಳ್ಳಬಾರದು’ ಎಂದು ನಾಗರಿಕ ಸಂಘ–ಸಂಸ್ಥೆಗಳು ಆಗ್ರಹಿಸುತ್ತಲೇ ಇವೆ. ಈ ಮಧ್ಯೆಯೇ, 345 ಸಿಬ್ಬಂದಿಯನ್ನು ಬಿಡಿಎ ಹೊರಗುತ್ತಿಗೆಯಲ್ಲಿ ಒಂದು ವರ್ಷಕ್ಕಾಗಿ ನೇಮಿಸಿಕೊಳ್ಳಲಿದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆಯನ್ನೂ ಆರಂಭಿಸಲಾಗಿದೆ.

‘ಸೌಲಭ್ಯ ಹೊಣೆಗಾರಿಕೆ ಕಡಿಮೆ’
‘ಬಿಡಿಎ ಕಾಯ್ದೆ ಹಾಗೂ ನಿಯಮಗಳಂತೆ ಗುತ್ತಿಗೆ ಅಥವಾ ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅವಕಾಶವಿದೆ. ಕಾಯಂ ನೇಮಕಾತಿ ಮಾಡಿಕೊಳ್ಳಲು ಹಲವು ರೀತಿಯ ಪ್ರಕ್ರಿಯೆಗಳನ್ನು ಮಾಡಬೇಕಿದೆ. ಅದಲ್ಲದೆ ಪ್ರಾಧಿಕಾರ ಹಲವು ಸೌಲಭ್ಯಗಳನ್ನು ನೀಡಬೇಕಾಗುತ್ತದೆ ಹೊಣೆಗಾರಿಕೆಯೂ ಹೆಚ್ಚಾಗುತ್ತದೆ. ಹೀಗಾಗಿ ಅವುಗಳಿಂದ ಮುಕ್ತವಾಗಲು ಹೊರಗುತ್ತಿಗೆಗೇ ಹೆಚ್ಚು ಒತ್ತು ನೀಡಲಾಗುತ್ತಿದೆ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.