ADVERTISEMENT

ಒಂದು ವರ್ಷದಲ್ಲಿ ಸಿಡಿಪಿ ಕರಡು: ಜಯರಾಮ್‌

ಬಿಡಿಎ ಆಯುಕ್ತರಾಗಿ ಅಧಿಕಾರ ಸ್ವೀಕಾರ: ಮೂಲಸೌಕರ್ಯಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2023, 0:30 IST
Last Updated 4 ಅಕ್ಟೋಬರ್ 2023, 0:30 IST
ಬಿಡಿಎ ಆಯುಕ್ತರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಎನ್‌. ಜಯರಾಮ್‌ ಅವರನ್ನು ಬಿಡಿಎ ಅಧಿಕಾರಿಗಳು ಅಭಿನಂದಿಸಿದರು
ಬಿಡಿಎ ಆಯುಕ್ತರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದ ಎನ್‌. ಜಯರಾಮ್‌ ಅವರನ್ನು ಬಿಡಿಎ ಅಧಿಕಾರಿಗಳು ಅಭಿನಂದಿಸಿದರು   

ಬೆಂಗಳೂರು: ‘ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಅದನ್ನು ಸಿದ್ಧಪಡಿಸಲು ಪ್ರಥಮ ಆದ್ಯತೆ ನೀಡಲಾಗುತ್ತದೆ. ಒಂದು ವರ್ಷದಲ್ಲಿ ಕರಡು ಸಿದ್ಧಪಡಿಸುವ ಗುರಿ ಹೊಂದಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ಎನ್‌. ಜಯರಾಮ್‌ ತಿಳಿಸಿದರು.

‘ಕೆಲವೇ ದಿನಗಳಲ್ಲಿ ಸಿಡಿಪಿ ಸಿದ್ಧಪಡಿಸುವುದು ಸಾಧ್ಯವಿಲ್ಲ. ಅದಕ್ಕಾಗಿ ಪೂರ್ವ ತಯಾರಿಬೇಕಿದೆ. ಎಲ್ಲ ಸಂಸ್ಥೆಗಳು, ನಾಗರಿಕರನ್ನು ಸಂಪರ್ಕಿಸಬೇಕು. ನಕ್ಷೆಗಳಾಗಬೇಕು. ಇದಕ್ಕೆಲ್ಲ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಬೇಕಾಗುತ್ತದೆ. ಆದ್ದರಿಂದ ಶೀಘ್ರವೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

’ಬಿಡಿಎ ಬಡಾವಣೆಗಳಲ್ಲಿ ಮೂಲಸೌಕರ್ಯದ ಕೊರತೆಗಳಿರುವುದು ನಿಜ. ಇವುಗಳನ್ನು ಆದ್ಯತೆ ಮೇರೆಗೆ ನಿವಾರಿಸಲಾಗುತ್ತದೆ. ಅಭಿವೃದ್ಧಿ ಹೊಂದಿದ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ADVERTISEMENT

’ನಾಗರಿಕರ ಕುಂದುಕೊರತೆ ಆಲಿಸಲು ಮತ್ತು ಅವುಗಳನ್ನು ಪರಿಹರಿಸಲು ಆಗಾಗ್ಗೆ ಸಭೆಗಳನ್ನು ಮಾಡಲಾಗುತ್ತದೆ. ನಾಡಪ್ರಭು ಕೆಂಪೇಗೌಡ ಬಡಾವಣೆ ಹಾಗೂ ಶಿವರಾಮ ಕಾರಂತ ಬಡಾವಣೆ ನಿರ್ಮಾಣದಲ್ಲಿ ಸಾಕಷ್ಟು ವೇಗ ಅಗತ್ಯವಿದೆ. ನಿವೇಶನಗಳ ಹಂಚಿಕೆ ಜೊತೆಗೆ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ’ ಎಂದು ಹೇಳಿದರು.

ಸಭೆ:  ಆಯುಕ್ತರಾಗಿ ಮಂಗಳವಾರ ಅಧಿಕಾರ ಸ್ವೀಕರಿಸಿದದ ಜಯರಾಮ್‌ ಅವರು, ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿದರು. ಪ್ರಾಧಿಕಾರದ ಕಾರ್ಯವೈಖರಿ, ಪ್ರಸ್ತುತ ಯೋಜನೆಗಳು ಹಾಗೂ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.