ADVERTISEMENT

ಬೆಂಗಳೂರು: ಕಲಾ ಪ್ರದರ್ಶನಕ್ಕಿಲ್ಲ ಸುಸಜ್ಜಿತ ರಂಗಮಂದಿರ

ಸೂಕ್ತ ನಿರ್ವಹಣೆ, ಸೌಲಭ್ಯದ ಕೊರತೆಯಿಂದ ಸೊರಗಿದ ಕೇಂದ್ರಗಳು l ಕಲಾ ವೈಭವ ಅವಸಾನದತ್ತ ಸಾಗುವ ಕಳವಳ

ವರುಣ ಹೆಗಡೆ
Published 3 ಅಕ್ಟೋಬರ್ 2021, 21:15 IST
Last Updated 3 ಅಕ್ಟೋಬರ್ 2021, 21:15 IST
ಕಾರ್ಯಕ್ರಮಗಳಿಲ್ಲದೆಯೇ ಬಾಗಿಲು ಮುಚ್ಚಿರುವ ಸರ್. ಪುಟ್ಟಣ್ಣಚೆಟ್ಟಿ ಪುರಭವನ
ಕಾರ್ಯಕ್ರಮಗಳಿಲ್ಲದೆಯೇ ಬಾಗಿಲು ಮುಚ್ಚಿರುವ ಸರ್. ಪುಟ್ಟಣ್ಣಚೆಟ್ಟಿ ಪುರಭವನ   

ಬೆಂಗಳೂರು: ನಗರದಲ್ಲಿ ಇರುವ ಬೆ‌ರಳಣಿಕೆಯಷ್ಟು ರಂಗಮಂದಿರಗಳು ಕೋವಿಡ್ ಕಾಣಿಸಿಕೊಂಡ ಬಳಿಕ ಸೂಕ್ತ ನಿರ್ವಹಣೆ ಇಲ್ಲದೆಯೇ ಕಳೆಗುಂದಿವೆ. ಇದರಿಂದಾಗಿ ನಗರದ ಕಲಾ ವೈಭವ ಅವಸಾನದತ್ತ ಸಾಗುವ ಕಳವಳ ರಂಗಭೂಮಿ ವಲಯದಲ್ಲಿ ವ್ಯಕ್ತವಾಗಿದೆ.

ನಗರದ ಜನಪ್ರಿಯತೆ ಹಾಗೂ ಬ್ರ್ಯಾಂಡ್‌ ಮೌಲ್ಯ ಹೆಚ್ಚಳಕ್ಕೆ ಸಾಂಸ್ಕೃತಿಕ ಕ್ಷೇತ್ರದ ಚಟುವಟಿಕೆಗಳೂ ಸಹಕಾರಿ. ಆದರೆ, ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾದಾಗಿನಿಂದ ಕಲಾ ವಲಯವು ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದಾಗಿ ಹೊಸ ರಂಗಮಂದಿರಗಳ ನಿರ್ಮಾಣ ಯೋಜನೆಗಳು ನನೆಗುದಿಗೆ ಬಿದ್ದರೆ, ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದ ರಂಗಮಂದಿರಗಳು ಮೂಲಸೌಕರ್ಯಕ್ಕಾಗಿ ಎದುರು ನೋಡಲಾರಂಭಿಸಿವೆ.

ಈ ತಿಂಗಳಿಂದ ಶೇ 100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಅವಕಾಶ ನೀಡಿದರೂ ಸಣ್ಣ ಕಲಾ ತಂಡಗಳು ಬಾಡಿಗೆ ಪಾವತಿಸಿ, ಪ್ರದರ್ಶನ ನೀಡುವ ಸ್ಥಿತಿಯಲ್ಲಿ ಇಲ್ಲ.

ADVERTISEMENT

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರವೀಂದ್ರ ಕಲಾಕ್ಷೇತ್ರ ಒಳಗೊಂಡಂತೆ ನಗರದ ಏಳು ರಂಗ ಮಂದಿರಗಳನ್ನು ನಿರ್ವಹಣೆ ಮಾಡುತ್ತಿದೆ. ಇವುಗಳಲ್ಲಿ ಎರಡು ಬಯಲು ರಂಗಮಂದಿರಗಳೂ ಸೇರಿವೆ. ಅಗ್ನಿ ಅವಘಡಕ್ಕೆ ಒಳಗಾಗಿದ್ದ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ ಸ್ಥಗಿತವಾಗಿ ಮೂರು ವರ್ಷಗಳಾಗುತ್ತಾ ಬಂದರೂ ಬಾಗಿಲು ತೆರೆದಿಲ್ಲ.

ನಗರದ ಹೃದಯ ಭಾಗದಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕಗಳಿಗೆ ಆದ್ಯತೆ ನೀಡಲಾಗುತ್ತಿದೆಯಾದರೂ ರಂಗ ತಂಡಗಳು ಪ್ರದರ್ಶನ ನೀಡಲು ಎರಡು ಮೂರು ತಿಂಗಳು ಮುಂಚಿತವಾಗಿ ಕಾಯ್ದಿರಿಸಿ, ಕಾಯಬೇಕಾದ ಪರಿಸ್ಥಿತಿಯಿದೆ. ಅದು ಕೂಡ ಸರ್ಕಾರಿ ಕಾರ್ಯಕ್ರಮಗಳು ತುರ್ತಾಗಿ ನಿಗದಿಯಾದಲ್ಲಿ ಕಾಯ್ದಿರಿಸಿದ ದಿನಾಂಕವನ್ನು ಬಿಟ್ಟುಕೊಡಬೇಕಾಗುತ್ತದೆ. ಹೀಗಾಗಿ, ಪ್ರದರ್ಶನದ ದಿನದವರೆಗೂ ರಂಗಮಂದಿರ ಸಿಗುವ ಖಚಿತತೆ ಇಲ್ಲದಂತಾಗಿದೆ. 2018ರಲ್ಲಿ ರವೀಂದ್ರ ಕಲಾಕ್ಷೇತ್ರಕ್ಕೆ ₹ 2.24 ಕೋಟಿ ವೆಚ್ಚದಲ್ಲಿ ಸಂಸ್ಕೃತಿ ಇಲಾಖೆಯು ಅತ್ಯಾಧುನಿಕ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಅಳವಡಿಕೆ ಮಾಡಿತ್ತು.

ಕೋವಿಡ್ ಪೂರ್ವ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರತಿ ತಿಂಗಳು ಸರಾಸರಿ 30 ಕಾರ್ಯಕ್ರಮಗಳು ನಡೆಯುತ್ತಿದ್ದವು. 2019–20ನೇ ಸಾಲಿನಲ್ಲಿ 385 ಕಾರ್ಯಕ್ರಮಗಳು ನಡೆದಿವೆ. ಕೋವಿಡ್ ನಿರ್ಬಂಧಗಳನ್ನು ತೆಗೆದಿರುವುದರಿಂದ ಈಗ ಪುನಃ ಕಾಯ್ದಿರಿಸುವಿಕೆ ಪ್ರಾರಂಭವಾಗಿದೆ.

ಬಿಬಿಎಂಪಿಯು 2015ರಲ್ಲಿ ಸರ್ ಪುಟ್ಟಣ್ಣಚೆಟ್ಟಿ ಪುರಭವನವನ್ನು ನವೀಕರಣ ಮಾಡಿ, ಧ್ವನಿವರ್ಧಕ, ಹವಾನಿಯಂತ್ರಣ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಅಳವಡಿಕೆ ಮಾಡಿತ್ತು. ₹ 8 ಸಾವಿರ ಇದ್ದ ಬಾಡಿಗೆ ದರವನ್ನು ₹ 1.22 ಲಕ್ಷಕ್ಕೆ ಏರಿಕೆ ಮಾಡಿತ್ತು. ಕಲಾವಿದರು, ಸಂಘ–ಸಂಸ್ಥೆಗಳಿಂದ ಆಕ್ಷೇಪ ವ್ಯಕ್ತವಾದ ಬಳಿಕ ₹ 75 ಸಾವಿರಕ್ಕೆ ಇಳಿಕೆ ಮಾಡಿತ್ತು. ಆದರೆ, ಇಷ್ಟು ಮೊತ್ತದ ಬಾಡಿಗೆಯನ್ನು ಹೊಂದಿಸುವುದು ಸಣ್ಣ ಮತ್ತು ಮಧ್ಯಮ ಗಾತ್ರದ ಸಂಘ–ಸಂಸ್ಥೆ, ರಂಗ ತಂಡಗಳಿಗೆ ಸವಾಲಾಗಿದೆ. ಹೀಗಾಗಿ, ವರ್ಷದ ಬಹುತೇಕ ದಿನಗಳು ಪುರಭವನ ಬಾಗಿಲು ಮುಚ್ಚಿಯೇ ಇರುತ್ತದೆ.

ಕೈಗೆಟಕದ ರಂಗಮಂದಿರ: ಸಂಸ್ಕೃತಿ ಇಲಾಖೆ ಹಾಗೂ ಬಿಬಿಎಂಪಿ ನಿರ್ವಹಣೆ ಮಾಡುತ್ತಿರುವ ಬಹುತೇಕ ರಂಗ ಮಂದಿರಗಳು ಮೂಲಸೌಕರ್ಯಕ್ಕಾಗಿ ಕಾದು ಕುಳಿತಿವೆ. ಕಿತ್ತುಹೋಗಿರುವ ನೆಲಹಾಸು, ದೋಷಪೂರಿತ ಧ್ವನಿ–ಬೆಳಕಿನ ವ್ಯವಸ್ಥೆ, ನಿರ್ವಹಣೆ ಇಲ್ಲದ ಶೌಚಾಲಯ, ತಂತ್ರಜ್ಞರ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ. ಖಾಸಗಿ ರಂಗಮಂದಿರಗಳಲ್ಲಿ ದುಬಾರಿ ಬಾಡಿಗೆ ನೀಡಿ ಪ್ರದರ್ಶನ ನೀಡಲು ಎಲ್ಲ ತಂಡಗಳಿಗೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಮಧ್ಯಮ ಗಾತ್ರದ ರಂಗಮಂದಿರಗಳನ್ನು ಸರ್ಕಾರ ನಿರ್ಮಿಸಬೇಕೆಂಬ ಕೂಗು ರಂಗ ವಲಯದಲ್ಲಿದೆ.

ಕನ್ನಡ ಭವನದಲ್ಲಿರುವ ನಯನ ಸಭಾಂಗಣವು ಕಿರಿದಾಗಿದ್ದು, ನಾಟ್ಯ, ವಿಚಾರಸಂಕಿರಣ, ಸಂಗೀತ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಮಾತ್ರ ಸಹಕಾರಿಯಾಗಿದೆ. ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರ ಅಮೆಚೂರು ಡ್ರಮಾಟಿಕ್ ಅಸೋಸಿಯೆಷನ್ ಕೊಡುಗೆಯಾಗಿದೆ. ಇಲ್ಲಿ ವಾಹನಗಳ ಸಿಲುಗಡೆಗೆ ಸ್ಥಳವಿಲ್ಲದಿರುವುದು ಸಮಸ್ಯೆಯಾಗಿದೆ. ಕುವೆಂಪು ಕಲಾಕ್ಷೇತ್ರದಲ್ಲಿ ಗ್ರೀನ್ ರೂಮ್‌ಗಳು ವೇದಿಕೆಯ ನೆಲಮಹಡಿಯಲ್ಲಿವೆ. ಇದು ಕಲಾವಿದರಿಗೆ ಕಿರಿಕಿರಿ ಉಂಟುಮಾಡಲಿದೆ. ಸಮಾಜ ಕಲ್ಯಾಣ ಇಲಾಖೆಯ ಡಾ. ಅಂಬೇಡ್ಕರ್ ಭವನವು ಅತ್ಯಾಧುನಿಕ ಸೌಲಭ್ಯ ಹೊಂದಿದ್ದರೂ ನಿರ್ವಹಣೆ ಕೊರತೆ ಎದುರಿಸುತ್ತಿದೆ.

ಇದೇ ರೀತಿ, ಗಾಂಧಿನಗರದ ಗುಬ್ಬಿ ವೀರಣ್ಣ ರಂಗಮಂದಿರ, ರಾಜಾಜಿನಗರದ ರಾಜ್‌ಕುಮಾರ್ ರಂಗಮಂದಿರ ಸೇರಿದಂತೆ ವಿವಿಧ ರಂಗಮಂದಿರಗಳು ಸೂಕ್ತ ನಿರ್ವಹಣೆ ಇಲ್ಲದೆಯೇ ಕಳೆಗುಂದಿವೆ.

ರಂಗಮಂದಿರಗಳನ್ನು ನಿರ್ಮಿಸುವ ಜೊತೆಗೆ ಅದರ ನಿರ್ವಹಣೆಗೂ ಸಂಸ್ಕೃತಿ ಇಲಾಖೆ ಹಾಗೂ ಪಾಲಿಕೆ ಆದ್ಯತೆ ನೀಡಬೇಕು ಎನ್ನುವುದು ರಂಗಕರ್ಮಿಗಳ ಆಗ್ರಹವಾಗಿದೆ.

‘ಬಿಬಿಎಂಪಿಯು ವಿವಿಧ ಬಡಾವಣೆಗಳಲ್ಲಿ ರಂಗಮಂದಿರಗಳನ್ನು ನಿರ್ಮಿಸಿದೆ. ಆದರೆ, ಅವುಗಳು ಪಾಲಿಕೆ ಸದಸ್ಯರ ನಿಯಂತ್ರಣದಲ್ಲಿವೆ. ಹೀಗಾಗಿ, ಸದುಪಯೋಗ ಆಗುತ್ತಿಲ್ಲ. ರಂಗಮಂದಿರಗಳ ನಿರ್ವಹಣೆಗೆ ಹಣವನ್ನು ವೆಚ್ಚ ಮಾಡಲಾಗುತ್ತಿದೆಯಾದರೂ ಸಮಸ್ಯೆಗಳು ಮಾತ್ರ ನಿವಾರಣೆಯಾಗುತ್ತಿಲ್ಲ’ ಎಂದು ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಬೇಸರ ವ್ಯಕ್ತಪಡಿಸಿದರು.

ಇದೆಲ್ಲದರ ಮಧ್ಯೆ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಕಲಾ ಚಟುವಟಿಕೆಗಳು ಮತ್ತೆ ಗರಿಗೆದರಬಹುದೆಂಬ ಆಶಾವಾದದಲ್ಲಿಯೇ ಸಾವಿರಾರು ಕಲಾವಿದರು ದಿನಗಳನ್ನು ಕಳೆಯುತ್ತಿದ್ದಾರೆ.

ನನೆಗುದಿಗೆ ಬಿದ್ದ ‘ರಂಗ ಮಂದಿರ ಪ್ರಾಧಿಕಾರ’

ರಂಗಮಂದಿರಗಳ ಕೊರತೆ ಹಾಗೂ ರಂಗಭೂಮಿಯ ಸಮಸ್ಯೆಗಳನ್ನು ನೀಗಿಸಲು ಕರ್ನಾಟಕ ನಾಟಕ ಅಕಾಡೆಮಿಯು ‘ರಂಗಮಂದಿರಪ್ರಾಧಿಕಾರ’ ರಚಿಸುವ ಪ್ರಸ್ತಾವನೆಯನ್ನು ಈ ಹಿಂದೆ ಸಿದ್ಧಪಡಿಸಿತ್ತು. ನಾಡಿನ ರಂಗಕರ್ಮಿಗಳು ಹಾಗೂ ಸಾಂಸ್ಕೃತಿಕ ವಲಯದ ತಜ್ಞರ ಸಲಹೆಗಳನ್ನು ಪಡೆದಿದ್ದ ಅಕಾಡೆಮಿ, ಪ್ರಾಧಿಕಾರ ರಚನೆಗೆ ಸಂಬಂಧಿಸಿದ ರೂಪುರೇಷೆಗಳನ್ನೂ ಸಿದ್ಧಪಡಿಸಿತ್ತು.ರಂಗ ಮಂದಿರದ ನೀಲ ನಕ್ಷೆಯನ್ನೂ ರಚಿಸಿ, 300 ಆಸನಗಳ ಪ್ರತಿ ರಂಗ ಮಂದಿರಕ್ಕೆ ₹ 1.6 ಕೋಟಿ ವೆಚ್ಚವಾಗಲಿದೆ ಎಂದೂ ಅಂದಾಜಿಸಲಾಗಿತ್ತು. ಆದರೆ, ಈ ಪ್ರಸ್ತಾವನೆ ನನೆಗುದಿಗೆ ಬಿದ್ದಿದೆ.

ಪುನರಾರಂಭವಾಗದ ಸಾಂಸ್ಕೃತಿಕ ಸಮುಚ್ಚಯ

ಅಗ್ನಿ ಅವಘಡದಿಂದ ಹಾನಿಗೊಳಗಾಗಿದ್ದ ಮಲ್ಲತ್ತಹಳ್ಳಿಯ ಕಲಾಗ್ರಾಮದ ಸಾಂಸ್ಕೃತಿಕ ಸಮುಚ್ಚಯ ಮೂರು ವರ್ಷಗಳಾಗುತ್ತಾ ಬಂದರೂ ಪುನರಾರಂಭವಾಗಿಲ್ಲ. ಇದರಿಂದಾಗಿ ಕಲಾಗ್ರಾಮದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ. ನಗರದಲ್ಲಿನ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿಗೆ ಹಾಗೂ ರಂಗ ತಂಡಗಳಿಗೆ ಸಾಂಸ್ಕೃತಿಕ ಸಮುಚ್ಚಯ ಸುಲಭವಾಗಿ ದೊರೆಯುತ್ತಿತ್ತು. ತಿಂಗಳ ಬಹುತೇಕ ದಿನ ಒಂದಲ್ಲ ಒಂದು ಕಲಾ ಚಟುವಟಿಕೆ ನಡೆಯುತ್ತಿದ್ದವು.

2018ರ ಡಿಸೆಂಬರ್ ತಿಂಗಳಲ್ಲಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಧ್ವನಿ–ಬೆಳಕಿನ ವ್ಯವಸ್ಥೆ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಎಲೆಕ್ಟ್ರಿಕ್ ಪ್ಯಾನಲ್, ಲೈಟಿಂಗ್ ಮಿಕ್ಸರ್, ಸೌಂಡ್ ಮಿಕ್ಸರ್, ಡಿಮ್ಮರ್ ಪ್ಯಾಕ್, ಮೈಕ್ ಸೇರಿದಂತೆ ವಿವಿಧ ಉಪಕರಣಗಳಿಗೆ ಹಾನಿಯಾಗಿತ್ತು.

ನಾಲ್ಕು ರಂಗಮಂದಿರ: ಸ್ಥಳ ಮಾತ್ರ ಗುರುತು

ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿಯೇ ನಗರದ ನಾಲ್ಕು ಕಡೆ ರಂಗಮಂದಿರ ನಿರ್ಮಿಸುವುದಾಗಿ 2020ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದರು. ಇದಕ್ಕಾಗಿ ಬಜೆಟ್‌ನಲ್ಲಿ ₹ 60 ಕೋಟಿ ಮೀಸಲಿಡಲಾಗಿತ್ತು. ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಎರಡೂವರೆ ಎಕರೆ, ದೇವನಹಳ್ಳಿಯ ಕಸಬಾ ಹೋಬಳಿ, ಕನ್ನಹಳ್ಳಿ ಬಳಿ ಐದು ಎಕರೆ, ಕೆಐಎಡಿಬಿ, ಕೆಎಚ್‌ಬಿಯಲ್ಲಿ ಸಾರ್ವಜನಿಕರಿಗೆ ಮೀಸಲಿಟ್ಟ ಸಿಎ ನಿವೇಶನವನ್ನು ರಂಗಮಂದಿರ ನಿರ್ಮಾಣಕ್ಕೆ ಗುರುತಿಸಿ ವರ್ಷವೇ ಕಳೆದಿದೆ. ಆದರೆ, ಈವರೆಗೂ ಇಲಾಖೆಗೆ ಜಾಗವೇ ಹಸ್ತಾಂತರವಾಗಿಲ್ಲ.

***

ನಗರದ ನಾಲ್ಕು ಕಡೆ ರಂಗಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗಗಳನ್ನು ಗುರುತಿಸಲಾಗಿದೆ. ಜಾಗ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಂಡಲ್ಲಿ ಆದಷ್ಟು ಬೇಗ ನಿರ್ಮಿಸಲಾಗುತ್ತದೆ

-ಎಸ್. ರಂಗಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ

***

ಕಲಾಕ್ಷೇತ್ರವನ್ನು ನಾಟಕ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನಕ್ಕೆ ಮೀಸಲಿಡಬೇಕು. ಪುರಭವನದಲ್ಲಿ ಸರ್ಕಾರಿ ಕಾರ್ಯಕ್ರಮಗಳು ನಡೆಯಲಿ. ತುರ್ತಾಗಿ ಇನ್ನಷ್ಟು ರಂಗಮಂದಿರ ಅಗತ್ಯ

-ಶ್ರೀನಿವಾಸ ಜಿ. ಕಪ್ಪಣ್ಣ, ರಂಗಕರ್ಮಿ

***

300ರಿಂದ 350 ಆಸನಗಳ ರಂಗಮಂದಿರಗಳು ನಗರಕ್ಕೆ ಅಗತ್ಯವಿದೆ. ಸರ್ಕಾರವು ಕಲಾ ಚಟುವಟಿಕೆಗೆ ಆದ್ಯತೆ ನೀಡಿ, ಎಲ್ಲ ಬಡಾವಣೆಗಳಲ್ಲೂ ಒಂದೊಂದು ರಂಗಮಂದಿರ ನಿರ್ಮಿಸಬೇಕು

-ಜೆ. ಲೋಕೇಶ್, ಕರ್ನಾಟಕ ನಾಟಕ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.