ಬೆಂಗಳೂರು: ಅಂಚೆ ಇಲಾಖೆಯ ಸೇವೆಯನ್ನೇ ಬಳಸಿಕೊಂಡು ವಿದೇಶಗಳಿಂದ ನಗರಕ್ಕೆ ₹200 ಕೋಟಿಗೂ ಹೆಚ್ಚು ಮೌಲ್ಯದ ಮಾದಕವಸ್ತುಗಳನ್ನು ಪೂರೈಕೆ ಮಾಡಿರುವುದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ.
ವಿದೇಶಿ ಪೆಡ್ಲರ್‌ಗಳ ಜತೆ ಸ್ಥಳೀಯ ಪೆಡ್ಲರ್‌ಗಳು ಸಂಪರ್ಕ ಸಾಧಿಸಿ ಅಂಚೆ ಇಲಾಖೆ ಮೂಲಕವೇ ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಪೂರೈಕೆ ಮಾಡುತ್ತಿದ್ದರು. ಈ ಜಾಲದ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕೆಲ ಪೆಡ್ಲರ್‌ಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದು, ‘ಅಂಚೆ ಡ್ರಗ್ಸ್ ಪೂರೈಕೆ ಜಾಲ’ದ ಕುರಿತು ಹಲವು ಮಾಹಿತಿಗಳು ಲಭಿಸಿವೆ ಎಂದು ಮೂಲಗಳು ತಿಳಿಸಿವೆ.
ಪೊಲೀಸರ ಪ್ರಕಾರ, 2–3 ವರ್ಷದಲ್ಲಿ ಅಂದಾಜು ₹100 ರಿಂದ ₹200 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಿದೇಶದಿಂದ ನಗರಕ್ಕೆ ಪೂರೈಕೆ ಆಗಿದೆ. ಕೆಲವರು ಆನ್‌ಲೈನ್ ಮೂಲಕ ನೇರವಾಗಿ ಮಾದಕವಸ್ತು ತರಿಸಿಕೊಂಡಿದ್ದಾರೆ. ಇನ್ನು ಕೆಲವರು ವಿದೇಶಿ ಪೆಡ್ಲರ್‌ಗಳನ್ನು ಸಂಪರ್ಕಿಸಿ ಡ್ರಗ್ಸ್ ತರಿಸಿಕೊಂಡು ಪರಿಚಿತರಿಗೇ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.
‘ಅಮೆರಿಕ, ಬ್ರಿಟನ್, ಥಾಯ್ಲೆಂಡ್ ದೇಶಗಳಿಂದ ಹೆಚ್ಚಿನ ಪ್ರಮಾಣದ ಮಾದಕ ವಸ್ತುಗಳನ್ನು ನಗರಕ್ಕೆ ತರಿಸಿಕೊಳ್ಳಲಾಗುತ್ತಿತ್ತು. ಸ್ಥಳೀಯ ಪೆಡ್ಲರ್‌ಗಳು ಪರಸ್ಪರ ಸಂಪರ್ಕದಲ್ಲಿದ್ದುಕೊಂಡು ಮಾರಾಟ ಮಾಡುತ್ತಿದ್ದರು. ಬಹುತೇಕ ಸಂದರ್ಭಗಳಲ್ಲಿ ಪರಿಚಿತ ವ್ಯಕ್ತಿಗಳಿಗೇ ಮಾರಾಟ ಮಾಡಲಾಗುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಥಾಯ್ಲೆಂಡ್ ಸೇರಿ ಹಲವು ದೇಶಗಳಲ್ಲಿ ಕಾನೂನು ಬದ್ಧವಾಗಿಯೇ ಗಾಂಜಾ ಮಾರಾಟಕ್ಕೆ ಅವಕಾಶವಿದೆ. ಇದನ್ನು ತಿಳಿದ ಪೆಡ್ಲರ್‌ಗಳು ಹಾಗೂ ವ್ಯಸನಿಗಳು, ಡಾರ್ಕ್ ವೆಬ್ ಮೂಲಕ ವಿದೇಶಿ ಪೆಡ್ಲರ್‌ಗಳನ್ನು ಸಂಪರ್ಕಿಸಿ ವಿದೇಶಿ ಅಂಚೆಗಳಲ್ಲಿ ಡ್ರಗ್ಸ್ ತರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ತನಿಖಾ ತಂಡಕ್ಕೆ ಲಭಿಸಿದೆ.
ವಿಳಾಸ ಬದಲಿಸಿದವರ ಪತ್ತೆಗೆ ಶೋಧ:
ಡ್ರಗ್ಸ್ ಖರೀದಿಸಿದ್ದವರ ಪತ್ತೆಗೆ ಹಲವು ಆಯಾಮಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಪಾರ್ಸೆಲ್‌ಗಳ ಮೇಲಿರುವ ವಿಳಾಸಗಳನ್ನು ಪತ್ತೆ ಮಾಡಿದ್ದು, ಬಹುತೇಕರು ವಿಳಾಸ ಬದಲಿಸಿದ್ದಾರೆ. ಪಾರ್ಸೆಲ್‌ಗಳ ಮೇಲಿರುವ ವಿಳಾಸಗಳಲ್ಲಿಯೇ ಕೆಲವರು ವಾಸಿಸುತ್ತಿದ್ದಾರೆ. ಆದರೆ, ಪಾರ್ಸೆಲ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ. ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ.
‘ವಿದೇಶಗಳಿಂದ ಡ್ರಗ್ಸ್ ತರಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಮಂದಿಯನ್ನು ಬಂಧಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದ ಜಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ವಿದೇಶಗಳಿಂದ ಅಂಚೆ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದವರ ಮೇಲೆ ನಿಗಾ ಇಡಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಚಾಮರಾಜಪೇಟೆಯಲ್ಲಿನ ವಿದೇಶಿ ಅಂಚೆ ಕಚೇರಿಯಲ್ಲಿ 2020ರಿಂದ ವಿದೇಶಗಳಿಂದ ಬಂದಿದ್ದ 3,500 ಪಾರ್ಸೆಲ್‌ಗಳನ್ನು ಯಾರೂ ಸ್ವೀಕರಿಸಿರಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕೆಲವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಗರ ಬಿಟ್ಟು ತೆರಳಿದರು. ನಾನಾ ಕಾರಣಕ್ಕೆ ಕೆಲವರು ಉದ್ಯೋಗ ಕಳೆದುಕೊಂಡರು. ಆಗಿನಿಂದ ಯಾರೂ ಸ್ವೀಕರಿಸದ ಪಾರ್ಸೆಲ್‌ಗಳ ಪರಿಶೀಲನೆ ನಡೆಸಿದಾಗ ಮಾದಕ ವಸ್ತುಗಳು ಇರುವುದು ಕಂಡು ಬಂತು. ₹21.17 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ.
‘ಈ ಜಾಲದ ಮೂಲ ಬೇರು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ವಿಳಾಸ ಬದಲಿಸಿರುವ ಕೆಲವರ ಬಗ್ಗೆಯೂ ಮಾಹಿತಿ ದೊರಕಿದ್ದು, ಶೀಘ್ರದಲ್ಲಿಯೇ ಅವರನ್ನು ವಶಕ್ಕೆ ಪಡೆಯಲಾಗುವುದು’ ಎಂದು ಪೊಲೀಸರು ಹೇಳಿದರು.
ಡ್ರಗ್ಸ್ ಪತ್ತೆಗೆ ‘ರಾಣಾ’ ನೆರವು
ಚಾಮರಾಜಪೇಟೆಯಲ್ಲಿನ ವಿದೇಶಿ ಅಂಚೆ ಕಚೇರಿಯಲ್ಲಿ 2020ರಿಂದ ವಿದೇಶಗಳಿಂದ ಬಂದಿದ್ದು ವಿಲೇವಾರಿಯಾಗದೇ ಉಳಿದಿದ್ದ ಪಾರ್ಸೆಲ್‌ಗಳಲ್ಲಿ ಮಾದಕವಸ್ತುಗಳು ಇರುವ ಅನುಮಾನ ವ್ಯಕ್ತವಾಗಿತ್ತು. ಮಾದಕ ವಸ್ತುಗಳನ್ನು ಪತ್ತೆ ಹಚ್ಚುವ ತರಬೇತಿ ಪಡೆದ ಶ್ವಾನ ‘ರಾಣಾ’ನನ್ನು ಈ ಪಾರ್ಸೆಲ್‌ಗಳ ತಪಾಸಣೆಗೆ ಬಿಡಲಾಗಿತ್ತು. ಡ್ರಗ್ಸ್ ತುಂಬಿದ್ದ 606 ಪಾರ್ಸೆಲ್‌ಗಳನ್ನು ಅದು ಪತ್ತೆಹಚ್ಚಿತ್ತು. ಪಾರ್ಸೆಲ್‌ಗಳಲ್ಲಿ ಹೈಡ್ರೋ ಗಾಂಜಾ ಎಲ್‌ಎಸ್‌ಡಿ ಸ್ಟ್ರಿಪ್ಸ್ ಎಂಡಿಎಂಎ ಕ್ರಿಸ್ಟಲ್ ಎಕ್ಸ್‌ಟೆಸಿ ಮಾತ್ರೆ ಹೆರಾಯಿನ್ ಕೋಕೆನ್ ಚರಸ್ ಗಾಂಜಾ ಎಣ್ಣೆ ಮ್ಯಾಥಾಕ್ಲಿನಾ ಎಂಎಲ್ ನಿಕೋಟಿನ್ ಇರುವುದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.