ಕೆ.ಆರ್. ಪುರ: ಬೆಂಗಳೂರು ಪೂರ್ವ ತಾಲ್ಲೂಕು ತಹಶೀಲ್ದಾರ್ ಕಚೇರಿಗೆ ಮೀಸಲಿಟ್ಟಿರುವ ಜಾಗ ಕಬಳಿಸಲು ಯತ್ನಿಸಿರುವ ಆರೋಪದಡಿ ಐವರ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್ ಮಹೇಶ್ ಅವರು ಕೃತ್ಯದ ಬಗ್ಗೆ ಠಾಣೆಗೆ ದೂರು ನೀಡಿದ್ದಾರೆ. ಕೆ.ಆರ್. ಪುರ ವಿಭಾಗದ ಹಿರಿಯ ಉಪ ನೋಂದಣಾಧಿಕಾರಿ ಶಿವಕುಮಾರ್, ಮಂಜುನಾಥ್, ನಾಗೇಂದ್ರ ಪ್ರಸಾದ್, ಜಾವೇದ್ ಖಾನ್ ಹಾಗೂ ಕೃಷ್ಣ ಎಂಬುವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
‘ಬಿದರಹಳ್ಳಿ ಹೋಬಳಿಯ ಖಾಜಿಸೊನ್ನೇನಹಳ್ಳಿ ಗ್ರಾಮದ ಸರ್ವೇ ನಂಬರ್ 100ರಲ್ಲಿರುವ 4 ಎಕರೆ 25 ಗುಂಟೆ ಭೂಮಿಯನ್ನು ಪೂರ್ವ ತಾಲ್ಲೂಕು ತಹಶೀಲ್ದಾರ್ ಕಚೇರಿ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು. ಈ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಲು ಯತ್ನ ನಡೆದಿತ್ತು’ ಎಂದು ತಹಶೀಲ್ದಾರ್ ಮಹೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ಆರೋಪಿಗಳಾದ ಮಂಜುನಾಥ್, ನಾಗೇಂದ್ರಪ್ರಸಾದ್, ಜಾವೆದ್ ಖಾನ್ ಹಾಗೂ ಕೃಷ್ಣ ಅವರು, ಭೂಮಿ ಕ್ರಯ ಸಂಬಂಧ 2022ರ ಜೂನ್ 30ರಂದು ಕೆ.ಆರ್. ಪುರ ಉಪ ನೋಂದಣಿ ಕಚೇರಿಯಲ್ಲಿ ಒಪ್ಪಂದ ಪತ್ರ ನೋಂದಣಿ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.’
‘ನಮ್ಮ ತಾಯಿ ಗೌರಮ್ಮ ಅವರಿಗೆ 1978ರಲ್ಲಿ ಭೂಮಿ ಮಂಜೂರಾಗಿದೆ’ ಎಂಬುದಾಗಿ ಆರೋಪಿಗಳಾದ ಮಂಜುನಾಥ್ ಮತ್ತು ನಾಗೇಂದ್ರಪ್ರಸಾದ್ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಕಚೇರಿಗೆ ಸಲ್ಲಿಸಿದ್ದರು. ಇದನ್ನು ಪರಿಶೀಲನೆ ನಡೆಸದೇ ಹಿರಿಯ ಉಪ ನೋಂದಣಿ ಅಧಿಕಾರಿ ಶಿವಕುಮಾರ್, ನೋಂದಣಿ ಒಪ್ಪಂದಕ್ಕೆ ಸಹಕರಿಸಿದ್ದರು. ₹ 5.50 ಕೋಟಿಗೆ ಜಾಗ ಮಾರಾಟ ಮಾಡಲು ಯತ್ನಿಸಿರುವುದು ಗೊತ್ತಾಗಿದೆ’ ಎಂದು ದೂರಿನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.