ADVERTISEMENT

ಬೆಂಗಳೂರು: ಪಂಚೆ ಧರಿಸಿದ್ದ ರೈತನಿಗೆ ಪ್ರವೇಶ ನಿರಾಕರಣೆ; GT ಮಾಲ್‌ ಕ್ಷಮೆಯಾಚನೆ

ಕನ್ನಡ ಸಂಘಟನೆಗಳ ಪ್ರತಿಭಟನೆ: ಕ್ಷಮೆ ಕೋರಿದ ಜಿ.ಟಿ ಮಾಲ್‌ ಆಡಳಿತ ಮಂಡಳಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2024, 16:06 IST
Last Updated 17 ಜುಲೈ 2024, 16:06 IST
ಮಾಲ್‌ ಎದುರು ಫಕೀರಪ್ಪ ಅವರನ್ನು ಸನ್ಮಾನಿಸಲಾಯಿತು
ಮಾಲ್‌ ಎದುರು ಫಕೀರಪ್ಪ ಅವರನ್ನು ಸನ್ಮಾನಿಸಲಾಯಿತು   

ಬೆಂಗಳೂರು: ಪಂಚೆ ಧರಿಸಿ ಬಂದಿದ್ದ ರೈತರೊಬ್ಬರಿಗೆ ಪ್ರವೇಶ ನಿರಾಕರಿಸಿದ ಮಾಗಡಿ ರಸ್ತೆಯ ಜಿ.ಟಿ ವರ್ಲ್ಡ್‌ ಮಾಲ್‌ ಆಡಳಿತ ಮಂಡಳಿ ವಿರುದ್ಧ ಕನ್ನಡ ಸಂಘಟನೆಗಳು ಹಾಗೂ ರೈತರು ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಮಾಲ್‌ ಎದುರು ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆಯೇ ಮಾಲ್‌ ಆಡಳಿತ ಮಂಡಳಿಯವರು ಕ್ಷಮೆ ಕೋರಿ, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಳಿಕ, ಪ್ರತಿಭಟನೆ ಕೈಬಿಡಲಾಯಿತು.

ಹಾವೇರಿ ಜಿಲ್ಲೆಯ ನಾಗರಾಜ್‌ ಅವರು ತಮ್ಮ ತಂದೆ ಫಕೀರಪ್ಪ ಅವರಿಗೆ ಸಿನಿಮಾ ತೋರಿಸಲು ಜಿ.ಟಿ ವರ್ಲ್ಡ್‌ ಮಾಲ್‌ಗೆ ಮಂಗಳವಾರ ಸಂಜೆ ಕರೆದುಕೊಂಡು ಬಂದಿದ್ದರು. ಫಕೀರಪ್ಪ ಅವರು ಪಂಚೆ ಧರಿಸಿ ತಲೆಗೆ ಟವಲ್‌ನಿಂದ ಪೇಟ ಸುತ್ತಿಕೊಂಡಿದ್ದರು. ಮಾಲ್‌ನ ಭದ್ರತಾ ಸಿಬ್ಬಂದಿ, ಪ್ರವೇಶ ದ್ವಾರದಲ್ಲೇ ತಡೆದು ಪ್ರವೇಶ ನಿರಾಕರಿಸಿದರು. ಅಲ್ಲದೇ ಅರ್ಧ ಗಂಟೆಗೂ ಹೆಚ್ಚು ಪ್ರವೇಶ ದ್ವಾರದಲ್ಲೇ ಕಾಯಿಸಿದ್ದರು.

ADVERTISEMENT

ಅದನ್ನು ನಾಗರಾಜ್‌ ಪ್ರಶ್ನಿಸಿದಾಗ ‘ನಿಮ್ಮ ತಂದೆ ಪಂಚೆ ಹಾಕಿರುವುದರಿಂದ ಪ್ರವೇಶ ನೀಡುವುದಿಲ್ಲ’ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದರು ಎನ್ನಲಾಗಿದೆ. ಮಾಲ್‌ ಎದುರೇ ನಿಂತು ನಾಗರಾಜ್ ಅವರು ವಿಡಿಯೊ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹರಿದಾಡುತ್ತಿದ್ದಂತೆಯೇ ಆಕ್ರೋಶ ಹೆಚ್ಚಾಗಿತ್ತು.

ಬುಧವಾರ ಬೆಳಿಗ್ಗೆ ಮಾಲ್‌ ಬಾಗಿಲು ತೆರೆಯುತ್ತಿದ್ದಂತೆಯೇ ಸಿಬ್ಬಂದಿಗೆ ಪ್ರತಿಭಟನೆ ಬಿಸಿ ತಟ್ಟಿತು. ರೂಪೇಶ್‌ ರಾಜಣ್ಣ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರು ಪಂಚೆ ಧರಿಸಿ ಮಾಲ್‌ ಬಳಿಗೆ ಬಂದಿದ್ದರು. ‘ನಾವು ಪಂಚೆ ಧರಿಸಿಯೇ ಬಂದಿದ್ದೇವೆ. ನಮ್ಮನ್ನೂ ತಡೆಯಿರಿ ನೋಡೋಣ’ ಎಂದು ಸವಾಲು ಹಾಕಿದರು. ಮಾಲ್‌ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿದರು.

‘ತುಂಡುಡುಗೆ ಹಾಕಿಕೊಂಡು ಬಂದವರಿಗೆ ಪ್ರವೇಶ ನೀಡಲಾಗುತ್ತದೆ. ನಮ್ಮ ಸಂಸ್ಕೃತಿಯ ಭಾಗವಾದ ಪಂಚೆ ಹಾಕಿಕೊಂಡು ಬಂದ ರೈತರಿಗೆ ಪ್ರವೇಶ ನಿರಾಕರಿಸಲಾಗಿದೆ. ಇದು ಯಾವ ನ್ಯಾಯ? ತಪ್ಪಿತಸ್ಥ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬೇಕು. ಮಾಲ್‌ ಬಂದ್ ಮಾಡಬೇಕು’ ಎಂದು ಹೋರಾಟಗಾರರು ಪಟ್ಟು ಹಿಡಿದರು.

ಫಕೀರಪ್ಪಅವರಿಗೆ ಸನ್ಮಾನ:

ಬುಧವಾರ 11 ಗಂಟೆ ವೇಳೆಗೆ ಫಕೀರಪ್ಪ ಅವರನ್ನು ಸ್ಥಳಕ್ಕೆ ಕರೆಸಿದ ಪ್ರತಿಭಟನಕಾರರು, ಪಂಚೆ ಧರಿಸಿಯೇ ಮಾಲ್‌ಗೆ ಪ್ರವೇಶ ಮಾಡಿಸಿದರು. ಅಲ್ಲದೇ ಮಾಲ್‌ ಆಡಳಿತ ಮಂಡಳಿಯವರು ಫಕೀರಪ್ಪ ಅವರನ್ನು ಸನ್ಮಾನಿಸಿ, ಕ್ಷಮೆಯಾಚಿಸಿದರು.

‘ಮನಸ್ಸಿಗೆ ನೋವಾಗಿತ್ತು’: ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಫಕೀರಪ್ಪ, ‘ಮಂಗಳವಾರ ನಡೆದ ಘಟನೆಯಿಂದ ಮನಸ್ಸಿಗೆ ತುಂಬ ನೋವಾಗಿತ್ತು. ಪುತ್ರ ಬೆಂಗಳೂರಿನಲ್ಲೇ ನೆಲೆಸಿದ್ದ. ಅವನ ಜತೆಗೆ ಸಿನಿಮಾ ನೋಡಲು ಬಂದಿದ್ದೆ. ಮುಂದಿನ ದಿನಗಳಲ್ಲಿ ಯಾವುದೇ ರೈತನಿಗೂ ಈ ರೀತಿ ಆಗಬಾರದು’ ಎಂದರು.

‘ಮಾಲ್‌ಗೆ ಎಲ್ಲರಿಗೂ ಮುಕ್ತ ಪ್ರವೇಶವಿದೆ. ಇದುವರೆಗೂ ಯಾರನ್ನೂ ತಡೆದಿಲ್ಲ. ನಮ್ಮ ಸಿಬ್ಬಂದಿಯಿಂದ ಪ್ರಮಾದ ಆಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಮಾಲ್‌ ಆಡಳಿತ ಮಂಡಳಿಯ ಪರವಾಗಿ ಸುರೇಶ್‌ ಹೇಳಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಇದೇ ರೀತಿಯ ಘಟನೆ ಮೆಟ್ರೊದಲ್ಲೂ ಫೆಬ್ರುವರಿ 26ರಂದು ನಡೆದಿತ್ತು. ‘ಬಟ್ಟೆಗಳು ಗಲೀಜಾಗಿವೆ’ ಎಂಬ ಕಾರಣಕ್ಕೆ ಪ್ರಯಾಣಿಕರೊಬ್ಬರನ್ನು ಮೆಟ್ರೊ ನಿಲ್ದಾಣದೊಳಗೆ ಬಿಡದೇ ಭದ್ರತಾ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದರು. ವಿಡಿಯೊ ಆಧರಿಸಿ ಸೆಕ್ಯುರಿಟಿ ಗಾರ್ಡ್‌ ಯಾದವ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿತ್ತು. 

ರಾಜಾಜಿನಗರ ಮೆಟ್ರೊ ನಿಲ್ದಾಣದಲ್ಲಿ ನಡೆದಿದ್ದ ಘಟನೆಯನ್ನು ಪ್ರಯಾಣಿಕರೊಬ್ಬರು ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡಿದ್ದರು. 

ಜಿ.ಟಿ ಮಾಲ್ ಎದುರು ಪ್ರತಿಭಟನಕಾರರು ಜಮಾಯಿಸಿದ್ದರು

‘ಬಟ್ಟೆಯಿಂದ ಅಳೆಯಬಾರದು’

‘ಮುಖ ನೋಡಿ ಬಟ್ಟೆ ನೋಡಿ ಯಾರನ್ನೂ ಅಳೆಯಬಾರದು. ಇದೊಂದು ಬ್ರಿಟಿಷರ‌ ಮನಃಸ್ಥಿತಿ. ಜಿ.ಟಿ ಮಾಲ್‌ ಮಾತ್ರವಲ್ಲದೇ ಬೇರೆ ಸ್ಥಳದಲ್ಲೂ ಈ ರೀತಿಯ ಘಟನೆಗಳು ನಡೆದಿವೆ. ಈ ರೀತಿಯ ವರ್ತನೆ ಖಂಡನೀಯ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯಿಸಿದ್ದಾರೆ. ‘ಮಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಹೋರಾಟಗಾರ ವಾಟಾಳ್ ನಾಗರಾಜ್‌ ಅವರು ಆಗ್ರಹಿಸಿದ್ದಾರೆ.

ಪ್ರಕರಣ ದಾಖಲಿಸಲು ರೈತರ ಆಗ್ರಹ

ರೈತನಿಗೆ ಪ್ರವೇಶ ಕೊಡದೆ ಅವಮಾನ ಮಾಡಿರುವುದು ಖಂಡನೀಯ. ರೈತರ ಅನ್ನ ತಿನ್ನುವ ಯಾರೇ ಆದರೂ ಇನ್ನು ಮುಂದೆ ಇಂತಹ ನಡವಳಿಕೆ ತೋರಿಸಿದರೆ ತಕ್ಕಪಾಠ ಕಲಿಸಬೇಕಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪಂಚೆಯಲ್ಲಿ ಬರುತ್ತಾರೆ. ಅವರಿಗೂ ಪ್ರವೇಶ ನೀಡದೆ ನಿಲ್ಲಿಸುತ್ತಾರೆಯೇ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಶ್ನಿಸಿದ್ದಾರೆ. ರೈತನ ಅನ್ನ ತಿನ್ನುವ ರೈತ ಬೆಳೆದ ಹಣ್ಣು ತರಕಾರಿ ಧಾನ್ಯಗಳನ್ನು  ಮಾರಾಟ ಮಾಡುವ ಈ ಮಾಲ್ ಮಾಲೀಕರು ಕೂಡಲೇ ಕ್ಷಮೆ ಕೇಳಬೇಕು. ಮಾಲ್‌ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಇಲ್ಲದಿದ್ದರೆ ಸಾವಿರಾರು ರೈತರು ಬಾರ್‌ಕೋಲಿನ ಜತೆಗೆ ಚಡ್ಡಿ ಧರಿಸಿ ಮೆರವಣಿಗೆಯಲ್ಲಿ ಬಂದು ಮಾಲ್‌ ಪ್ರವೇಶಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.