ADVERTISEMENT

ಕಲಾವಿದರಿಗಿಲ್ಲ ‘ಬೆಂಗಳೂರು ಹಬ್ಬ’ದ ಸಂಭ್ರಮ

ಐದು ತಿಂಗಳಾದರೂ ಹಣ ಪಾವತಿಸದ ಸಂಸ್ಕೃತಿ ಇಲಾಖೆ *ಕನ್ನಡ ಭವನಕ್ಕೆ ಅಲೆದಾಡುತ್ತಿರುವ ಕಲಾವಿದರು

ವರುಣ ಹೆಗಡೆ
Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಶಿವರಾಜ್‌ ತಂಗಡಗಿ
ಶಿವರಾಜ್‌ ತಂಗಡಗಿ   

ಬೆಂಗಳೂರು: ನಗರದಲ್ಲಿ ‘ನಮ್ಮ ಬೆಂಗಳೂರು ಹಬ್ಬ’ ನಡೆದು ಐದು ತಿಂಗಳು ಕಳೆದರೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಹಣ ಪಾವತಿಸಿಲ್ಲ. ಇದರಿಂದ ಕಂಗಾಲಾಗಿರುವ ಕಲಾವಿದರು ಕನ್ನಡ ಭವನಕ್ಕೆ ಅಲೆದಾಟ ನಡೆಸುತ್ತಿದ್ದಾರೆ.

ಬೆಂಗಳೂರಿನ ಸಂಸ್ಕೃತಿ, ಕಲೆ ಹಾಗೂ ಪರಂಪರೆಯನ್ನು ಇಲ್ಲಿ ನೆಲೆಸಿರುವವರಿಗೆ ಪರಿಚಯಿಸುವ ಉದ್ದೇಶದಿಂದ ಬೆಂಗಳೂರು ಹಬ್ಬ ನಡೆಸಲಾಗಿತ್ತು. ಬಿಜೆಪಿ ನೇತೃತ್ವದ ಕಳೆದ ರಾಜ್ಯ ಸರ್ಕಾರ 2023ರ ಮಾರ್ಚ್ 25 ಮತ್ತು 26ರಂದು ಕಬ್ಬನ್ ಉದ್ಯಾನ ಹಾಗೂ ವಿಧಾನಸೌಧದ ಆವರಣದಲ್ಲಿ ಹಮ್ಮಿಕೊಂಡಿತ್ತು. ವಿವಿಧ ಜಾನಪದ ಕಲಾ ತಂಡಗಳು, ಚಲನಚಿತ್ರ ಗಾಯಕರ ಬ್ಯಾಂಡ್‌ಗಳು, ರಿಯಾಲಿಟಿ ಶೋಗಳ ಗಾಯಕರು ಪ್ರದರ್ಶನ ನೀಡಿದ್ದರು. ಈ ಉತ್ಸವದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಕಲಾವಿದರಿಗೆ ಈವರೆಗೂ ಹಣ ಪಾವತಿಸಿಲ್ಲ.

ಎರಡು ದಿನಗಳ ಉತ್ಸವದ ನಿರ್ವಹಣೆಯನ್ನು ಇಲಾಖೆಯು ‘ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್‌’ ಸಂಸ್ಥೆಗೆ ನೀಡಿತ್ತು. ಸಂಸ್ಥೆಯು ಈ ಉತ್ಸವಕ್ಕೆ ಒಟ್ಟು ₹ 5.59 ಕೋಟಿ ಹಣ ವೆಚ್ಚವಾಗಿರುವುದಾಗಿ ದರಪಟ್ಟಿಯನ್ನು ಇಲಾಖೆಗೆ ಸಲ್ಲಿಸಿತ್ತು. ಕುರ್ಚಿ, ಟೇಬಲ್ ಸೇರಿ ಹಬ್ಬಕ್ಕೆ ಬೇಕಾದ ವಸ್ತುಗಳಿಗೆ ದುಪ್ಪಟ್ಟು ಹಣ ನಿಗದಿಪಡಿಸಲಾಗಿದೆ ಎಂದು ಕಲಾ ಸಂಘಟನೆಗಳು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದವು. ಇದರಿಂದಾಗಿ ಹಣ ಪಾವತಿಗೆ ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿತ್ತು. 

ADVERTISEMENT

ಕಲಾವಿದರು ಅಸಮಾಧಾನ: ಇಲಾಖೆಯು ಟೆಂಡರ್‌ ಕರೆಯದೆ ಸಂಸ್ಥೆಯೊಂದಕ್ಕೆ ಕಾರ್ಯಕ್ರಮ ನಿರ್ವಹಣೆಯ ಅವಕಾಶ ನೀಡಿರುವುದು ಸಹ ಕಲಾವಿದರ ಅಸಮಾಧಾನಕ್ಕೆ ಕಾರಣವಾಗಿತ್ತು. ದರಪಟ್ಟಿ ಪರಿಶೀಲಿಸದೆಯೇ ಇಲಾಖೆ ಅನುಮತಿ ನೀಡಿದೆ ಎಂದು ಕಲಾ ಸಂಘಟನೆಗಳು ದೂರಿದ್ದವು. ಹೀಗಾಗಿ, ಸರ್ಕಾರವು ಈಗ ತನಿಖೆಗೆ ಕ್ರಮವಹಿಸಿದೆ. ಇದರಿಂದಾಗಿ ಕಲಾವಿದರಿಗೆ ಹಣ ಪಾವತಿ ಇನ್ನಷ್ಟು ವಿಳಂಬವಾಗುವ ಸಾಧ್ಯತೆಯಿದೆ. 

‘ಇತ್ತೀಚಿನ ವರ್ಷಗಳಲ್ಲಿ ಕಲಾವಿದರಿಗೆ ಕಾರ್ಯಕ್ರಮಗಳು ಸಿಗುವುದೇ ಅಪರೂಪ. ಸಿಕ್ಕ ಅವಕಾಶಗಳಿಗೂ ಹಣ ಪಾವತಿಸದಿದ್ದರೆ ಕಲಾವಿದರು ಜೀವನ ನಿರ್ವಹಣೆಗೆ ಏನು ಮಾಡಬೇಕು? ಕನ್ನಡ ಭವನಕ್ಕೆ ತೆರಳಿ ಈ ಬಗ್ಗೆ ವಿಚಾರಿಸಿದರೆ ಸೂಕ್ತ ಸ್ಪಂದನೆಯೂ ದೊರೆಯುತ್ತಿಲ್ಲ’ ಎಂದು ಬೆಂಗಳೂರು ಹಬ್ಬದಲ್ಲಿ ಪ್ರದರ್ಶನ ನೀಡಿದ ಕಲಾ ಸಂಘಟನೆಯ ಮುಖ್ಯಸ್ಥರೊಬ್ಬರು ತಿಳಿಸಿದರು. 

‘ಈ ಉತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರವು ಅಧಿಕಾರಿಗಳನ್ನು ಶಿಕ್ಷಿಸುವ ಬದಲು ಕಲಾವಿದರಿಗೆ ಶಿಕ್ಷೆ ನೀಡುತ್ತಿದೆ. ಈಗಾಗಲೇ ಕಲಾ ಪ್ರಪಂಚ ಸಂಕಷ್ಟದಲ್ಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಆದಷ್ಟು ಬೇಗ ಸೂಕ್ತ ತನಿಖೆ ನಡೆಸಿ, ಕಲಾವಿದರಿಗೆ ಹಣ ಪಾವತಿಸಬೇಕು’ ಎಂದು ಕಲಾವಿದ ಜಯಸಿಂಹ ಎಸ್. ಆಗ್ರಹಿಸಿದರು. 

ಯಾರಿಗೆ ಏಷ್ಟು ಹಣ? 

ಬೆಂಗಳೂರು ಹಬ್ಬದಲ್ಲಿ ಹಲವು ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿದ್ದವು. ಸಂಸ್ಕೃತಿ ಇಲಾಖೆಯಡಿ ಪ್ರದರ್ಶನ ನೀಡಿದ ಕಲಾವಿದರು ಹಾಗೂ ತಂಡಗಳಿಗೆ ಒಟ್ಟು ₹ 25 ಲಕ್ಷ ಗಾಯಕಿ ಅನನ್ಯಾ ಭಟ್ ಮತ್ತು ತಂಡಕ್ಕೆ ₹ 9.50 ಲಕ್ಷ ನವೀನ್ ಸಜ್ಜು ಮತ್ತು ತಂಡಕ್ಕೆ ₹ 4.50 ಲಕ್ಷ ಜನಾರ್ದನ್ ಮತ್ತು ತಂಡಕ್ಕೆ ₹ 12.50 ಲಕ್ಷ ಸರಿಗಮಪ ರಿಯಾಲಿಟಿ ಶೋ ಗಾಯಕರಿಗೆ ₹ 15.50 ಲಕ್ಷ ಹಾಗೂ ಪ್ರಭಾತ್ ಕಲಾವಿದರಿಗೆ ₹ 2.75 ಲಕ್ಷ ಪಾವತಿಸಬೇಕೆಂದು ‘ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್‌’ ದರಪಟ್ಟಿ ನೀಡಿತ್ತು. ಕಲಾವಿದರಿಗೆ ನೀಡುವ ಧನದ ಬಗ್ಗೆಯೂ ಈಗ ಪರಿಶೀಲನೆ ನಡೆಸಲಾಗುತ್ತಿದೆ. 

ಹಿಂದಿನ ಸರ್ಕಾರ ನಡೆಸಿದ ಬೆಂಗಳೂರು ಹಬ್ಬದಲ್ಲಿ ಅವ್ಯವಹಾರ ನಡೆದಿದೆಯೆಂದು ದೂರುಗಳು ಬಂದಿದ್ದವು. ಆದ್ದರಿಂದ ಈ ಬಗ್ಗೆ ಪರಿಶೀಲನೆ ನಡೆಸಿ ದರ ಪಟ್ಟಿ ಪರಿಷ್ಕರಿಸಲಾಗುತ್ತಿದೆ.
-ಶಿವರಾಜ್ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.